Sunday, April 20, 2025
Google search engine

Homeರಾಜ್ಯಎತ್ತಿನಹೊಳೆ ಯೋಜನೆ: ಹತ್ತು ವರ್ಷಗಳ ಭಗೀರಥ ಪ್ರಯತ್ನ ಸಾಕಾರ: ಡಿ.ಕೆ. ಶಿವಕುಮಾರ್

ಎತ್ತಿನಹೊಳೆ ಯೋಜನೆ: ಹತ್ತು ವರ್ಷಗಳ ಭಗೀರಥ ಪ್ರಯತ್ನ ಸಾಕಾರ: ಡಿ.ಕೆ. ಶಿವಕುಮಾರ್

ಸಕಲೇಶಪುರ : ಎತ್ತಿನಹೊಳೆ ಬಯಲು ಸೀಮೆಯ ಜನರ ಬದುಕಿನ ಜೇನಿನ ಹೊಳೆ, ಬಯಲು ಸೀಮೆ ಬರ ನೀಗಿಸುವ ಜೀವದ ಹೊಳೆ. ಗೌರಿ ಹಬ್ಬದಂದು ಗಂಗೆಗೆ ಬಾಗಿನ ಅರ್ಪಿಸಿ, ೧೦ ವರ್ಷಗಳ ಭಗೀರಥ ಪ್ರಯತ್ನ ನಡೆಸಿ, ಎತ್ತಿನಹೊಳೆ ಏತ ನೀರಾವರಿ ಯೋಜನೆಯನ್ನು ನಮ್ಮ ಕಾಂಗ್ರೆಸ್ ಸರ್ಕಾರ ಸಾಕಾರಗೊಳಿಸಿದೆ ಎಂದು ಡಿಸಿಎಂ ಡಿ. ಕೆ. ಶಿವಕುಮಾರ್ ಅವರು ಹೇಳಿದರು.

ಹೆಬ್ಬನಹಳ್ಳಿಯ ವಿತರಣಾ ತೊಟ್ಟಿ- ೪ ರ ಬಳಿ ಸಿಎಂ ಸಿದ್ದರಾಮಯ್ಯ ಅವರು ಹಾಗೂ ಸಂಪುಟ ಸಹೋದ್ಯೋಗಿಗಳು, ಶಾಸಕ ಮಿತ್ರರ ಜೊತೆ ಬಾಗಿನ ಅರ್ಪಿಸಿ ನಂತರ ನಡೆದ ಸಮಾರಂಭದಲ್ಲಿ ಮಾತನಾಡಿದ ಅವರು ಕರ್ನಾಟಕದ ನೀರಾವರಿ ಇತಿಹಾಸದಲ್ಲೇ ಇದೊಂದು ಮಹತ್ವದ ದಿನ. ನೂರಾರು ಟೀಕೆಗಳನ್ನು ಎದುರಿಸಿದ್ದಕ್ಕೆ ಸಕಲೇಶ್ವರನ ಪುಣ್ಯ ಕ್ಷೇತ್ರದಿಂದ ವಾಣಿವಿಲಾಸದ ತಾಯಿ ಕಣಿವೆ ಮಾರಮ್ಮನ ಸನ್ನಿಧಿಗೆ ನೀರು ಹರಿಯುತ್ತಿದೆ. ನನ್ನ ಬದುಕಿನಲ್ಲೇ ಎಂದೆಂದಿಗೂ ಮರೆಯಲಾಗದ ಚರಿತ್ರೆಯ ದಿನ. ಗಂಗಾ ಮಾತೆ ಗೌರಿ ಹಬ್ಬದಂದು ಘಟ್ಟ ಹತ್ತಿ ಇಳಿಯುತ್ತಿದ್ದಾಳೆ ಎಂದು ಹೇಳಿದರು.

ಈ ಹಿಂದೆ ಮುಖ್ಯಮಂತ್ರಿಗಳು ಇಂಧನ ಇಲಾಖೆ ಜವಾಬ್ದಾರಿ ನೀಡಿದ್ದರು. ಈಗ ನೀರಾವರಿ ಇಲಾಖೆ ಜವಾಬ್ದಾರಿ ತೆಗೆದುಕೊಂಡ ಮೇಲೆ ಎತ್ತಿನಹೊಳೆ ಯೋಜನೆಯ ಮೊದಲ ಹಂತದ ಕಾಮಗಾರಿ ಮುಗಿಸಿದ್ದೇವೆ. ೨೦೨೭ ಕ್ಕೆ ಎಲ್ಲಾ ಕಾಮಗಾರಿ ಮುಗಿಸಿ ಇತಿಹಾಸ ನಿರ್ಮಿಸುತ್ತೇವೆ. ಇದು ನಮ್ಮ ತಪಸ್ಸು, ಸಂಕಲ್ಪ, ಪ್ರತಿಜ್ಞೆ ಎಂದು ಹೇಳಿದರು.

ಕುದಿಯುವವರು ಕುದಿಯಲಿ, ಉರಿಯುವವರು ಉರಿಯಲಿ. ನಮ್ಮ ಪಾಡಿಗೆ ನಾವು ಕೆಲಸ ಮಾಡಬೇಕು. ಆಗ ಕುದಿಯುವವರು ಆವಿಯಾಗುತ್ತಾರೆ. ಉರಿಯುವವರು ಬೂದಿಯಾಗುತ್ತಾರೆ ಎಂದು ಹೇಳಿದರು. ಗುರಿ ಸಾಧಿಸುವ ಛಲ ಇದ್ದರೆ ಏನನ್ನೂ ಬೇಕಾದರೂ ಸಾಧಿಸಬಹುದು ಎಂಬುದಕ್ಕೆ ಎತ್ತಿನಹೊಳೆ ಯೋಜನೆ ಬಹುದೊಡ್ಡ ಸಾಕ್ಷಿಯಾಗಿ ನಮ್ಮ ಕಣ್ಣ ಮುಂದಿದೆ. ನಾವು ನುಡಿದಂತೆ ನಡೆದಿದ್ದೇವೆ, ಕೊಟ್ಟ ಮಾತನ್ನು ಉಳಿಸಿಕೊಂಡಿದ್ದೇವೆ. ಸಾಕ್ಷಿಗುಡ್ಡೆಗಳನ್ನು ನಿರ್ಮಾಣ ಮಾಡಿದ್ದೇವೆ? ಎಂದರು.

ಈ ಯೋಜನೆ ಪ್ರಾರಂಭ ಮಾಡಿದ ದಿನದಿಂದ ಇವತ್ತಿನವರೆಗೂ ಬಂದ ಟೀಕೆಗಳು ಒಂದೆರಡಲ್ಲ. ಸುತ್ತಮುತ್ತಲಿನ ಬೆಟ್ಟ, ಗುಡ್ಡಗಳನ್ನು ಮೀರಿಸುವಷ್ಟು ಟೀಕೆಗಳು ಬಂದವು. ಸಮ್ಮಿಶ್ರ ಸರ್ಕಾರ ಇದ್ದಾಗ ಯೋಜನೆಯನ್ನು ವೀಕ್ಷಣೆ ಮಾಡಲು ಬಂದಿದ್ದೆ. ಆಗ ಏನೂ ಕೆಲಸ ಆಗದೆ ಪಾಳು ಬಿದ್ದಿತ್ತು. ಈಗ ಜೀವಕಳೆ ಬಂದಿದೆ ಎಂದರು.

೭೫ ಲಕ್ಷ ಜನರ ಬಾಯಾರಿಕೆ ನೀಗಿಸುವ ಯೋಜನೆ: ೭ ಜಿಲ್ಲೆಗಳ ೬,೬೫೭ ಗ್ರಾಮಗಳ ೭೫ ಲಕ್ಷ ಜನರ ಬಾಯಾರಿಕೆ ನೀಗಿಸುವ ಈ ಯೋಜನೆಯ ವಿರುದ್ಧ ಅನೇಕ ಜನರು ಎನ್ ಜಿಟಿಗೆ ಅರ್ಜಿ ಹಾಕಿದ್ದರು. ಎಲ್ಲಾ ತಕರಾರುಗಳನ್ನು ವಜಾ ಮಾಡಿ ನಮ್ಮ ಪರವಾಗಿ ಎನ್ ಜಿಟಿ ತೀರ್ಪು ನೀಡಿತು. ಇದರಿಂದ ೫೨೭ ಕೆರೆಗಳಿಗೆ ನೀರನ್ನು ತುಂಬಿಸಲಾಗುತ್ತದೆ. ಏನಾದರೂ ಕೆಲಸ ಮಾಡುವ ಮುನ್ನ ವಜ್ರ ಯಾವುದು, ಕೆಸರು ಯಾವುದು ಎಂದು ತಿಳಿಯಬೇಕು. ವಜ್ರದಿಂದ ವಜ್ರವನ್ನು ಕತ್ತರಿಸಬಹುದು. ಆದರೆ ಕೆಸರಿನಿಂದ, ಕೆಸರನ್ನು ಸ್ವಚ್ಚ ಮಾಡಲು ಆಗುವುದಿಲ್ಲ. ವಜ್ರ ಯಾವುದು ಕೆಸರು ಯಾವುದು ಎಂಬುದನ್ನು ನೀವೇ ನಿರ್ಧಾರ ಮಾಡಿ ಎಂದರು.

ಬಯಲು ಸೀಮೆಯ ಬದುಕಿನ ನೀರು: ಎತ್ತಿಗೆ ಸಾಕಾಗುವಷ್ಟು ನೀರು ಮಾತ್ರ ಇಲ್ಲಿದೆ. ಈ ನೀರನ್ನು ಬೆಂಗಳೂರು ಸುತ್ತಮುತ್ತಾ ತೆಗೆದುಕೊಂಡು ಹೋಗಲು ಹೇಗೆ ಸಾಧ್ಯ ಎಂದು ಪತ್ರಕರ್ತರೊಬ್ಬರು ಹಾಸನ ಜಿಲ್ಲಾಧಿಕಾರಿಗಳ ಬಳಿ ಕೇಳಿದ್ದರಂತೆ. ಇದು ಎತ್ತಿಗಾಗಿ ನೀರಲ್ಲಿ, ಬಯಲು ಸೀಮೆಯ ಜನರ ಬದುಕಿಗಾಗಿ ಎತ್ತುತ್ತಿರುವ ನೀರು ಎಂದರು.

ಕಾಂಗ್ರೆಸ್ ಸರ್ಕಾರದ ಸಾಕ್ಷಿಗುಡ್ಡೆ: ಮನುಷ್ಯ ಹುಟ್ಟಿದ ಮೇಲೆ ಸಾಕ್ಷಿ ಗುಡ್ಡೆಗಳನ್ನು ಬಿಟ್ಟು ಹೋಗಬೇಕು. ಕರ್ನಾಟಕದಲ್ಲಿ ಆಲಮಟ್ಟಿ ಜಲಾಶಯಕ್ಕೆ ಲಾಲ್ ಬಹಾದ್ದೂರ್ ಶಾಸ್ತ್ರಿ ಅವರು ಶಂಕುಸ್ಥಾಪನೆ ಮಾಡಿದರು. ಅದನ್ನು ರಾಷ್ಟ್ರಪತಿ ಅಬ್ದುಲ್ ಕಲಾಂ ಅವರು ಉದ್ಘಾಟನೆ ಮಾಡಿದರು. ೨೦೧೪ ರಲ್ಲಿ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಕಾಮಗಾರಿ ಪ್ರಾರಂಭವಾಗಿ ಅವರಿಂದಲೇ ಉದ್ಘಾಟನೆಯಾಗುತ್ತಿದೆ. ಇದು ಕಾಂಗ್ರೆಸ್ ಸರ್ಕಾರದ ಸಾಕ್ಷಿ ಗುಡ್ಡೆ ಎಂದರು.

ಇದೇ ವೇಳೆ ರಾಜ್ಯದ ಜನರಿಗೆ ಗೌರಿ ಮತ್ತು ಗಣೇಶ ಹಬ್ಬದ ಶುಭಾಶಯಗಳನ್ನು ಡಿಸಿಎಂ ಅವರು ತಿಳಿಸಿದರು.

RELATED ARTICLES
- Advertisment -
Google search engine

Most Popular