ಬೆಂಗಳೂರು: ಈ ಬಾರಿಯ ಎಸ್ಸೆಸ್ಸೆಲ್ಸಿ ಪರೀಕ್ಷಾ ಫಲಿತಾಂಶ ಕಾಂಗ್ರೆಸ್ ಸರ್ಕಾರದ ಆಡಳಿತ ವ್ಯವಸ್ಥೆಯ ಲೋಪದೋಷಗಳನ್ನಷ್ಟೇ ಅಲ್ಲದೆ, ನೀತಿ ನಿರೂಪಕರ ಬೇಜವಾಬ್ದಾರಿತನವನ್ನೂ ಬಯಲು ಮಾಡಿದೆ ಎಂದು ಹಾಲಿ ಶಾಸಕ ಎಸ್.ಸುರೇಶ್ ಕುಮಾರ್ ಟೀಕಿಸಿದ್ದಾರೆ. ಈ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿರುವ ಅವರು, ಮಕ್ಕಳ ಕಲಿಕಾ ಸಿದ್ಧತೆ, ಶಿಕ್ಷಣದ ಗುಣಮಟ್ಟ ಯಾವುದನ್ನೂ ಚರ್ಚಿಸದೆ, ವಿದ್ಯಾರ್ಥಿಗಳ ಮಾನಸಿಕ ಪರಿಸ್ಥಿತಿಗಳನ್ನು ಗಮನಿಸದೇ, ಪರೀಕ್ಷೆಗಳನ್ನು ಶಿಸ್ತುಬದ್ಧವಾಗಿ ನಿರ್ವಹಿಸುತ್ತೇವೆಂದು ಘೋಷಿಸುವುದು.
೨೦೨೪ನೇ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷಾ ಮೌಲ್ಯಮಾಪನ ಪೂರ್ಣಗೊಳಿಸಿದಾಗ ಕಳೆದ ಸಾಲಿಗಿಂತ (ಶೇ.೮೩) ಈ ಬಾರಿ ಶೇ.೫೩ಕ್ಕೆ ಅಂದರೆ ಶೇ.೩೦ ರಷ್ಟು ಫಲಿತಾಂಶ ಕುಸಿತ ಕಂಡಿದೆ. ನಂತರ ಫಲಿತಾಂಶ ಉತ್ತಮಗೊಳಿಸಲು ಕೃಪಾಂಕ ನೀಡುವ ಪ್ರಮಾಣವನ್ನು ಶೇ.೨೦ಕ್ಕೆ ಹೆಚ್ಚಿಸಿ, ಕೃಪಾಂಕ ಪಡೆಯಲು ಅರ್ಹತಾ ಅಂಕಗಳ ಪ್ರಮಾಣವನ್ನೂ ಶೇ.೨೫ಕ್ಕೆ ಇಳಿಸಿದ್ದರಿಂದ ೧.೭೯ ಲಕ್ಷ ವಿದ್ಯಾರ್ಥಿಗಳು ಕೃಪಾಂಕದಿಂದಲೇ ಪಾಸಾಗಿದ್ದಾರೆ ಎಂದರೆ ಪರಿಸ್ಥಿತಿಯ ಗಂಭೀರತೆ ಅರ್ಥ ಮಾಡಿಕೊಳ್ಳಬಹುದು ಎಂದಿದ್ದಾರೆ.
ಇದೆಲ್ಲವನ್ನೂ ಗಮನಿಸಿದರೆ ಇಷ್ಟು ದಿನ ಸರ್ಕಾರಗಳು ಕೇವಲ ಜನರನ್ನು ಸುಳ್ಳನ್ನೇ ನಂಬಿಸುವ ಕೆಲಸ ಮಾಡುತ್ತಿದ್ದವೇ ಎನ್ನುವ ಅನುಮಾನ ಬಾರದಿರದು. ಯಾವುದೇ ವ್ಯವಸ್ಥೆಗಳು ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸವನ್ನು ಮೂಡಿಸುವ, ಸಮಗ್ರ ಕಲಿಕೆಗೆ ಪ್ರೇರೇಪಿಸುವಂತದ್ದಾಗಿರಬೇಕೇ ಹೊರತು ಮಕ್ಕಳ ಸ್ಥೈರ್ಯ ಕಸಿಯುವಂತಹದ್ದಾಗಿರಬಾರದು. ಮಕ್ಕಳ ಕಲಿಕೆಯ ಮಾನದಂಡ ಕೇವಲ ಪರೀಕ್ಷೆಯಲ್ಲ ಎನ್ನುವುದೂ ವೈಜ್ಞಾನಿಕವಾಗಿ ಅರ್ಥವಾಗುತ್ತಿದೆ. ತಮ್ಮ ಸರ್ಕಾರ ಈ ಕುರಿತಂತೆ ಇನ್ನಷ್ಟು ವಸ್ತುನಿಷ್ಠವಾಗಿ ಆಲೋಚಿಸಬೇಕಿದೆ. ಈ ಕುರಿತಂತೆ ಸಂಬಂಧಪಟ್ಟವರಿಗೆ ತಮ್ಮಿಂದ ಸೂಕ್ತ ಹಾಗೂ ಕಠಿಣ ನಿರ್ದೇಶನ ತಲುಪಿದಲ್ಲಿ ಒಂದಷ್ಟು ಬದಲಾವಣೆ ಸಾಧ್ಯ ಎಂದು ಪತ್ರದಲ್ಲಿ ತಿಳಿಸಿದ್ದಾರೆ.