ಬೆಕ್ಕಿಗೆ ಆಟ, ಇಲಿಗೆ ಪ್ರಾಣ ಸಂಕಟ ಎನ್ನುವಂತೆ, ಬೆಳಗಾವಿ ಜಿಲ್ಲೆಯಲ್ಲಿ ವರುಣದೇವ ಕಣ್ಣಾಮುಚ್ಚಾಲೆ ಆಡುತ್ತಿದ್ದು, ರಾಮದುರ್ಗ ತಾಲೂಕಿನಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಮಳೆಯಾಗುತ್ತಿಲ್ಲ. ಮಳೆ ನಂಬಿ ಬಿತ್ತನೆ ಕಾರ್ಯ ಆರಂಭಿಸಿದ್ದ ತಾಲೂಕಿನ ರೈತರು ಈಗ ಆಕಾಶ ನೋಡುತ್ತಿದ್ದು, ಉತ್ತಮ ಫಸಲಿನ ಅವರ ನಿರೀಕ್ಷೆ ದಿನದಿಂದ ದಿನಕ್ಕೆ ಹುಸಿಯಾಗುತ್ತಿದೆ. ಮಳೆ ಅಭಾವದ ಕಾರಣಕ್ಕೆ ತಾಲೂಕನ್ನು ಬರಗಾಲ ಪೀಡಿತ ಪ್ರದೇಶ ಎಂದು ಘೋಷಿಸುವಂತೆ ರೈತರು ಸರ್ಕಾರವನ್ನು ಆಗ್ರಹಿಸಿದ್ದಾರೆ.
ಪ್ರಸಕ್ತ ವರ್ಷದ ಮುಂಗಾರು ಮಳೆಯ ಚೆಲ್ಲಾಟದಿಂದ ರಾಮದುರ್ಗ ಪ್ರದೇಶದ ರೈತರು ಆತಂಕದ ಸುಳಿಗೆ ಸಿಲುಕಿದ್ದಾರೆ. ನಿತ್ಯ ಮೋಡ ಕವಿದ ವಾತಾವರಣವಿದ್ದು, ಆಗೊಮ್ಮೆ ಈಗೊಮ್ಮೆ ತುಂತುರು ಮಳೆ ಬರುತ್ತಿದೆ. ಉತ್ತಮ ಮಳೆ ಬರುವ ವಿಶ್ವಾಸದಲ್ಲಿ ಕೆಲವೆಡೆ ಒಣ ನೆಲದಲ್ಲಿಯೇ ಮುಂಗಾರು ಬಿತ್ತಿಗೆ ಮಾಡಿದ್ದಾರೆ. ಮುಂದಿನ ದಿನಗಳಲ್ಲಿ ಮಳೆಯಾಗದಿದ್ದರೆ ರೈತರನ್ನು ದೇವರೇ ಕಾಪಾಡಬೇಕು.
ಈ ಬಾರಿ ಮುಂಗಾರು ಮಳೆ ಜೂನ್ ತಿಂಗಳ ಮೊದಲ ವಾರದಲ್ಲಿ ತಕ್ಕ ಮಟ್ಟಿಗೆ ಆದಾಗ, ರೈತರ ಮೊಗದಲ್ಲಿ ಮಂದಹಾಸ ಮೂಡಿತ್ತು. ಹೊಲವನ್ನು ಹಸನು ಮಾಡಿಕೊಂಡು ಮುಂಗಾರು ಬೆಳೆಗಳ ಬೀಜ ಖರೀದಿಸಿ ಬಿತ್ತನೆ ಮಾಡಿದ್ದಾರೆ. ಅಧಿಕ ಪ್ರಮಾಣದಲ್ಲಿ ಹೆಸರು ಬಿತ್ತನೆ
ಮಾಡಿದ್ದು ಮೊಳಕೆಯೊಡೆದು ಭೂಮಿಯಿಂದ ಮೇಲೆದ್ದು ನಿಂತಿವೆ. ಆದರೆ ನಿರೀಕ್ಷಿತ ಮಳೆಯಾಗದ ಕಾರಣ ಬೆಳೆ ಕಮರಿಹೋಗುತ್ತಿದ್ದು, ರೈತರಲ್ಲಿಆತಂಕ ಮೂಡಿಸಿದೆ.
ಬಿತ್ತನೆ ಪ್ರಮಾಣ:
ತಾಲೂಕಿನಲ್ಲಿ ಮುಂಗಾರು ಬೆಳೆಗಳ ಬಿತ್ತಿಗೆ ಪ್ರಮಾಣ ಕಳೆದ ವರ್ಷಕ್ಕಿಂತ ಅಧಿಕವಾಗಿದೆ. ಹೆಸರು 24,371 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿದೆ. ಮೆಕ್ಕೆಜೋಳ 8,075 ಹೆಕ್ಟೇರ್ , ಸೂರ್ಯಕಾಂತಿ 590, ಹತ್ತಿ 540, ಶೇಂಗಾ 115, ಸಜ್ಜೆ 1773, ತೊಗರಿ 1932 ಹೆಕ್ಟೇರ್ ಸೇರಿದಂತೆ ಒಟ್ಟು 51,894 ಹೆಕ್ಟೇರ್ ಪ್ರದೇಶದಲ್ಲಿಮುಂಗಾರು ಬಿತ್ತನೆಯಾಗಿದೆ. ಆದರೆ ಕಾಯಿ ಬಿಡುವ ಹಂತದಲ್ಲಿದ್ದ ಹೆಸರು ಸಂಪೂರ್ಣ ಬಾಡತೊಡಗಿದೆ. ಉಳಿದ ಬೆಳೆಗಳು ಕೂಡ ಬಾಡಿ ಹೋಗುತ್ತಿರುವುದು ಆತಂಕ ಹೆಚ್ಚಿಸಿದೆ.
ಈ ಮೊದಲು ಅಲ್ಪ ಸ್ವಲ್ಪ ಮಳೆಯಾಗಿದ್ದರಿಂದ ರೈತರು ಸಾಲ ಮಾಡಿ ಭೂಮಿಗೆ ಕಾಳು ಊರಿದ್ದು, ಮತ್ತೆ ಮಳೆಯಾಗದ ಕಾರಣ ಬೆಳೆಗಳು ಜೀವ ಬಿಡುವ ಹಂತಕ್ಕೆ ಬಂದಿದ್ದು, ರೈತರಿಗೆ ಕಳವಳ ಉಂಟುಮಾಡಿದೆ. ಮುಂಗಾರು ಮಳೆ ಕೈಕೊಟ್ಟಿದ್ದರಿಂದ ಸರಕಾರ ರಾಮದುರ್ಗ ತಾಲೂಕನ್ನು ಬರಗಾಲ ಪೀಡಿತ ಪ್ರದೇಶ ಎಂದು ಘೋಷಣೆ ಮಾಡಬೇಕು. ಬೆಳೆಗಳ ನಷ್ಟಕ್ಕೆ ಸೂಕ್ತ ಪರಿಹಾರ ನೀಡಬೇಕು. ರೈತರ ಸಾಲ ಮನ್ನಾ ಮಾಡಬೇಕು ಎಂಬುದು ಈ ಭಾಗದ ರೈತರ ಆಗ್ರಹವಾಗಿದೆ.
“ಮುಂಗಾರು ಹಂಗಾಮಿಗೆ ಅಗತ್ಯ ಇರುವ ಬೀಜ ಹಾಗೂ ಗೊಬ್ಬರ ದಾಸ್ತಾನು ಮಾಡಲಾಗಿದೆ. ಜುಲೈ ತಿಂಗಳಲ್ಲಿಮಳೆಯಾದರೆ ಮಾತ್ರ ಮುಂಗಾರು ಬೆಳೆಗಳು ಉಳಿಯುತ್ತವೆ. ಇಲ್ಲದಿದ್ದರೆ ಬೆಳೆಗಳು ನಾಶವಾಗುವ ಸಾಧ್ಯತೆ ಇದೆ” ಎಂದು ರಾಮದುರ್ಗದ ಸಹಾಯಕ ಕೃಷಿ ನಿರ್ದೇಶಕರಾದ ಶ್ರೀನಾಥ ಚಿಮ್ಮಲಗಿ ಹೇಳಿದ್ದಾರೆ.
ವರದಿ: ಸ್ಟೀಫನ್ ಜೇಮ್ಸ್ ಬೆಳಗಾವಿ



