Friday, April 11, 2025
Google search engine

Homeರಾಜ್ಯಸುದ್ದಿಜಾಲಪರಿಸರ ಸಂರಕ್ಷಣೆ ಪ್ರತಿಯೊಬ್ಬರ ಹೊಣೆ : ಸಾಹಿತಿ ಬನ್ನೂರು ರಾಜು 

ಪರಿಸರ ಸಂರಕ್ಷಣೆ ಪ್ರತಿಯೊಬ್ಬರ ಹೊಣೆ : ಸಾಹಿತಿ ಬನ್ನೂರು ರಾಜು 

ಹುಣಸೂರು: ಪ್ರಸ್ತುತ ದಿನಗಳ ಲ್ಲಿ ಪ್ರತಿಯೊಬ್ಬರೂ ಅದರಲ್ಲೂ ವಿಶೇಷವಾಗಿ ವಿದ್ಯಾರ್ಥಿಗಳು ಹಾಗು ಯುವಜನರು ಪರಿಸರದ  ಮಹತ್ವ ತಿಳಿದು ತಾವು ಜೀವಿಸುತ್ತಿರುವ ಪರಿಸರಕ್ಕೆ ಆಗುತ್ತಿರುವ ಹಾನಿಯನ್ನು ಅರಿತು ಅದರ ಸಂರಕ್ಷಣೆಗೆ ಮುಂದಾಗಬೇಕೆಂದು ಪತ್ರಕರ್ತರೂ ಆದ ಸಾಹಿತಿ ಬನ್ನೂರು ಕೆ.ರಾಜು ಹೇಳಿದರು.

  ತಾಲ್ಲೂಕಿನ ಮನುಗನಹಳ್ಳಿಯ ಸರ್ಕಾರಿ ಪ್ರೌಡಶಾಲೆ, ರಾಷ್ಟ್ರೀಯ ಹಸಿರುಪಡೆ ಇಕೋ ಕ್ಲಬ್ ಮತ್ತು ಮೈಸೂರು ನಗರದ ಹಿರಣ್ಮಯಿ ಪ್ರತಿಷ್ಠಾನ ಹಾಗೂ ಕಾವೇರಿ ಬಳಗ ಸಂಯುಕ್ತವಾಗಿ ಶಾಲೆಯ ಆವರಣದಲ್ಲಿ ಆಯೋಜಿಸಿದ್ದ ವಿಶ್ವಪರಿಸರ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡುತ್ತಿದ್ದ ಅವರು, ಮಾನವ ಪರಿಸರದ ಶಿಶುವಾಗಿದ್ದು ಎಲ್ಲರಿಗೂ, ಎಲ್ಲಕ್ಕೂ ಜೀವಧಾತು ವಾಗಿರುವ ಪರಿಸರವಿಲ್ಲದೆ ಮಾನವನ ಅಸ್ತಿತ್ವವವೇ ಇಲ್ಲವಾದ್ದರಿಂದ ಈ ನಿಟ್ಟಿನಲ್ಲಿ ಪ್ರತಿಯೊಬ್ಬರಿಗೂ ಪರಿಸರದ ಅವಶ್ಯಕತೆ, ಅನಿವಾರ್ಯತೆ ಎರಡೂ ಇರುವುದರಿಂದ ನಾವಿರುವ ಪರಿಸರವನ್ನು ಪರಿಶುದ್ಧವಾಗಿ ಉಳಿಸಿ ಕೊಳ್ಳುವ ಜವಾಬ್ದಾರಿ ಪ್ರತಿಯೊಬ್ಬರದ್ದೂ ಆಗಿದ್ದು ಪರಿಸರದ ವಿಷಯದಲ್ಲಿ ಪ್ರಾಮಾಣಿಕತೆ ಇರಬೇಕೆಂದರು.  

  ಪರಿಸರ ಉಳಿಸುವ ಪ್ರಜ್ಞೆ ಮತ್ತು ಕಾಳಜಿಯಿಂದ 1972 ರಲ್ಲಿ ವಿಶ್ವಸಂಸ್ಥೆಯ ಘೋಷಣೆಯ ನಂತರ, 1973 ಜೂನ್ 5 ರಿಂದ ಪ್ರತಿವರ್ಷ ಪ್ರಪಂಚದಾದ್ಯಂತ ಬಹುತೇಕ ದೇಶಗಳಲ್ಲಿ ವಿಶ್ವ ಪರಿಸರ ದಿನವನ್ನು ಆಚರಿಸಿಕೊಂಡು ಬರಲಾಗುತ್ತಿದೆ. ಈ ದಿನದ ಉದ್ದೇಶವೆಂದರೆ ಎಲ್ಲರಿಗೂ ಪರಿಸರ ಸಂಬಂಧಿತ ವಿಷಯಗಳು, ವಿಚಾರಗಳು ತಿಳಿಯಬೇಕೆಂಬುದೇ ಆಗಿದೆ. ಗ್ರಾಮ ಮಟ್ಟದಿಂದ ಹಿಡಿದು ಅಂತರಾಷ್ಟ್ರೀಯ ಮಟ್ಟದಲ್ಲಿ ಪರಿಸರದ ಸ್ಥಿತಿ ಗತಿಯ ಬಗ್ಗೆ ಪ್ರಜ್ಞೆ ಮೂಡಿಸಿ ಜನರನ್ನು ಜಾಗೃತಿಗೊಳಿಸುವುದು, ಸ್ವಚ್ಛ ಪರಿಸರದ ಅಗತ್ಯತೆಯನ್ನು ಅರಿಯುವುದು ಮತ್ತು ಅರಿವು ಮೂಡಿಸುವುದಾಗಿದೆ. ಪ್ರಸ್ತುತ ಜಗತ್ತಿನಲ್ಲಿ ಆಧುನಿಕತೆ, ನಗರೀಕರಣ, ಕೈಗಾರೀಕರಣ , ವಿಜ್ಞಾನ, ತಂತ್ರಜ್ಞಾನದ‌ ಅಭಿವೃದ್ಧಿ ಎಂಬ ಹತ್ತು ಹಲವು ಕಾರಣಗಳಿಂದಲೂ ಪರಿಸರಕ್ಕೆ ದಕ್ಕೆಯಾಗಿದೆ.ಇಂದು ನಮ್ಮ ಪರಿಸರವು ಮಾಲಿನ್ಯದ ಗೂಡಾಗಿದ್ದು ವಾಯುಮಾಲಿನ್ಯ, ಜಲ‌ಮಾಲಿನ್ಯ, ಭೂಮಾಲಿನ್ಯ, ಶಬ್ದಮಾಲಿನ್ಯ, ಅಧಿಕ ಉಷ್ಣಾಂಶ, ಅರಣ್ಯ ನಾಶ, ಜನಸಂಖ್ಯೆ ಹೆಚ್ಚಳ ಹೀಗೆ ಒಂದೇ, ಎರಡೇ ಅಭಿವೃದ್ಧಿ ಹೆಸರಿನಲ್ಲಿ ನಾವು ಪರಿಸರದ ಮೇಲೆ ಮಾಡಿರುವ ದೌರ್ಜನ್ಯ. ಅದರ ಪರಿಣಾಮವಾಗಿ ಇಂದು ಹೃದಯ ಮತ್ತು ಉಸಿರಾಟ ಸಂಬಂಧಿ ತೊಂದರೆಗಳು ಹಾಗು ಅಪೌಷ್ಟಿಕತೆಯಂತಹ  ಅನೇಕ ದುಷ್ಪರಿಣಾಮಗಳನ್ನು ನಾವು ಎದುರಿಸುತ್ತಿದ್ದೇವೆ. ಹಾಗಾಗಿ ಇದೆಲ್ಲದರಿಂದ ಪಾರಾಗಲು ಸ್ವಚ್ಛ ಪರಿಸರವನ್ನು ನಾವು ಉಳಿಸಿ ಕೊಳ್ಳಲೇಬೇಕಾಗಿದೆ ಎಂದು ಹೇಳಿದರು.

   ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಲೆಯ ಮುಖ್ಯ ಶಿಕ್ಷಕಿ ಸಿ. ಎನ್. ಗೀತಾ ಅವರು, ಪರಿಸರ ಜಾಗೃತಿ ಮತ್ತು ಅದನ್ನು ಸಂರಕ್ಷಿಸುವ ಕೆಲಸ ರಾಷ್ಟ್ರ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಮಾಡುವುದಕ್ಕಿಂತ ಹೆಚ್ಚಾಗಿ, ಮೊದಲು ನಮ್ಮ ಕಾಲ ಬುಡದಲ್ಲೇ ನಮ್ಮ ಸುತ್ತಲೂ ಇರುವ ಪರಿಸರವನ್ನು ಸ್ವಚ್ಛಗೊಳಿಸುವ ಮತ್ತು ಗಿಡಮರ ನೆಟ್ಟು ಪರಿಸರವನ್ನು ಹಸಿರಾಗಿಸುವ, ಉಸಿರಾಗಿಸುವ ಕಾರ್ಯ ಮಾಡಬೇಕು. ಮೊದಲು ನಮ್ಮ ಮನೆ. ನಮ್ಮ ಊರು ಎಲ್ಲಕ್ಕಿಂತ  ಹೆಚ್ಚಾಗಿ ನಮ್ಮ ಶಾಲೆ ಎಂಬ ಅಭಿಮಾನದಿಂದ ಪ್ರತಿಯೊಂದು ಶಾಲೆಗಳಲ್ಲೂ ವಿದ್ಯಾರ್ಥಿಗಳಿಂದ  ಪರಿಸರ ಜಾಗೃತಿ ಅಭಿಯಾನ ಆರಂಭವಾದಲ್ಲಿ ಹಂತ  ಹಂತವಾಗಿ ಅಂತರಾಷ್ಟ್ರೀಯ ವಾಗಿ ಪರಿಸರ ಉಳಿಸುವ ಕೆಲಸವಾಗುತ್ತದೆಂದ ಅವರು ಪರಿಸರವೂ ಸೇರಿದಂತೆ ನಮ್ಮ ಶಾಲೆ ಎಲ್ಲಾ ವಿಷಯಗಳಲ್ಲೂ ಇತರೇ ಶಾಲೆಗಳಿಗೆ ಮಾದರಿಯಾಗಿದ್ದು ಇನ್ನಷ್ಟು ಸಾಧನೆ ಮಾಡಬೇಕಾದರೆ ಇದುವರೆಗೆ ಸಹಕಾರ ನೀಡುತ್ತಾ ಬಂದಿರುವ ನಮ್ಮ ಸಹ ಶಿಕ್ಷಕರು, ವಿದ್ಯಾರ್ಥಿಗಳು, ಪೋಷಕರು, ಗ್ರಾಮಸ್ಥರು ಇನ್ನೂ ಹೆಚ್ಚಿನ ಸಹಕಾರ ನೀಡಬೇಕೆಂದು ಮನವಿ ಮಾಡಿದರು.

   ಪ್ರಸ್ತುತ ಸಾಲಿನಲ್ಲಿ ನಡೆದ ಎಸ್.ಎಸ್.ಎಲ್.ಸಿ  ಪರೀಕ್ಷೆಯಲ್ಲಿ ಅತ್ಯುನ್ನತ ಸ್ಥಾನ ಗಳಿಸಿ ಶಾಲೆಗೆ ಕೀರ್ತಿ ತಂದಿರುವ ಸಿ.ಆರ್.ಶ್ವೇತಾ, ಎಂ.ಲೀಲಾವತಿ,  ಅಂಜಲಿ, ಎಂ.ಲೋಕೇಶ್, ಮಹಾದೇವಿ ಸೇರಿದಂತೆ ಐವರು ವಿದ್ಯಾರ್ಥಿ ಗಳಿಗೆ ತಲಾ ಒಂದು ಸಾವಿರ ಪ್ರೋತ್ಸಾಹ ಧನದೊಡನೆ ಪ್ರತಿಭಾ ಪುರಸ್ಕಾರ ನೀಡಿ ವಿಶ್ರಾಂತ ಎಂಜಿನಿಯರ್ ಮನುಗನಹಳ್ಳಿ ಎಸ್. ಗೋವಿಂದೇಗೌಡರು  ಅಭಿನಂದಿಸಿದರು. ಹಾಗೆಯೇ ವಿಶ್ವ ಪರಿಸರ ದಿನದ ಅಂಗವಾಗಿ ಏರ್ಪಡಿಸಲಾಗಿದ್ದ ಚಿತ್ರಕಲಾ ಸ್ಪರ್ಧೆ ಸೇರಿದಂತೆ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೂ ಬಹುಮಾನ ವಿತರಿಸಿ  ವೇದಿಕೆಯಲ್ಲಿ ಗೌರವಿಸಲಾಯಿತು. ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಖ್ಯಾತ ಸಂಖ್ಯಾ ಶಾಸ್ತ್ರಜ್ಞ  ಎಸ್. ಜೆ. ಸೀತಾರಾಮ್, ಕಲಾವಿದೆ ಡಾ. ಜಮುನಾರಾಣಿ ಮಿರ್ಲೆ, ಕವಿ ಎಂ.ಮುತ್ತುಸ್ವಾಮಿ ಮತ್ತು ಹಿರಣ್ಮಯಿ ಪ್ರತಿಷ್ಠಾನದ ಅಧ್ಯಕ್ಷ ಎ.ಸಂಗಪ್ಪ ಮುಖ್ಯ ಅತಿಥಿಗಳಾಗಿ ಮಾತನಾಡಿ ವಿದ್ಯಾರ್ಥಿಗಳಿಗೆ ಹಿತವಚನ ಹೇಳಿದರು. ಶಿಕ್ಷಕಿಯರಾದ ಎಸ್. ಎಸ್. ಚಂದ್ರಕಲಾ, ಹೆಚ್. ಶಶಿಕಲಾ, ಚೇತನಾ, ಎಂ.ಜಿ.ಪುಷ್ಪಾ, ಜೆ. ವಸಂತ ಕುಮಾರಿ, ಬೆನಜೀರ್ ಶರೀಫ್ ಹಾಗು ಆರ್. ಜಿ. ರವೀಶ್ ಉಪಸ್ಥಿತರಿದ್ದರು. ಅತಿಥಿ ಗಣ್ಯರು ಗಿಡಕ್ಕೆ ನೀರೆರೆಯುವು ದರ ಮೂಲಕ ಪ್ರಾರಂಭವಾದ ಕಾರ್ಯಕ್ರಮದಲ್ಲಿ ಶಿಕ್ಷಕಿಯರಾ ದ  ಜೆ. ವಸಂತ ಕುಮಾರಿ ಸ್ವಾಗತಿಸಿದರೆ ಎಂ. ಜಿ. ಪುಷ್ಪಾ ವಂದನಾರ್ಪಣೆ ಮಾಡಿದರು. ಇಡೀ ಕಾರ್ಯಕ್ರಮವನ್ನು ಶಿಕ್ಷಕಿ ಹೆಚ್. ಶಶಿಕಲಾ ಅಚ್ಚುಕಟ್ಟಾಗಿ ನಿರೂಪಿಸಿದರು.

RELATED ARTICLES
- Advertisment -
Google search engine

Most Popular