Wednesday, June 24, 2026
Google search engine

Homeಸ್ಥಳೀಯಪ್ರತಿ ಮಗು ಅಮೂಲ್ಯ : 5 ವರ್ಷದೊಳಗಿನ ಮಕ್ಕಳಿಗೆ ಪಲ್ಸ್ ಪೋಲಿಯೋ ಕಡ್ಡಾಯ : ಜಿಲ್ಲಾಧಿಕಾರಿ...

ಪ್ರತಿ ಮಗು ಅಮೂಲ್ಯ : 5 ವರ್ಷದೊಳಗಿನ ಮಕ್ಕಳಿಗೆ ಪಲ್ಸ್ ಪೋಲಿಯೋ ಕಡ್ಡಾಯ : ಜಿಲ್ಲಾಧಿಕಾರಿ  ಜಿ ಲಕ್ಷ್ಮೀಕಾಂತ ರೆಡ್ಡಿ

ಮೈಸೂರು : 5 ವರ್ಷದೊಳಗಿನ ಪ್ರತಿಯೊಂದು ಮಗುವಿಗೂ ಪಲ್ಸ್ ಪೋಲಿಯೋ ಲಸಿಕೆಯನ್ನು ಕಡ್ಡಾಯವಾಗಿ ಹಾಕಿಸಿ ಎಂದು ಜಿಲ್ಲಾಧಿಕಾರಿ  ಜಿ ಲಕ್ಷ್ಮೀಕಾಂತ ರೆಡ್ಡಿ ಅವರು ತಿಳಿಸಿದರು.

ಇಂದು ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ ತಾಲ್ಲೂಕು ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳ  ಪೂರ್ವಸಿದ್ಧತಾ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಡಿಸಿ ಲಕ್ಷ್ಮೀಕಾಂತರೆಡ್ಡಿ, ಜಿಲ್ಲೆಯಲ್ಲಿ  ಪಲ್ಸ್ ಪೋಲಿಯೋ ಲಸಿಕಾ ಅಭಿಯಾನವನ್ನು ಶೇಕಡಾ ನೂರರಷ್ಟು ಯಶಸ್ವಿಗೊಳಿಸಲು ಎಲ್ಲಾ ಇಲಾಖೆಗಳು ಪರಸ್ಪರ ಸಮನ್ವಯತೆಯಿಂದ ಜವಾಬ್ದಾರಿಯುತವಾಗಿ ಕೆಲಸ ಮಾಡಬೇಕು ಎಂದು ಸೂಚನೆ ನೀಡಿದರು.

ಜೂನ್ 28 ರ ಭಾನುವಾರದಂದು ಲಸಿಕಾ ಕೇಂದ್ರಗಳ ಬೂತ್‌ ಗಳಲ್ಲಿ ಲಸಿಕೆ ಹಾಕಲಾಗುವುದು. ಜೂನ್ 29 ರಿಂದ ಜುಲೈ 1 ರವರೆಗೆ ಮನೆ ಮನೆಗೆ ಭೇಟಿ ನೀಡಿ 5 ವರ್ಷದೊಳಗಿನ ಎಲ್ಲಾ ಪ್ರತಿಯೊಂದು ಮಗುವಿಗೂ ಪೋಲಿಯೋ ಲಸಿಕೆ ಹಾಕುವ  ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.

ಪ್ರತಿ ಹನಿ ಅವಶ್ಯ, ಪ್ರತಿ ಮಗು ಅಮೂಲ್ಯ ಎಂಬ ಧ್ಯೇಯದೊಂದಿಗೆ ಹೆಚ್ಚಿನ ಅಪಾಯದ  ಪ್ರದೇಶಗಳು ಹಾಗೂ ಸಂಚಾರ ಕೇಂದ್ರಗಳಲ್ಲಿ 4 ದಿನಗಳ ವಿಶೇಷ ಅಭಿಯಾನ ನಡೆಯಲಿದೆ.  ಪೋಲಿಯೋ ಮುಕ್ತ ಸಮಾಜವನ್ನು ಉಳಿಸಿಕೊಳ್ಳಲು 5 ವರ್ಷದೊಳಗಿನ ಯಾವುದೇ ಒಂದು ಮಗುವೂ ಸಹ ಲಸಿಕೆಯಿಂದ ವಂಚಿತರಾಗಬಾರದು. ಅಭಿಯಾನದ ಸಮರ್ಪಕ ಅನುಷ್ಠಾನಕ್ಕಾಗಿ ವಿವಿಧ ಇಲಾಖೆಗಳಿಗೆ ಜವಾಬ್ದಾರಿ ವಹಿಸಲಾಗಿದೆ ಎಂದರು.

2026ನೇ ಸಾಲಿನ ರಾಷ್ಟ್ರೀಯ ಲಸಿಕಾ ದಿನದ  ಅಂಗವಾಗಿ ಮೈಸೂರು  ಜಿಲ್ಲೆಯಲ್ಲಿ ಐದು ವರ್ಷದೊಳಗಿನ ಒಟ್ಟು 2,19,521 ಮಕ್ಕಳಿಗೆ ಲಸಿಕೆ ನೀಡುವ ಮಹತ್ತರ ಗುರಿಯನ್ನು ಹೊಂದಲಾಗಿದೆ. ಜಿಲ್ಲೆಯ ಒಟ್ಟು 7,78,059 ಮನೆಗಳನ್ನು ತಲುಪಲು ಆರೋಗ್ಯ ಇಲಾಖೆ ಸಜ್ಜಾಗಿದೆ ಎಂದರು.

ನಗರಸಭೆ, ಪುರಸಭೆ ಹಾಗೂ ಮುನ್ಸಿಪಲ್ ಇಲಾಖೆ ನಗರ ಪ್ರದೇಶಗಳಲ್ಲಿ, ವಿಶೇಷವಾಗಿ ಮೈಸೂರು ನಗರದಲ್ಲಿ ಲಸಿಕಾ ಪ್ರಮಾಣ ಕುಂಠಿತವಾಗದಂತೆ ತಡೆಯಲು ಪ್ರತ್ಯೇಕ ನೋಡಲ್ ಅಧಿಕಾರಿ’ಗಳನ್ನು ನೇಮಿಸಿ ಕ್ರಿಯಾಯೋಜನೆ ರೂಪಿಸಬೇಕು. ಚೆಸ್ಕಾಂ ವತಿಯಿಂದ  ಪೋಲಿಯೋ ಲಸಿಕೆಯನ್ನು ಸುರಕ್ಷಿತವಾಗಿಡಲು ಹಾಗೂ ಶೀತಲ ಐಸ್ ಪ್ಯಾಕ್‌ ಗಳನ್ನು  ಕಾಯ್ದುಕೊಳ್ಳಲು ಜೂನ್ 26 ರಿಂದ ಜುಲೈ 2 ರವರೆಗೆ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ನಿರಂತರ ವಿದ್ಯುತ್ ಪೂರೈಕೆ ಮಾಡುವಂತೆ ಸೂಚನೆ ನೀಡಿದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ ಪಿ.ಸಿ ಕುಮಾರಸ್ವಾಮಿ ಅವರು ಮಾತನಾಡಿ ಲಸಿಕಾ ಅಭಿಯಾನವನ್ನು ಯಶಸ್ವಿಗೊಳಿಸಲು ಜಿಲ್ಲಾದ್ಯಂತ ವ್ಯಾಪಕ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದ್ದು, ಸಿಬ್ಬಂದಿ ಮತ್ತು ಕೇಂದ್ರಗಳನ್ನು ನಿಯೋಜಿಸಲಾಗಿದೆ. ​ಒಟ್ಟು 1,641 ಬೂತ್ ಗಳಲ್ಲಿ,1396 ಎಚ್.ಆರ್.ಎ  ಸೈಟ್‌ ಗಳು. 51 ಮೊಬೈಲ್ ಮತ್ತು ಟ್ರಾನ್ಸಿಟ್ ತಂಡಗಳು. 328,​ಮೇಲ್ವಿಚಾರಕರು, ​6772 ಲಸಿಕೆ ನೀಡುವ ಸಿಬ್ಬಂದಿಗಳನ್ನು ನೇಮಿಸಲಾಗಿದೆ ಎಂದರು.

ಜೂನ್ 26 ಮತ್ತು 27 ರಂದು ಎಲ್ಲಾ ಶಾಲೆಗಳಲ್ಲಿ ಕಡ್ಡಾಯವಾಗಿ ಪೋಲಿಯೋ ಜಾಗೃತಿ ಜಾಥಾ ನಡೆಸಿ ಜನರಲ್ಲಿ ಅರಿವು ಮೂಡಿಸಬೇಕು. ಪ್ರತಿ ಶಾಲೆಯಲ್ಲಿ ಒಬ್ಬ ವಿದ್ಯಾರ್ಥಿಯನ್ನು ರಾಯಭಾರಿ ಆಗಿ ಪ್ರೇರೇಪಿಸಬೇಕು.​ ಜೂನ್ 28 ರಂದು ಭಾನುವಾರ ಬೆಳಗ್ಗೆ 8:00 ಗಂಟೆಗೆ ಲಸಿಕಾ ಕಾರ್ಯಕ್ರಮಕ್ಕಾಗಿ ಶಾಲಾ ಕೊಠಡಿಗಳನ್ನು ಸಜ್ಜುಗೊಳಿಸಬೇಕು. ಪ್ರೌಢಶಾಲೆ ಮತ್ತು ಕಾಲೇಜುಗಳ ಎನ್.ಎಸ್.ಎಸ್  ಹಾಗೂ ಎನ್.ಸಿ.ಸಿ ವಿದ್ಯಾರ್ಥಿಗಳನ್ನು ಸ್ವಯಂಸೇವಕರನ್ನಾಗಿ ನಿಯೋಜಿಸಬೇಕು. ಪ್ರೀಸ್ಕೂಲ್, ಎಲ್.ಕೆ.ಜಿ, ಯು.ಕೆ.ಜಿ ಮಕ್ಕಳ ಪೋಷಕರಿಗೂ ಲಸಿಕೆ ಹಾಕಿಸಲು ಪ್ರೇರೇಪಿಸುವಂತೆ ತಿಳಿಸಿದರು.

ತಾಲ್ಲೂಕು ಮಟ್ಟದಲ್ಲಿ ಇ.ಒ ಅವರ ಅಧ್ಯಕ್ಷತೆಯಲ್ಲಿ ಅನುಷ್ಠಾನ ಸಮಿತಿ ರಚಿಸಬೇಕು. ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಕರಪತ್ರಗಳ ವಿತರಣೆ ಹಾಗೂ ಟಾಂ ಟಾಂ ಮೂಲಕ ಸಾರ್ವಜನಿಕ ಪ್ರಕಟಣೆ ಹೊರಡಿಸಬೇಕು. ಸಾಂಪ್ರದಾಯಿಕವಾಗಿ ತಲುಪಲು ಕಷ್ಟವಾಗುವ ಹಳ್ಳಿಗಳ ಪಟ್ಟಿ ಸಿದ್ಧಪಡಿಸಿ, ಲಸಿಕಾ ಕೇಂದ್ರದ ಸಿಬ್ಬಂದಿಗೆ ಊಟ ಹಾಗೂ ನೀರಿನ ವ್ಯವಸ್ಥೆ ಕಲ್ಪಿಸಬೇಕು. ಪಂಚಾಯಿತಿ ಜನಪ್ರತಿನಿಧಿಗಳು ಉಸ್ತುವಾರಿ ವಹಿಸಿಕೊಳ್ಳಬೇಕು ಎಂದು ಸೂಚಿಸಿದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಲಸಿಕಾ ದಿನದಂದು ಎಲ್ಲಾ ಅಂಗನವಾಡಿ ಕೇಂದ್ರಗಳನ್ನು ಕಡ್ಡಾಯವಾಗಿ ತೆರೆದು,  ಕಾರ್ಯಕರ್ತೆಯರು ಮತ್ತು ಮೇಲ್ವಿಚಾರಕರು ಸಕ್ರಿಯವಾಗಿ ಭಾಗವಹಿಸಬೇಕು. ಸ್ತ್ರೀಶಕ್ತಿ ಸಂಘಗಳು ಹಾಗೂ ಬಾಲ ವಿಕಾಸ ಸಮಿತಿಗಳ ಮೂಲಕ ತಾಯಂದಿರ ಸಭೆ ನಡೆಸಿ ಲಸಿಕೆಯ ಮಹತ್ವ ತಿಳಿಸಬೇಕು. ಸಿ.ಡಿ.ಪಿ.ಓ.ಗಳು ತಾಲ್ಲೂಕು ಮಟ್ಟದ ಉಸ್ತುವಾರಿ ನೋಡಿಕೊಳ್ಳಲಿದ್ದು, ಅನಾಥಾಶ್ರಮಗಳಲ್ಲಿರುವ ಮಕ್ಕಳಿಗೂ ಲಸಿಕೆ ತಲುಪಿಸಲು ಕ್ರಮ ಕೈಗೊಳ್ಳಲಿದ್ದಾರೆ ಎಂದರು.

ಸಭೆಯಲ್ಲಿ ಪೊಲೀಸ್ ವರಿಷ್ಠಾಧಿಕಾರಿ  ಮಲ್ಲಿಕಾರ್ಜುನ ಬಾಲದಂಡಿ , ಪಲ್ಸ್ ಪೋಲಿಯೋ ಅನುಷ್ಠಾನ ಅಧಿಕಾರಿ ಡಾ. ಸಿರಾಜ್ ಅಹಮದ್ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

RELATED ARTICLES
- Advertisment -
Google search engine

Most Popular