Friday, June 12, 2026
Google search engine

Homeಅಪರಾಧಕಾನೂನುಬಾಲಕಾರ್ಮಿಕ ಪದ್ಧತಿ ನಿರ್ಮೂಲನೆ ನಮ್ಮೆಲ್ಲರ ಆದ್ಯ ಕರ್ತವ್ಯ – ನಾಗರಾಜು ಎಸ್. ಅಂಕಸದೊಡ್ಡಿ

ಬಾಲಕಾರ್ಮಿಕ ಪದ್ಧತಿ ನಿರ್ಮೂಲನೆ ನಮ್ಮೆಲ್ಲರ ಆದ್ಯ ಕರ್ತವ್ಯ – ನಾಗರಾಜು ಎಸ್. ಅಂಕಸದೊಡ್ಡಿ

ಮೈಸೂರು: ಬಾಲಕಾರ್ಮಿಕ ಪದ್ಧತಿಯ ವಿರುದ್ಧ ಸಮಾಜದಲ್ಲಿ ಜಾಗೃತಿ ಮೂಡಿಸುವುದು ಮತ್ತು ಮಕ್ಕಳ ಹಕ್ಕುಗಳನ್ನು ರಕ್ಷಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶರಾದ ನಾಗರಾಜು ಎಸ್. ಅಂಕಸದೊಡ್ಡಿ ಅವರು ಹೇಳಿದರು.

ಇಂದು  ಜಿಲ್ಲಾಡಳಿತ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಪಂಚಾಯತ್ ಕಾರ್ಮಿಕ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ), ಪೊಲೀಸ್ ಇಲಾಖೆ ಸಮಾಜ ಕಲ್ಯಾಣ ಇಲಾಖೆ, ಜಿಲ್ಲಾ ಬಾಲ ಕಾರ್ಮಿಕ ಯೋಜನಾ ಸೊಸೈಟಿ ಮಕ್ಕಳ ಸಹಾಯವಾಣಿ 1098 ಹಾಗೂ ಸ್ವಯಂಸೇವಾ ಸಂಸ್ಥೆಗಳು, ಮೈಸೂರು ಇವರುಗಳ ಸಂಯುಕ್ತಾಶ್ರಯದಲ್ಲಿ ಮಹಾರಾಜ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಕೃಷ್ಣರಾಜ ಸಭಾಮಂಟಪದಲ್ಲಿ  ವಿಶ್ವ ಬಾಲ ಕಾರ್ಮಿಕ ಪದ್ದತಿ ವಿರೋಧಿ ದಿನ ಆಚರಣೆಯ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

​ಸಮಾಜದಲ್ಲಿ ಇಂದಿಗೂ ನಡೆಯುತ್ತಿರುವ ಬಾಲಕಾರ್ಮಿಕ ಪದ್ಧತಿಯು   ಸಮಾಜದ ಕಣ್ಣಿಗೆ ಬೀಳದಂತೆ ಎಲ್ಲೋ ಒಂದು ಕಡೆ ಬಾಲಕಾರ್ಮಿಕರನ್ನು ಬಲವಂತವಾಗಿ ದುಡಿಸಿಕೊಳ್ಳಲಾಗುತ್ತಿದೆ. ಆದರೆ ಇಂತಹ ವಿಷಯಗಳು ಯಾವುದೋ ಒಂದು ಮೂಲೆಯಿಂದ ನಮ್ಮ ಗಮನಕ್ಕೆ ಬಂದೇ ಬರುತ್ತವೆ. ಅಂತಹ ಸಂದರ್ಭಗಳಲ್ಲಿ ಸಾರ್ವಜನಿಕರು ತಕ್ಷಣವೇ ಸಂಬಂಧಪಟ್ಟ ಇಲಾಖೆಗೆ ಮಾಹಿತಿ ನೀಡಬೇಕು. ಇದರಿಂದ ಆ ಮಗುವಿಗೆ ಸುಂದರ ಹಾಗೂ ಉಜ್ವಲ ಭವಿಷ್ಯವನ್ನು ರೂಪಿಸಿಕೊಳ್ಳಲು ಸಹಾಯವಾಗುತ್ತದೆ ಎಂದು ತಿಳಿಸಿದರು.

​ಮಕ್ಕಳು ದೇಶದ ಭವಿಷ್ಯ ಅವರ ಕೈಯಲ್ಲಿ ಪುಸ್ತಕ ಇರಬೇಕೇ ಹೊರತು ಉಪಕರಣಗಳಲ್ಲ ​ಬಾಲಕಾರ್ಮಿಕ ಪದ್ಧತಿಗೆ ಕಾರಣಗಳು ಮತ್ತು ಪರಿಣಾಮಗಳು ​ಮಕ್ಕಳು ಶಿಕ್ಷಣವನ್ನು ಪಡೆದು ಸಮಾಜದ ಮುಖ್ಯವಾಹಿನಿಗೆ ಬರಬೇಕು. ಆದರೆ ಇಂದಿನ ಪರಿಸ್ಥಿತಿಯಲ್ಲಿ ಅನೇಕ ಮಕ್ಕಳು ಶಿಕ್ಷಣದಿಂದ ವಂಚಿತರಾಗಿ ದುಡಿಮೆಯಲ್ಲಿ ತೊಡಗಿರುವುದು ವಿಷಾದನೀಯ ಎಂದು ಹೇಳಿದರು.

​ಬಡತನ ಮತ್ತು ಅಜ್ಞಾನ, ​ಸಾಮಾಜಿಕ ಅಸಮಾನತೆ, ಶಿಕ್ಷಣದ ಕೊರತೆ ಬಾಲಕಾರ್ಮಿಕ ಪದ್ಧತಿಯು ಮಕ್ಕಳ ಬಾಲ್ಯವನ್ನು ಕಸಿದುಕೊಳ್ಳುವುದಷ್ಟೇ ಅಲ್ಲದೆ, ಅವರ ದೈಹಿಕ, ಮಾನಸಿಕ ಮತ್ತು ಬೌದ್ಧಿಕ ಬೆಳವಣಿಗೆಯ ಮೇಲೆಯೂ ಗಂಭೀರ ಪರಿಣಾಮ ಬೀರುತ್ತದೆ. ಕೇವಲ ಕಾನೂನಿನಿಂದ ಬದಲಾವಣೆ ಸಾಧ್ಯವಿಲ್ಲ ಭಾರತದ ಸಂವಿಧಾನವು ಮಕ್ಕಳ ಹಕ್ಕುಗಳನ್ನು ಸಂರಕ್ಷಿಸಿದೆ. 14 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳನ್ನು ಅಪಾಯಕಾರಿ ಹಾಗೂ ವಾಣಿಜ್ಯ ಚಟುವಟಿಕೆಗಳಲ್ಲಿ ದುಡಿಸುವುದನ್ನು ಕಾನೂನು ಕಟ್ಟುನಿಟ್ಟಾಗಿ ನಿಷೇಧಿಸಿದೆ.  ಕೇವಲ ಕಾನೂನುಗಳಿಂದಲೇ ಈ ಸಮಸ್ಯೆಗೆ ಸಂಪೂರ್ಣ ಪರಿಹಾರ ಸಿಗುವುದಿಲ್ಲ. ಸಮಾಜದ ಪ್ರತಿಯೊಬ್ಬ ನಾಗರಿಕನೂ ತನ್ನ ಜವಾಬ್ದಾರಿಯನ್ನು ಅರಿತುಕೊಂಡು ಶ್ರಮಿಸಿದಾಗ ಮಾತ್ರ ಈ ಪಿಡುಗನ್ನು ತೊಲಗಿಸಲು ಸಾಧ್ಯ ಎಂದು ಹೇಳಿದರು.

ಸಹಾಯಕ ಕಾರ್ಮಿಕ ಆಯುಕ್ತರಾದ ಲಲಿತಾಬಾಯಿ ಅವರು ಮಾತನಾಡಿ ಸಮಾಜದಲ್ಲಿರುವ ಎಲ್ಲಾ ಅನಿಷ್ಟ ಪದ್ಧತಿಗಳು ಮತ್ತು ತಾರತಮ್ಯಗಳು ತೊಲಗಬೇಕಾದರೆ ಅದಕ್ಕೆ ಇರುವ ಏಕೈಕ ಮತ್ತು ಮುಖ್ಯ ಅಸ್ತ್ರ ಶಿಕ್ಷಣ, ಪ್ರತಿಯೊಬ್ಬರ ಜೀವನದಲ್ಲೂ ಶಿಕ್ಷಣ ಮತ್ತು ಸಮಯದ ನಿರ್ವಹಣೆ ಮುಖ್ಯ . ​ಮಹನೀಯರ ಸಾಧನೆಗೆ ಶಿಕ್ಷಣವೇ ಅಡಿಪಾಯ. ಡಾ. ಬಿ.ಆರ್. ಅಂಬೇಡ್ಕರ್ ಅವರ ಶಿಕ್ಷಣ ಕೊಡಿ, ಸಂಘಟಿತರಾಗಿ, ಹೋರಾಡಿ  ಎಂಬ ಆಶಯವನ್ನು ತಿಳಿದು ಕೊಳ್ಳಬೇಕು ಎಂದರು.

ಸ್ವಾಮಿ ವಿವೇಕಾನಂದ, ಸರ್ ಎಂ. ವಿಶ್ವೇಶ್ವರಯ್ಯ, ಡಾ. ಎಪಿಜೆ ಅಬ್ದುಲ್ ಕಲಾಂ, ಡಾ. ರಾಧಾಕೃಷ್ಣನ್, ರಾಷ್ಟ್ರಪತಿ ದ್ರೌಪದಿ ಮುರ್ಮು, ಕಲ್ಪನಾ ಚಾವ್ಲಾ ಅಥವಾ ಮಹಾತ್ಮ ಗಾಂಧೀಜಿ ಸೇರಿದಂತೆ ಇತಿಹಾಸದಲ್ಲಿ ಉಳಿದಿರುವ ಎಲ್ಲಾ ಪ್ರಸಿದ್ಧ ವ್ಯಕ್ತಿಗಳು ಬಾಲ್ಯದಲ್ಲೇ ಆ ಹೆಸರನ್ನು ಪಡೆದಿರಲಿಲ್ಲ. ಅವರೆಲ್ಲರೂ ಕಷ್ಟಪಟ್ಟು ಶಿಕ್ಷಣವನ್ನು ಪಡೆದಿದ್ದರಿಂದಲೇ ಆ ಉನ್ನತ ಹಂತಕ್ಕೆ ತಲುಪಲು ಸಾಧ್ಯವಾಯಿತು ಎಂದರು.

ಅನಾವಶ್ಯಕವಾಗಿ ಸಮಯವನ್ನು ಹಾಳು ಮಾಡಬೇಡಿ. ದೇಶದ ಕಾನೂನುಗಳನ್ನು ತಿಳಿದುಕೊಳ್ಳಿ. ಜೀವನದ ಪ್ರತಿಯೊಂದು ಕ್ಷಣವನ್ನೂ ಸತ್ಕಾರ್ಯಗಳಿಗಾಗಿ ಮತ್ತು ನಿಮ್ಮ ಏಳಿಗೆಗಾಗಿ ಬಳಸಿಕೊಳ್ಳಿ, ಜೀವನದಲ್ಲಿ ಉತ್ತಮ ಸ್ನೇಹಿತರನ್ನು ಹೊಂದಿರಿ ಮತ್ತು ಅವರ ಪ್ರಗತಿಗೂ ನೀವೇ ಕಾರಣರಾಗಿರಿ ಎಂದು ಹೇಳಿದರು.

ಮಕ್ಕಳ ಕಲ್ಯಾಣ ಸಮಿತಿಯ ಅಧ್ಯಕ್ಷರಾದ ರವಿಚಂದ್ರ ಅವರು ಮಾತನಾಡಿ  ಆರ್.ಎಲ್.ಎಚ್.ಪಿ (RLHP) ಸಂಸ್ಥೆಯ ಮೂಲಕ ರಾಜ್ಯಾದ್ಯಂತ ಹಮ್ಮಿಕೊಳ್ಳಲಾಗಿದ್ದ ಕ್ಯಾಂಪೇನ್ ಎಗೇನ್ಸ್ಟ್ ಚೈಲ್ಡ್ ಲೇಬರ್’ (CAC) ಜಾಗೃತಿ ಅಭಿಯಾನವನ್ನು ಬಗ್ಗೆ ತಿಳಿಸಿದರು. ಮಕ್ಕಳು ದುಡಿಯುವುದು ದೇಶದ ವಿಕಾಸಕ್ಕೆ ಪೂರಕವಲ್ಲ, ಬದಲಿಗೆ ಮಾರಕ . ​ಯಾವುದೇ ಭಾಗದಲ್ಲಿ ಬಾಲಕಾರ್ಮಿಕರು ಕಂಡುಬಂದಲ್ಲಿ ತಕ್ಷಣವೇ ಮಕ್ಕಳ ಸಹಾಯವಾಣಿ 1098 ಗೆ ಕರೆ ಮಾಡಿ ಮಾಹಿತಿ ನೀಡಿ ಎಂದರು.

ಪೋಷಕರು ತಮ್ಮ ಮಕ್ಕಳಿಗೆ ನೀಡಬಹುದಾದ ಅತ್ಯಂತ ಶ್ರೇಷ್ಠ ಹಾಗೂ ಶಾಶ್ವತ ಆಸ್ತಿ ಎಂದರೆ ಅದು ವಿದ್ಯೆ ಮಾತ್ರ. ಶಿಕ್ಷಣದಿಂದ ಮಾತ್ರ ಕೆ.ಎ.ಎಸ್, ಐ ಎ ಎಸ್ ನಂತಹ ಉನ್ನತ ಹುದ್ದೆಗಳನ್ನು ಅಲಂಕರಿಸಿ, ಸಮಾಜದ ಮುಖ್ಯವಾಹಿನಿಗೆ ಬರಲು ಸಾಧ್ಯ.ಭಾರತದ ಸುಮಾರು 140 ಕೋಟಿಗೂ ಅಧಿಕ ಜನಸಂಖ್ಯೆಯಲ್ಲಿ, ಅಂದಾಜು 27 ಕೋಟಿ ಮಕ್ಕಳು ಇಂದಿಗೂ ಬಾಲಕಾರ್ಮಿಕರಾಗಿ ದುಡಿಯುತ್ತಿದ್ದಾರೆ ಎಂಬುದು ಆಘಾತಕಾರಿ ಎಂದರು.

ಇಂತಹ ದೌರ್ಭಾಗ್ಯದ ಸ್ಥಿತಿಗೆ ಕೇವಲ ಪೋಷಕರು ಮಾತ್ರವಲ್ಲದೆ, ಸಮಾಜದ ಪ್ರತಿಯೊಬ್ಬರೂ ಒಂದಲ್ಲ ಒಂದು ರೀತಿಯಲ್ಲಿ ಜವಾಬ್ದಾರರಾಗಿದ್ದಾರೆ ಎಂದು ಹೇಳಿದರು. ಮಕ್ಕಳ ಅಭಿವೃದ್ಧಿಯಾಗದ ಹೊರತು ದೇಶದ ಅಭಿವೃದ್ಧಿ ಸಾಧ್ಯವಿಲ್ಲ. ಮಕ್ಕಳಿಗೆ ಸಿಗಬೇಕಾಗಿರುವುದು ಶಿಕ್ಷಣದ ಗರಿಮೆಯೇ ಹೊರತು ದುಡಿಮೆಯಲ್ಲ ಎಂದರು.

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಹಿರಿಯ ವಕೀಲರಾದ ಸುಂದರ್ ರಾಜ್ ಎನ್ ಅವರು ಮಾತನಾಡಿ  ದೇಶದಲ್ಲಿ ಬಾಲಕಾರ್ಮಿಕ ಪದ್ಧತಿಯನ್ನು ಸಂಪೂರ್ಣವಾಗಿ ತೊಡೆದುಹಾಕಲು ಪ್ರತಿಯೊಬ್ಬರೂ ಕೈಜೋಡಿಸಬೇಕು ಮತ್ತು ಈ ಪಿಡುಗಿನ ವಿರುದ್ಧದ ಹೋರಾಟಕ್ಕೆ ಸುದೀರ್ಘ ಇತಿಹಾಸವಿದೆ  ಎಂದರು.

ನೋಬೆಲ್ ಪ್ರಶಸ್ತಿ ಪುರಸ್ಕೃತ ಕೈಲಾಸ್ ಸತ್ಯಾರ್ಥಿ ಅವರು ದೇಶಾದ್ಯಂತ ಬಾಲಕಾರ್ಮಿಕ ಪದ್ಧತಿಯ ವಿರುದ್ಧ ತೀವ್ರ ಹೋರಾಟ ನಡೆಸಿ, ಸುಮಾರು 80,000ಕ್ಕೂ ಹೆಚ್ಚು ಮಕ್ಕಳನ್ನು ಬಾಲಕಾರ್ಮಿಕ ಸಂಕೋಲೆಯಿಂದ ರಕ್ಷಿಸಿದ್ದಾರೆ. ಅವರ ಈ ಅಪೂರ್ವ ಸೇವೆಗಾಗಿ 2014ರಲ್ಲಿ ಅವರಿಗೆ ಜಾಗತಿಕ ಗೌರವವಾದ ನೋಬೆಲ್ ಪ್ರಶಸ್ತಿ ಲಭಿಸಿತು. ಅವರ ಹೋರಾಟದ ಫಲವಾಗಿಯೇ 2002ರಿಂದ ನಮ್ಮ ದೇಶದಲ್ಲಿ ಜೂನ್ 12ರಂದು ಬಾಲಕಾರ್ಮಿಕ ವಿರೋಧಿ ದಿನವನ್ನು ಅಧಿಕೃತವಾಗಿ ಆಚರಿಸಿಕೊಂಡು ಬರಲಾಗುತ್ತಿದೆ ಎಂದರು.

2025ರಲ್ಲಿ ನಡೆದ ಅಧಿಕೃತ ಸಮೀಕ್ಷೆಯ ಪ್ರಕಾರ ದೇಶದಲ್ಲಿ ಇನ್ನೂ 74.3 ಲಕ್ಷ ಮಕ್ಕಳು ಬಾಲಕಾರ್ಮಿಕರಾಗಿ ದುಡಿಯುತ್ತಿರುವುದು ಕಂಡುಬಂದಿದೆ. ಈ ಪೈಕಿ ಉತ್ತರ ಪ್ರದೇಶ ಶೇ. 30ರಷ್ಟು ಬಾಲಕಾರ್ಮಿಕರೊಂದಿಗೆ ಮೊದಲ ಸ್ಥಾನದಲ್ಲಿದ್ದರೆ, ಬಿಹಾರ (ಶೇ. 12), ಮಹಾರಾಷ್ಟ್ರ (ಶೇ. 8) ಮತ್ತು ರಾಜಸ್ಥಾನ (ಶೇ. 6) ನಂತರದ ಸ್ಥಾನಗಳಲ್ಲಿವೆ. ಆದರೆ, ಆಶಾದಾಯಕ ಬೆಳವಣಿಗೆಯಾಗಿ 2025ರಲ್ಲೇ ಸುಮಾರು 44,902 ಬಾಲಕಾರ್ಮಿಕರನ್ನು ವಿವಿಧ ಕಡೆಗಳಿಂದ ರಕ್ಷಿಸಿ, ಮುಖ್ಯವಾಹಿನಿಗೆ ತರಲಾಗಿದೆ ಎಂದು ಹೇಳಿದರು.

​ಸಂವಿಧಾನದ  ವಿಧಿ 24 (ಬಾಲಕಾರ್ಮಿಕ ನಿಷೇಧ)  14 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳನ್ನು ಯಾವುದೇ ರೀತಿಯ ದುಡಿಮೆಗೆ ಅಥವಾ ಅಪಾಯಕಾರಿ ಕೆಲಸಗಳಿಗೆ ಹಚ್ಚುವುದನ್ನು ಇದು ಸಂಪೂರ್ಣವಾಗಿ ನಿಷೇಧಿಸುತ್ತದೆ. ವಿಧಿ 21 (ಎ) (ಶಿಕ್ಷಣದ ಮೂಲಭೂತ ಹಕ್ಕು) 6 ರಿಂದ 14 ವರ್ಷದೊಳಗಿನ ಎಲ್ಲಾ ಮಕ್ಕಳಿಗೆ ಉಚಿತ ಮತ್ತು ಕಡ್ಡಾಯ ಶಿಕ್ಷಣವನ್ನು ಸರ್ಕಾರ ನೀಡಬೇಕು. ಯಾವುದೇ ಮಗು  ಶಿಕ್ಷಣದಿಂದ ವಂಚಿತವಾಗಬಾರದು ಎಂದರು.

​ವಿಧಿ 45 (ಪೌಷ್ಟಿಕ ಆಹಾರ ಮತ್ತು ಆರೈಕೆ) ಹುಟ್ಟಿನಿಂದ 6 ವರ್ಷದೊಳಗಿನ ಎಲ್ಲಾ ಮಕ್ಕಳಿಗೆ ಅಂಗನವಾಡಿಗಳ ಮೂಲಕ ಪೌಷ್ಟಿಕ ಆಹಾರ ಮತ್ತು ಪೂರ್ವ ಪ್ರಾಥಮಿಕ ಶಿಕ್ಷಣದ ಸೌಲಭ್ಯ ಒದಗಿಸುವುದು ಸರ್ಕಾರದ ಕರ್ತವ್ಯವಾಗಿದೆ. ​ವಿಧಿ 51 (ಎ) ಮತ್ತು (ಕೆ) (ಪೋಷಕರ ಕರ್ತವ್ಯ) ತಮ್ಮ ಮಕ್ಕಳಿಗೆ 14 ವರ್ಷ ತುಂಬುವವರೆಗೆ ಕಡ್ಡಾಯವಾಗಿ ಶಿಕ್ಷಣ ಕೊಡಿಸುವುದು ಪ್ರತಿಯೊಬ್ಬ ಪೋಷಕರ ಮೂಲಭೂತ ಕರ್ತವ್ಯವಾಗಿದೆ. ಯಾವುದೇ ಕಾರಣಕ್ಕೂ ಶಿಕ್ಷಣವನ್ನು ತಪ್ಪಿಸಬಾರದು ಎಂದು ಹೇಳಿದರು.

​ಬಾಲಕಾರ್ಮಿಕ ಪದ್ಧತಿಯು ಕೇವಲ ಕಾನೂನಿನಿಂದ ಮಾತ್ರವಲ್ಲದೆ, ಸಮಾಜದ ಪ್ರತಿಯೊಬ್ಬ ನಾಗರಿಕನ ಜಾಗೃತಿಯಿಂದ ಮಾತ್ರ ನಿರ್ಮೂಲನೆಯಾಗಲು ಸಾಧ್ಯ. ಮಕ್ಕಳ ಕೈಗೆ ಸಿಗಬೇಕಿರುವುದು ಕೆಲಸವಲ್ಲ, ಬದಲಿಗೆ ಪುಸ್ತಕ ಮತ್ತು ಶಿಕ್ಷಣ ಎಂದು  ಹೇಳಿದರು.

ಭಾರತದಲ್ಲಿ ಮಕ್ಕಳ ಸುರಕ್ಷತೆ ಮತ್ತು ಹಕ್ಕುಗಳಿಗಾಗಿ ಇರುವ 5 ಪ್ರಮುಖ ಕಾನೂನುಗಳಾದ   ಬಾಲ್ಯ ವಿವಾಹ ನಿಷೇಧ ಕಾಯ್ದೆ, ಪೋಷಣೆ ಮತ್ತು ಸಂರಕ್ಷಣೆ ಕಾಯ್ದೆ, ಪೋಷಕರು ಮತ್ತು ರಕ್ಷಕರ ಕಾಯ್ದೆ, ಬಾಲನ್ಯಾಯ (ಮಕ್ಕಳ ಕಾಳಜಿ ಮತ್ತು ರಕ್ಷಣೆ) ಕಾಯ್ದೆ, ಪೋಕ್ಸೋ ಕಾಯ್ದೆ ಗಳ ಬಗ್ಗೆ ಪ್ರತಿಯೊಬ್ಬರೂ ತಿಳಿದುಕೊಳ್ಳಬೇಕು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಮಕ್ಕಳ ರಕ್ಷಣಾಧಿಕಾರಿಗಳಾದ  ಆಶಾ, ಪೀಪಲ್ಸ್ ಪಾರ್ಕ್ ಶಾಲೆಯ ಮುಖ್ಯೋಪಾಧ್ಯಾಯರಾದ  ಜಾನ್, ಎಸಿಪಿ ಮಹಮ್ಮದ್ ಶರೀಫ್, ಜಿಲ್ಲಾ ಕಾರ್ಮಿಕ ಅಧಿಕಾರಿಗಳಾದ  ಚೇತನ್ ಕುಮಾರ್, ಮಹಾರಾಜ ಕಾಲೇಜಿನ ಪ್ರಾಂಶುಪಾಲರಾದ  ಉದಯಶಂಕರ್, ಬಾಲ ಕಾರ್ಮಿಕ ಯೋಜನಾ ಸೊಸೈಟಿಯ ನಿರ್ದೇಶಕರಾದ ಮಲ್ಲಿಕಾರ್ಜುನ ಹೆಚ್. ಸಿ. ಮತ್ತು ಡಾನ್ ಬಾಸ್ಕೋ ಸಂಸ್ಥೆಯ  ಜೆಮ್ ಜೋಶ್ ಮತ್ತಿತರರು ಉಪಸ್ಥಿತರಿದ್ದರು.

RELATED ARTICLES
- Advertisment -
Google search engine

Most Popular