ಹನೂರು: ಮಹದೇಶ್ವರ ಬೆಟ್ಟ ,ಬಿಳಿಗಿರಿರಂಗನ ಬೆಟ್ಟ ಮತ್ತು ಬಂಡೀಪುರ ರಾಷ್ಟ್ರೀಯ ಉದ್ಯಾನವನಗಳ ಪ್ರಾಕೃತಿಕ ಸೌಂದರ್ಯದಿಂದ ಕೂಡಿರುವ ಚಾಮರಾಜನಗರ ಜಿಲ್ಲೆಯವರೇ ಪುಣ್ಯವಂತರು ಎಂದು ಮೈಸೂರು ಸಂಸ್ಥಾನದ ರಾಜವಂಶಸ್ಥರಾದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಬಣ್ಣಿಸಿದರು. ಹನೂರು ತಾಲೂಕಿನ ಎಲ್ಲೇಮಾಳ ಗ್ರಾಮದಲ್ಲಿ ಸಂಸ್ಕೃತಿ ಸೇವಾ ವಾರಿಧಿ ಸಂಸ್ಥೆಯ ವತಿಯಿಂದ ಮುಮ್ಮಡಿ ಕೃಷ್ಣರಾಜ ಒಡೆಯರ್ ಅವರ ಪಟ್ಟಾಭಿಷೇಕದ ಸವಿ ನೆನಪಿನಲ್ಲಿ ಸನಾತನ ಸಂಸ್ಕೃತಿ ಪುನರುತ್ಥಾನ ದಿನಾಚರಣೆ ಅಂಗವಾಗಿ ಕೋಟಿ ಸಸಿ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಯದುವೀರ್ ಒಡೆಯರ್ ಅವರು ಚಾಮರಾಜನಗರ ಜಿಲ್ಲೆಯು ಪ್ರಾಕೃತಿಕ ಸೌಂದರ್ಯತೆಯಿಂದ ಕೂಡಿದ್ದು ಬಂಡಿಪುರ, ಮಹದೇಶ್ವರ ಬೆಟ್ಟ, ಬಿಳಿಗಿರಿರಂಗನ ಬೆಟ್ಟದಂತಹ ಪ್ರಾಕೃತಿಕ ಸೌಂದರ್ಯವನ್ನು ಹೊಂದಿರುವ ಚಾಮರಾಜನಗರ ಜಿಲ್ಲೆಯವರೇ ಪುಣ್ಯವಂತರು.
ಪ್ರಾಕೃತಿಕ ಸಮತೋಲನವನ್ನು ಕಾಪಾಡಬೇಕಿರುವದು ನಮ್ಮ ಆದ್ಯ ಕರ್ತವ್ಯ ಇಂದು ಮಾನವ ಮತ್ತು ವನ್ಯಜೀವಿಗಳ ನಡುವೆ ಆವಾಸಸ್ಥಾನಕ್ಕಾಗಿ ಪೈಪೋಟಿ ನಡೆಯುತ್ತಿದ್ದು ಪರಿಸರಕ್ಕೆ ಪೂರಕವಾಗಿ ನಾವೆಲ್ಲ ಬದುಕು ನಡೆಸಬೇಕಿದೆ. ಪ್ರತಿಯೊಬ್ಬರೂ ಪ್ಲಾಸ್ಟಿಕ್ ಬಳಕೆಗೆ ಕಡಿವಾಣ ಹಾಕಬೇಕು ಎಂದು ಕಿವಿಮಾತು ಹೇಳಿದರು
ಕೃಷ್ಣರಾಜ ಒಡೆಯರ್ ಕೊಡುಗೆ ಅಪಾರ : ಮೈಸೂರು ಸಂಸ್ಥಾನವು ಕಷ್ಟದ ಪರಿಸ್ಥಿತಿಯಲ್ಲಿದ್ದಾಗ ರಾಜ್ಯದ ಅಭಿವೃದ್ಧಿಗೆ ಮತ್ತು ಧರ್ಮ ರಕ್ಷಣೆಗೆ ಹೆಚ್ಚಿನ ಹೊತ್ತು ನೀಡಿದವರು ಮುಮ್ಮಡಿ ಕೃಷ್ಣರಾಜ ಒಡೆಯರ್ ಅವರು ಮೈಸೂರಿನಲ್ಲಿ ಲಿಂಗಬುದಿ ಕೆರೆ, ಕುಕ್ಕರಹಳ್ಳಿ ಕೆರೆಗಳನ್ನು ನಿರ್ಮಿಸಿದರು ದೇವಾಲಯಗಳ ಅಭಿವೃದ್ಧಿಗಾಗಿ ಅವಶ್ಯಕವಾದ ಚಿನ್ನದ ಒಡವೆಗಳನ್ನು ದಾನವಾಗಿ ನೀಡಿ ಅಭಿವೃದ್ಧಿಗೆ ಶ್ರಮಿಸಿದರು ಇದರ ಜೊತೆಗೆ ಕನ್ನಡ ಭಾಷೆಯ ಸಂರಕ್ಷಣೆಗೆ ಕನ್ನಡ ಸಾಹಿತ್ಯ ಪರಿಷತ್ ಸ್ಥಾಪಿಸುವ ಮೂಲಕ ಆಧುನಿಕ ಯುಗದಲ್ಲಿನ ಹಲವಾರು ಕಾರ್ಯಗಳಿಗೆ ಅಂದೇ ಚಾಲನೆ ನೀಡಿದರು ಎಂದು ಬಣ್ಣಿಸಿದರು.
ಮಾಜಿ ಶಾಸಕ ಆರ್ ನರೇಂದ್ರ ಮಾತನಾಡಿ ಪರಿಸರ ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ನಾವು ಗಿಡಗಳನ್ನು ನಾವು ಗಿಡಗಳನ್ನು ನೆಡುವುದಷ್ಟೇ ನಮ್ಮ ಕರ್ತವ್ಯವಲ್ಲ. ಅವುಗಳನ್ನು ಉಳಿಸಿ ಬೆಳೆಸುವುದು ನಮ್ಮ ಕರ್ತವ್ಯ. ಕಳೆದ 15 ವರ್ಷಗಳಲ್ಲಿ ನಾನು ಶಾಸಕನಾದ ಬಳಿಕ ರೈತರಿಗೆ ಅರಣ್ಯ ಇಲಾಖೆಯ ಮೂಲಕ ಲಕ್ಷಾಂತರ ಸಸಿಗಳನ್ನು ನೀಡಿದ್ದೇವೆ ಆದರೆ ಅವು ಎಲ್ಲಿವೆ ಕೇವಲ ಪುಸ್ತಕಗಳಲ್ಲಿ ದಾಖಲೆಗಳಲ್ಲಿ ಇದೆ ಅಷ್ಟೇ ಆದುದರಿಂದ ನಾವೆಲ್ಲ ಗಿಡಗಳನ್ನು ನೆಡುವುದರ ಜೊತೆಗೆ ಪಾಲನೆ ಪೋಷಣೆ ಮಾಡಲು ಶ್ರಮಿಸಬೇಕು ಎಂದು ತಿಳಿಸಿದರು. ಕಾರ್ಯಕ್ರಮದ ಹಿನ್ನೆಲೆ ಗ್ರಾಮದ ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿ ಯದುವೀರ್ ಒಡೆಯರ್ ಅವರು ಸಸಿ ನೆಟ್ಟು ನೀರು ಎರೆದರು.
ಕಾರ್ಯಕ್ರಮದಲ್ಲಿ ಧಾರವಾಡದ ಪ್ರಜ್ಞಾಂದ ಸ್ವಾಮೀಜಿ ಬಿಜೆಪಿ ಜಿಲ್ಲಾಧ್ಯಕ್ಷ ನಾರಾಯಣ ಪ್ರಸಾದ್, ಜಿಲ್ಲಾ ಉಪಾಧ್ಯಕ್ಷ ದತ್ತೇಶ್ ಕುಮಾರ್, ಸಂಸ್ಕೃತಿ ಸೇವಾ ವಾರಿದಿ ಸಂಸ್ಥೆಯ ಅಧ್ಯಕ್ಷ ಶಿವಶಂಕರ್ ,ಕಾರ್ಯದರ್ಶಿ ಸುಷ್ಮಾಮಯ್ಯ , ರಮೇಶ್ ಬಾಬು ,ಶಾಲೆಯ ಮುಖ್ಯ ಶಿಕ್ಷಕಿ ನಾಗಕನ್ನಿಕ, ಆಗಮಿಕರಾದ ಕೆವಿ ಮಾದೇಶ್ ಮುಖಂಡರಾದ ನಾಗೇಶ್ ರಂಗಸ್ವಾಮಿ, ಮಾದೇವು ಇನ್ನಿತರರು ಹಾಜರಿದ್ದರು. ಕಾರ್ಯಕ್ರಮಕ್ಕಾಗಿ ಎಲ್ಲೇ ಮಾಡ ಗ್ರಾಮಕ್ಕೆ ಆಗಮಿಸಿದ್ದ ಯದುವೀರ್ ಒಡೆಯರ್ ಅವರಿಗೆ ಮಂಗಳವಾದ್ಯ ಸಮೇತ ಪೂರ್ಣ ಕುಂಭ ಸ್ವಾಗತ ಕೋರಲಾಯಿತು. ಬಳಿಕ ಮಕ್ಕಳ ಮಾರಮ್ಮ ದೇವಾಲಯದಲ್ಲಿ ಶಿವಶಂಕರ್ ದಂಪತಿಗಳಿಂದ ಪಾದಪೂಜೆಯನ್ನು ನೆರವೇರಿಸಲಾಯಿತು.