Friday, April 18, 2025
Google search engine

Homeರಾಜ್ಯಪರಿಸರ ಸೂಕ್ಷ್ಮ ವಲಯ (ESZ) ಘೋಷಣೆಯಿಂದ ಸ್ಥಳೀಯರಿಗೆ ತೊಡಕಿಲ್ಲ: ಈಶ್ವರ ಖಂಡ್ರೆ ಸ್ಪಷ್ಟನೆ

ಪರಿಸರ ಸೂಕ್ಷ್ಮ ವಲಯ (ESZ) ಘೋಷಣೆಯಿಂದ ಸ್ಥಳೀಯರಿಗೆ ತೊಡಕಿಲ್ಲ: ಈಶ್ವರ ಖಂಡ್ರೆ ಸ್ಪಷ್ಟನೆ

ಬೆಂಗಳೂರು: ಸಂಪುಟ ಉಪಸಮಿತಿ ರಾಜ್ಯದ 6 ವನ್ಯಜೀವಿಧಾಮ ಮತ್ತು ರಾಷ್ಟ್ರೀಯ ಉದ್ಯಾನಗಳ ವ್ಯಾಪ್ತಿಯಲ್ಲಿ ಕನಿಷ್ಠ 1 ಕಿ.ಮೀ. ಪರಿಸರ ಸೂಕ್ಷ್ಮ ವಲಯ (ESZ) ಘೋಷಣೆಯಿಂದ ಸ್ಥಳೀಯರಿಗಾಗಲೀ, ರೈತರಿಗಾಗಲೀ ಯಾವುದೇ ತೊಂದರೆ ಆಗುವುದಿಲ್ಲ ಎಂದು ಅರಣ್ಯ ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ಸ್ಪಷ್ಟಪಡಿಸಿದ್ದಾರೆ.

ಸಾಮಾಜಿಕ ತಾಣಗಳಲ್ಲಿ ಹಲವರು ಪರಿಸರ ಸೂಕ್ಷ್ಮಪ್ರದೇಶ ಘೋಷಣೆ ಸಂಬಂಧ ಆತಂಕ ವ್ಯಕ್ತಪಡಿಸುತ್ತಿರುವ ಹಿನ್ನೆಲೆಯಲ್ಲಿ ಸ್ಪಷ್ಟನೆ ನೀಡಿರುವ ಅವರು, ರಾಜ್ಯ ಸರ್ಕಾರ ರಾಷ್ಟ್ರೀಯ ಉದ್ಯಾನಗಳು ಮತ್ತು ವನ್ಯಮೃಗ ಧಾಮಗಳನ್ನು ಪರಿಸರ ಸೂಕ್ಷ್ಮ ಪ್ರದೇಶ -Eco Sensitive Zones ಎಂದು ಘೋಷಿಸಬೇಕು ಎಂದು ಘನ ಸುಪ್ರೀಂಕೋರ್ಟ್ ರಿಟ್ ಅರ್ಜಿ ಸಂಖ್ಯೆ 202/1995 – ಗೋದವರ್ಮನ್ Vs ಭಾರತ ಸರ್ಕಾರ ಪ್ರಕರಣಕ್ಕೆ ಸಂಬಂಧಿಸಿದಂತೆ ದಿನಾಂಕ 3.06.2022ರಂದು ಸ್ಪಷ್ಟ ನಿರ್ದೇಶನ ನೀಡಿದೆ.

ಪ್ರತಿಯೊಂದು ಸಂರಕ್ಷಿತ ಕಾನನ ಅದು ರಾಷ್ಟ್ರೀಯ ಉದ್ಯಾನವಾಗಿರಲಿ ಅಥವಾ ವನ್ಯಜೀವಿಧಾಮವಾಗಿರಲಿ ಅಂತಹ ಸಂರಕ್ಷಿತ ಅರಣ್ಯದ ನಿರ್ದರಿತ ಅರಣ್ಯಗಡಿಯಿಂದ ಕನಿಷ್ಠ ಒಂದು ಕಿಲೋಮೀಟರ್ ಪಾಸಲೆಯ ಪರಿಸರ ಸೂಕ್ಷ್ಮ ಪ್ರದೇಶ ಹೊಂದಿರಲೇಬೇಕು, ಅಂತಹ ಸಂರಕ್ಷಿತ ಅರಣ್ಯದಲ್ಲಿ ಸೂಚಿತ ಮತ್ತು ನಿರ್ಬಂಧಿತ ಚಟುವಟಿಕೆ ನಡೆಸುವ ಕುರಿತಂತೆ 2011ರ ಫೆಬ್ರವರಿ 9ರಂದು ಹೊರಡಿಸಿರುವ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸಬೇಕಾಗುತ್ತದೆ.

21.11.2019ರ ಸರ್ಕಾರದ ಅಧಿಸೂಚನೆಯ ಕಲಂ 38ರಂತೆ ಪರಿಸರ ಸೂಕ್ಷ್ಮ ವಲಯ ಪ್ರಸ್ತಾವನೆಗಳಿಗೆ ರಾಜ್ಯ ಸಚಿವ ಸಂಪುಟದ ಅನುಮೋದನೆ ಅವಶ್ಯಕವಾಗಿದೆ. ಹೀಗಾಗಿ ಉಪ ಸಮಿತಿ ರಚಿಸಲಾಗಿದ್ದು, ನನ್ನ ಅಧ್ಯಕ್ಷತೆಯಲ್ಲಿ ಮೊನ್ನೆ ನಡೆದ ಸಭೆಯಲ್ಲಿ ಕಪ್ಪತ್ತಗುಡ್ಡ, ಬುಕ್ಕಾಪಟ್ಟಣ, ಕಾಮಸಂದ್ರ, ನಾಗರಹೊಳೆ, ಕಾವೇರಿ ವಿಸ್ತರಿತ ವನ್ಯಜೀವಿ ಧಾಮ ಸೇರಿದಂತೆ 6 ಅರಣ್ಯ ಪ್ರದೇಶಗಳಲ್ಲಿ ಪರಿಸರ ಸೂಕ್ಷ್ಮ ಪ್ರದೇಶ ಘೋಷಣೆ ಸಂಬಂಧ ಸಂಪುಟಕ್ಕೆ ಶಿಫಾರಸು ಮಾಡಲು ತಾತ್ವಿಕ ಒಪ್ಪಿಗೆ ನೀಡಲಾಗಿದೆ.

ಭಾರತ ಸರ್ಕಾರ 2011ರಲ್ಲಿ ಹೊರಡಿಸಿರುವ ಮಾರ್ಗಸೂಚಿಗಳನ್ವಯ ಮತ್ತು ಕೇಂದ್ರ ಅರಣ್ಯ, ಪರಿಸರ ಸಚಿವಾಲಯದ ಮಾರ್ಗಸೂಚಿಗಳನ್ವಯ ಈ ವಲಯದಲ್ಲಿ ಉತ್ತೇಜಕ ಚಟುವಟಿಕೆ, ನಿರ್ಬಂಧಿತ ಮತ್ತು ನಿಷೇಧಿತ ಚಟುವಟಿಕೆ ಎಂದು ವರ್ಗೀಕರಿಸಲಾಗಿದೆ ಎಂದು ತಿಳಿಸಿದ್ದಾರೆ.

ಉತ್ತೇಜಕ ಚಟುವಟಿಕೆಗಳಲ್ಲಿ – ಹಾಲಿ ಇರುವ ಕೃಷಿ, ಸಾವಯವ ಕೃಷಿ, ತೋಟಗಾರಿಕೆ, ಸೌರ ಫಲಕ ಅಳವಡಿಕೆಯಂತಹ ಚಟುವಟಿಕೆಗೆ ಯಾವುದೇ ನಿರ್ಬಂಧ ಇರುವುದಿಲ್ಲ.

ನಿರ್ಬಂಧಿತ ಚಟುವಟಿಕೆಗಳಲ್ಲಿ – ಪರಿಸರ ಪ್ರವಾಸೋದ್ಯಮ, ಹೋಂಸ್ಟೇ, ರೆಸಾರ್ಟ್, ಹೊಟೆಲ್, ಶಾಲೆ, ಆಸ್ಪತ್ರೆ, ಸರ್ಕಾರಿ ಕಟ್ಟಡ, ಕಟ್ಟಡ ನಿರ್ಮಾಣ, ವಿದ್ಯುತ್ ಕೇಬಲ್ ಅಳವಡಿಕೆ, ಮೂಲಸೌಕರ್ಯ ಇತ್ಯಾದಿ ಬರುತ್ತದೆ. ಇದಕ್ಕೆ ಪ್ರಾದೇಶಿಕ ಆಯುಕ್ತರ ಸಮಿತಿಗೆ ಪ್ರಸ್ತಾವನೆ ಸಲ್ಲಿಸಬೇಕಾಗುತ್ತದೆ. ಅವರು ಅನುಮತಿ ನೀಡುವ ಬಗ್ಗೆ ನಿರ್ಧಾರ ಕೈಗೊಳ್ಳುತ್ತಾರೆ.

ನಿಷೇಧಿತ ಚಟುವಟಿಕೆಗಳಲ್ಲಿ – ಅಪಾಯಕಾರಿ ತ್ಯಾಜ್ಯ ಹೊರಹಾಕುವ, ಶಬ್ದ, ವಾಯು ಮಾಲಿನ್ಯ ಉಂಟು ಮಾಡುವ ಕೈಗಾರಿಕೆ. ವಾಣಿಜ್ಯ ಗಣಿಗಾರಿಕೆ, ಸಾ ಮಿಲ್ ಸ್ಥಾಪನೆ, ವಾಣಿಜ್ಯ ಉದ್ದೇಶದ ಉರುವಲು ಸಂಗ್ರಹ ಇತ್ಯಾದಿ ಬರುತ್ತದೆ. ಇದಕ್ಕೆ ಅವಕಾಶ ಇರುವುದಿಲ್ಲ.

ಈ ಎಲ್ಲ ಅಂಶ ಗಮನದಲ್ಲಿಟ್ಟುಕೊಂಡು ಉಪ ಸಮಿತಿ ಸಭೆಯಲ್ಲಿ 6 ಅರಣ್ಯಪ್ರದೇಶಗಳಲ್ಲಿ ಪರಿಸರ ಸೂಕ್ಷ್ಮ ಪ್ರದೇಶ ಘೋಷಣೆಯ ಸಂಬಂಧ ಚರ್ಚಿಸಿ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡುವ ಸಂಬಂಧ ಸಚಿವ ಸಂಪುಟದ ಸಭೆಗೆ ಸಲ್ಲಿಸಲು ತಾತ್ವಿಕ ಅನುಮೋದನೆ ನೀಡಲಾಗಿದೆ. ಕೆಲವು ಖಾಸಗಿ ಭೂಮಿಯೂ ಸಹ ಪರಿಸರ ಸೂಕ್ಷ್ಮ ಪ್ರದೇಶದ ವ್ಯಾಪ್ತಿಗೆ ಒಳಪಡುತ್ತದೆ. ಆದರೆ ಇಲ್ಲಿ ಕೃಷಿ ಚಟುವಟಿಕೆ ನಡೆಸಲು ಯಾವುದೇ ನಿರ್ಬಂಧ ಇರುವುದಿಲ್ಲ.

41 ಸಂರಕ್ಷಿತ ಪ್ರದೇಶಗಳ ಪೈಕಿ 29 ಈಗಾಗಲೇ ಪರಿಸರ ಸೂಕ್ಷ್ಮ ಪ್ರದೇಶ ಎಂದು ಘೋಷಿಸಲಾಗಿದೆ. ಜೊತೆಗೆ ಈಗ ತಾತ್ವಿಕ ಸಮ್ಮತಿ ಸೂಚಿಸಲಾಗಿರುವ ಅರಣ್ಯ ಪ್ರದೇಶದಲ್ಲಿ ಪರಿಸರ ಸೂಕ್ಷ್ಮ ಪ್ರದೇಶದ ವ್ಯಾಪ್ತಿ ಕನಿಷ್ಠ 1 ಕಿ.ಮೀ.ನಿಂದ 23.6 ಕಿಲೋಮೀಟರ್ ವರೆಗೆ ಇರುತ್ತದೆ ಎಂದು ತಿಳಿಸಿದ್ದಾರೆ.

RELATED ARTICLES
- Advertisment -
Google search engine

Most Popular