ಬೆಂಗಳೂರು: ಕರ್ನಾಟಕ ಸಾರ್ವಜನಿಕ ಸೇವಾ ಆಯೋಗ (ಕೆಪಿಎಸ್‌ಸಿ) ನಡೆಸಿದ ಕೆಎಎಸ್ ಪರೀಕ್ಷೆಗಳಲ್ಲಿನ ಕನ್ನಡ ಪ್ರಶ್ನೆಪತ್ರಿಕೆಗಳಲ್ಲಿ ಮತ್ತೆ ತಪ್ಪುಗಳಾಗಿದ್ದು, ಕನ್ನಡ ಮಾಧ್ಯಮದ ಅಭ್ಯರ್ಥಿಗಳಿಗೆ ಅನ್ಯಾಯವಾಗಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ.
ಪರೀಕ್ಷೆಯಲ್ಲಿ ಕನ್ನಡ ಮಾಧ್ಯಮದ ಅಭ್ಯರ್ಥಿಗಳಿಗೆ ಅನ್ಯಾಯವಾಗಿದ್ದು, ಇವರಿಗೆ ನ್ಯಾಯ ದೊರಕಿಸಲು ಮತ್ತೊಮ್ಮೆ ಪರೀಕ್ಷೆ ನಡೆಸಬೇಕು. ಪ್ರಶ್ನೆಪತ್ರಿಕೆಗಳಲ್ಲಿ ಮತ್ತೆ ತಪ್ಪುಗಳಾಗದಂತೆ ಎಚ್ಚರಿಕೆ ವಹಿಸಬೇಕೆಂದು ಕರ್ನಾಟಕ ರಕ್ಷಣಾ ವೇದಿಕೆ (ಕರವೇ) ಆಗ್ರಹಿಸಿದೆ. ಅಲ್ಲದೆ, ಫೆಬ್ರವರಿ 18ರಂದು ನಗರದ ಫ್ರಿಡಂ ಪಾರ್ಕ್‌ನಲ್ಲಿ ಬೃಹತ್ ಪ್ರತಿಭಟನೆಯನ್ನೂ ಹಮ್ಮಿಕೊಂಡಿದೆ.
ಲೇಖಕ ಬರಗೂರು ರಾಮಚಂದ್ರಪ್ಪ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದ್ದು, ಕನ್ನಡದಲ್ಲಿ ಪರೀಕ್ಷೆ ಬರೆದ ವಿದ್ಯಾರ್ಥಿಗಳಲ್ಲಿ ಕೇವಲ ಶೇ.15 ರಿಂದ 20 ರಷ್ಟು ವಿದ್ಯಾರ್ಥಿಗಳು ಮಾತ್ರ ಉತ್ತೀರ್ಣರಾಗಿದ್ದಾರೆಂದು ಹೇಳಿದ್ದು, ತಾರತಮ್ಯದ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ.
ಕನ್ನಡ ಅಭಿವೃದ್ಧಿ ಪ್ರಾಧಿಕಾರ (ಕೆಡಿಎ) ಅಧ್ಯಕ್ಷ ಪುರುಷೋತ್ತಮ ಬಿಳಿಮಲೆ ಅವರು ಮಾತನಾಡಿ, ಪ್ರಾಧಿಕಾರವು ಈ ವಿಷಯವನ್ನು ರಾಜ್ಯ ಸರ್ಕಾರದೊಂದಿಗೆ ಚರ್ಚಿಸಲಿದೆ ಎಂದು ಹೇಳಿದರು.
ಕೆಪಿಎಸ್‌ಸಿ ನಿಖರತೆಯನ್ನು ಖಚಿತಪಡಿಸಿಕೊಳ್ಳಲು ರಾಜ್ಯದ ಅನುವಾದ ವಿಭಾಗವನ್ನು ಒಳಗೊಳ್ಳಬೇಕಾಗಿತ್ತು. ಇದು ಹೀಗೆಯೇ ಮುಂದುವರಿದರೆ, ಈ ಪರೀಕ್ಷೆಗಳನ್ನು ನಡೆಸುವ ಜವಾಬ್ದಾರಿಯನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರಕ್ಕೆ (ಕೆಇಎ) ವಹಿಸಬೇಕೆಂದು ಸೂಚಿಸಬೇಕಾಗಬಹುದು ಎಂದೂ ತಿಳಿಸಿದರು.
ಆಗಸ್ಟ್ 27, 2024 ರಂದು 384 ಗೆಜೆಟೆಡ್ ಪ್ರೊಬೇಷನರಿ ಅಧಿಕಾರಿಗಳ ನೇಮಕಾತಿಗಾಗಿ ಪರೀಕ್ಷೆ ನಡೆಸಲಾಗಿತ್ತು. ಈ ಪರೀಕ್ಷೆ ವಿವಾದ ಸೃಷ್ಟಿಸಿತ್ತು. ಕನ್ನಡ ಆವೃತ್ತಿಯ ಪ್ರಶ್ನೆ ಪತ್ರಿಕೆಯಲ್ಲಿ ದೋಷಗಳಿವೆ ಎಂದು ಆರೋಪಿಸಲಾಗಿತ್ತು, ಇದು ವಿದ್ಯಾರ್ಥಿಗಳಿಂದ ಪ್ರತಿಭಟನೆಗೆ ಕಾರಣವಾಯಿತು.
ಬಳಿಕ ಈ ವಿಷಯವನ್ನು ಒಪ್ಪಿಕೊಂಡ ಸಿಎಂ ಮರು ಪರೀಕ್ಷೆಗೆ ಆದೇಶಿಸಿದರು, ಡಿಸೆಂಬರ್ 29, 2024 ರಂದು ಮರು ಪರೀಕ್ಷೆ ನಡೆಸಲಾಯಿತು. ಆದಾಗ್ಯೂ, ಮತ್ತೊಮ್ಮೆ ಪ್ರಶ್ನೆಪತ್ರಿಕೆಗಳಲ್ಲಿ ದೋಷಗಳು ಕಂಡು ಬಂದಿತ್ತು.