ಚಾಮರಾಜನಗರ : ಪ್ರತಿಯೊಬ್ಬ ಪತ್ರಕರ್ತರಿಗೂ ಕಾನೂನಿನ ಅರಿವು ಇರಬೇಕು ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಬಿಎಸ್ ಭಾರತಿ ಸಲಹೆ ನೀಡಿದರು.
ನಗರದ ಜಿಲ್ಲಾ ನ್ಯಾಯಾಲಯದ ಆವರಣದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ಜಿಲ್ಲಾ ವಕೀಲರ ಸಂಘದ ವತಿಯಿಂದ ನಡೆದ’ಪತ್ರಕರ್ತರಿಗೆ ಕಾನೂನು ಅರಿವು ಕಾರ್ಯಕ್ರಮ’ವನ್ನು ಗಿಡಕ್ಕೆ ನೀರು ಹಾಕುವ ಮೂಲಕ ಉದ್ಘಾಟಿಸಿ ಮಾತನಾಡಿದರು. ನಾವು ದಿನನಿತ್ಯ ನೀವು ಮಾಡುವ ಸುದ್ದಿಗಳನ್ನು ಎಲ್ಲಾ ಪತ್ರಿಕೆಗಳಲ್ಲಿ ನೋಡುತ್ತೇವೆ. ಅವುಗಳಲ್ಲಿ ಉತ್ತಮವಾದ ಸುದ್ದಿ ಬಂದಿರುತ್ತದೆ.ನಾವು ಮಾತನಾಡುವ ಭಾಷೆಗಿಂತ ಉತ್ತಮವಾದ ಭಾಷೆಯಲ್ಲಿ ನೀವು ಸುದ್ದಿ ಬರೆದಿರುತ್ತೀರಾ. ಅಲ್ಲದೆ ಯಾವುದೇ ಇತಿಮಿತಿ ಮೀರಿದಂತೆ ಬರೆದಿರುವುದಿಲ್ಲ ಆದ್ದರಿಂದ ಈಗಾಗಲೇ ನಿಮಗೆ ಕಾನೂನಿನ ಅರಿವು ಇದೆ ಎಂದು ಅಭಿಪ್ರಾಯ ಪಡುತ್ತೇವೆ.ಅಲ್ಲದೆ ಈ ರೀತಿ ಹೆಚ್ಚು ಹೆಚ್ಚು ಕಾರ್ಯಗಾರಗಳನ್ನು ಮಾಡಿ ಇನ್ನು ಹೆಚ್ಚಿನ ರೀತಿಯ ಕಾನೂನು ಅರಿವು ಮೂಡಿಸುವುದು ನಮ್ಮ ಆಸೆಯಾಗಿದೆ.ಆದರೆ ಪತ್ರಕರ್ತರು ಎಷ್ಟೇ ಕಾನೂನು ಅರಿವಿದ್ದರೂ ಹೊಸ ಹೊಸ ಕಾನೂನುಗಳ ಬಗ್ಗೆ ತಿಳಿಯುವುದು ಮುಖ್ಯ. ಇತ್ತೀಚಿನ ದಿನಗಳಲ್ಲಿ ಪತ್ರಕರ್ತರಿಗೆ ಹೆಚ್ಚಿನ ಅಪಾಯವಿರುತ್ತದೆ ಆದ್ದರಿಂದ ಎಚ್ಚರಿಕೆಯಿಂದ ಸುದ್ದಿಗಳನ್ನು ಮಾಡಬೇಕು ತಪ್ಪಿದಲ್ಲಿ ತೊಂದರೆಯಾಗುತ್ತದೆ.ಇಂತಹ ಕಾರ್ಯಗಾರಗಳಲ್ಲಿ ಭಾಗವಹಿಸಿ ಸದುಪಯೋಗಪಡಿಸಿಕೊಳ್ಳಬೇಕು ಎಂದು ತಿಳಿಸಿದರು.
ಜಿಲ್ಲಾ ವಕೀಲ ಸಂಘದ ಅಧ್ಯಕ್ಷ ಉಮ್ಮತೂರು ಇಂದುಶೇಖರ್ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ನೈಜ ಪತ್ರಕರ್ತರಿಗಿಂತ ನಕಲಿ ಪತ್ರದ ಹಾವಳಿ ಹೆಚ್ಚಾಗಿದೆ ಇದರಿಂದ ನೈಜ ಪತ್ರಕರ್ತರಿಗೆ ಕೆಟ್ಟ ಹೆಸರು ಬರುತ್ತಿದೆ ಆದ್ದರಿಂದ ಈ ಬಗ್ಗೆ ಅಧಿಕಾರಿಗಳು ಹಾಗೂ ಪೊಲೀಸರು ಕ್ರಮ ಜರುಗಿಸಬೇಕು.ಪತ್ರಕರ್ತರಿಗೆ ಬರವಣಿಗೆಯ ಶಕ್ತಿ ಇದೆ ಅದನ್ನು ಇನ್ನು ಹೆಚ್ಚಿನ ರೀತಿಯಲ್ಲಿ ಬಳಸಿ ಸಮಾಜದ ಹಾಗೂ ಹೋಗುಗಳನ್ನು ತಿಳಿಸಬೇಕು ಎಂದರು.
ಮೈಸೂರು ಪ್ರಜಾವಾಣಿ ಬ್ಯೂರೋ ಮುಖ್ಯಸ್ಥ ಕೆ.ನರಸಿಂಹಮೂರ್ತಿ ಮಾತನಾಡಿ, ಈ ಸಮಾಜದಲ್ಲಿ ಪತ್ರಕರ್ತರ ಜವಾಬ್ದಾರಿ ಬಹು ಮುಖ್ಯವಾಗಿದೆ.ಡಿಜಿಟಲ್ ಮೀಡಿಯಾ ಬರುವ ತನಕ ನಕಲಿ ಪತ್ರಕರ್ತರ ಹಾವಳಿ ಇರಲಿಲ್ಲ ಆದರೆ ಡಿಜಿಟಲ್ ಮೀಡಿಯಾ ಬಂದ ನಂತರ ಯಾರು ಬೇಕಾದರೂ ಪತ್ರಕರ್ತರಾಗಬಹುದು ಎಂಬುದಾಗಿದೆ. ಪತ್ರಕರ್ತರು ನೈಜತೆ ಆಧಾರದ ಮೇಲೆ ಸುದ್ದಿಗಳನ್ನು ಮಾಡಬೇಕು ಅಲ್ಲದೆ ನೈತಿಕ ಜವಾಬ್ದಾರಿ ಅರಿತು ಕೆಲಸ ಮಾಡಬೇಕು. ಸರಿಯಾದ ಹಾಗೂ ನೈಜ ಸಮಾಜಕ್ಕೆ ಉತ್ತಮ ಸುದ್ದಿಗಳನ್ನು ಕೊಡುವುದು ಜವಾಬ್ದಾರಿಯಾಗಿದೆ. ಪತ್ರಕರ್ತರಿಗೆ ಬರವಣಿಗೆ, ಮಾರ್ಕೆಟಿಂಗ್ ಅರಿವಿನ ಜೊತೆಗೆ ವಿಷಯ ಆಧಾರಿತ ಜ್ಞಾನ ಅಗತ್ಯ. ತಾವು ಮಾಡುವ ವರದಿಗೆ ಜವಾಬ್ದಾರಿಯ ಆಗಿರಬೇಕು ಎಂದು ತಿಳಿಸಿದರು
ಈ ಸಂದರ್ಭದಲ್ಲಿ ಅಪಾರ ಪ್ರಧಾನ ಜಿಲ್ಲಾ ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಮಕ್ಕಳ ಸ್ನೇಹಿ ನ್ಯಾಯಾಧೀಶರಾದ ಎಸಿ.ನಿಶಾರಾಣಿ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಕಾರ್ಯದರ್ಶಿ ಎಂ.ಶ್ರೀಧರ್, ವಾರ್ತಾ ಇಲಾಖೆಯ ಸಹಾಯಕ ನಿರ್ದೇಶಕ ರಮೇಶ್,ಜಿಲ್ಲಾ ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ವಿರೂಪಾಕ್ಷಸ್ವಾಮಿ ಇದ್ದರು