ಮೈಸೂರು: ಸ್ವಾತಂತ್ರ್ಯ ಬಂದು ೭೫ ವರ್ಷಗಳೇ ಕಳೆದರೂ ಡಾ.ಬಿ.ಆರ್.ಅಂಬೇಡ್ಕರ್ ಆಶಯದಂತೆ ಇಂದಿಗೂ ಪ್ರತಿಯೊಬ್ಬರಿಗೂ ಸಮಾನತೆ ದೊರೆತಿಲ್ಲ. ಆರ್ಥಿಕ, ರಾಜಕೀಯ ಸಮಾನತೆ ದೊರೆತರಷ್ಟೇ ಸಮಾಜದಲ್ಲಿ ಬದಲಾವಣೆ ತರಲು ಸಾಧ್ಯ ಎಂದು ಮೈಸೂರು ವಿಶ್ವವಿದ್ಯಾನಿಲಯದ ಕಾನೂನು ನಿಕಾಯದ ಡೀನ್ ಪ್ರೊ.ಟಿ.ಆರ್.ಮಾರುತಿ ಹೇಳಿದರು.
ಯುವರಾಜ ಕಾಲೇಜಿನ ಅಮೃತ ಮಹೋತ್ಸವ ಸಭಾಂಗಣದಲ್ಲಿ ಬುಧವಾರ ಆಯೋಜಿಸಿದ್ದ ಭಾರತರತ್ನ ಡಾ.ಬಿ.ಆರ್.ಅಂಬೇಡ್ಕರ್ ಅವರ ೧೩೨ನೇ ಜಯಂತೋತ್ಸವ ಸವಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಇಂದು ಮಾಯವಾಗುತ್ತಿರುವ ಪ್ರಜಾಪ್ರಭುತ್ವದಲ್ಲಿ ಮಾನವ ಹಕ್ಕುಗಳ ಉಲ್ಲಂಘನೆಯಾಗುತ್ತಿದೆ. ಸಂವಿಧಾನ ಬದಲಾವಣೆ ಮಾಡಲು ಹೊರಟರೆ ಯಾವ ಸಂವಿಧಾನ ತರುತ್ತೀರಾ ಎನ್ನುವ ಸ್ಪಷ್ಟತೆ ಇಲ್ಲ. ಸಂವಿಧಾನವನ್ನು ಬದಲಿಸಲು ಸಾಧ್ಯವಾಗುವುದಿಲ್ಲ ಎನ್ನುವುದು ಗೊತ್ತಿದ್ದರೂ ಸಂಪೂರ್ಣವಾಗಿ ಅರಿಯದ ಮನುವಾದಿಗಳು ತಿರುಚುವ ಕೆಲಸಕ್ಕೆ ಕೈ ಹಾಕುತ್ತಿರುವುದನ್ನು ಗಮನಿಸಬೇಕು ಎಂದು ಹೇಳಿದರು.
ಡಾ.ಬಿ.ಆರ್.ಅಂಬೇಡ್ಕರ್ ಬಗ್ಗೆ ಪ್ರಪಂಚಾದ್ಯಂತ ಜುಯಂತಿ ಆಚರಿಸಿಕೊಂಡು ಬರಲಾಗುತ್ತಿದೆ. ಪ್ರಸ್ತುತ ದಿನಗಳಲ್ಲಿ ಸಂವಿಧಾನ ಬದ್ದವಾಗಿ ನಡೆದುಕೊಂಡು ನಾವು ಬರುತ್ತಿದ್ದೇವೆಯೇ ಎನ್ನುವ ಕುರಿತು ಚಿಂತನೆ ಮಾಡಬೇಕು. ಸಂವಿಧಾನವನ್ನು ಸರಿಯಾಗಿ ಅರ್ಥ ಮಾಡಿಕೊಳ್ಳಬೇಕು. ಸಂವಿಧಾನ ಎಂದರೆ ಜನತೆ ಎಂದು ಭಾವಿಸಬೇಕು. ಅಂಬೇಡ್ಕರ್ ಜನರ ಸಮಸ್ಯೆಗಳನ್ನು ಅರ್ಥ ಮಾಡಿಕೊಂಡು ಸಂವಿಧಾನ ಬರೆದರು ಎಂದು ನುಡಿದರು.
ಸಂವಿಧಾನದಲ್ಲಿ ಹಲವಾರು ಕಾನೂನುಗಳು ಇವೆ. ಸಂವಿಧಾನದ ಒಳಹೊಕ್ಕು ನೋಡಬೇಕು. ನಮ್ಮನ್ನು ನಾವು ಅರ್ಥ ಮಾಡಿಕೊಂಡರೆ ಸಂವಿಧಾನ ಅರ್ಥ ಮಾಡಿಕೊಳ್ಳಲು ಸಾಧ್ಯವಿದೆ. ಸ್ವಾತಂತ್ರ್ಯ ಬಂದು ೭೫ ವರ್ಷ ಆಗಿದ್ದರೂ ಇಂದಿಗೂ ದಲಿತರು, ಮಕ್ಕಳು, ಮಹಿಳೆಯರ ಮೇಲಿನ ದೌರ್ಜನ್ಯ ನಿಂತಿಲ್ಲ. ಕಾನೂನು ಇದ್ದರೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ದೌರ್ಜನ್ಯ ಕಾಯಿದೆ ಇದ್ದರೂ ಅನೇಕ ಕಡೆ ದಲಿತರ ಮೇಲೆ ಮಾನಸಿಕ ದೌರ್ಜನ್ಯ ನಡೆಸಲಾಗುತ್ತಿದೆ ಎಂದು ಅಸಮಧಾನ ವ್ಯಕ್ತಪಡಿಸಿದರು.
ಸಮಾನತೆ ಮತ್ತು ಸಾಮಾಜಿಕ ನ್ಯಾಯದ ಬಗ್ಗೆ ಮಾತನಾಡುತ್ತೇವೆ. ದೇಶದ ಸಂವಿಧಾನ ಸಾಮಾಜಿಕ ಡಾಕ್ಯುಮೆಂಟ್ ಇದ್ದ ಹಾಗೆ. ಸಂವಿಧಾನ ಓದುವಾಗ ಅಂಬೇಡ್ಕರ್ ಕಾಣಿಸುತ್ತಾರೆ. ಎಸ್‌ಸಿ-ಎಸ್‌ಟಿ, ಹಿಂದುಳಿದ ವರ್ಗಗಳ ಬಗ್ಗೆ ಪಾಲಿಗೆ ಸಂವಿಧಾನ ಗ್ರಂಥವಾಗಿದೆ. ಸಂವಿಧಾನ ನಾಟಕ ಕವಿತೆ, ಕವನ ಕಾದಂಬರಿ ಅಲ್ಲ. ಅದನ್ನು ಆಳವಾಗಿ ಅರ್ಥೈಸಿಕೊಳ್ಳಲ್ಲ. ಹೃದಯದಲ್ಲಿ ಮನುವಾದ, ಬಾಯಲ್ಲಿ ಜೈ ಭೀಮ್ ಎನ್ನುತ್ತಾರೆ. ಯಾವುದೋ ವಿಚಾರದ ವಾದ ಮುಂದಿಟ್ಟು ಜನರಲ್ಲಿ ಗೊಂದಲ ಮೂಡಿಸುವ ಕೆಲಸ ಮಾಡಲಾಗುತ್ತಿದೆ ಎಂದರು.
ಎನ್‌ಸಿಆರ್‌ಬಿ ವರದಿ ಪ್ರಕಾರ ಉತ್ತರಪ್ರದೇಶ, ರಾಜಸ್ಥಾನ ಹಾಗೂ ಮಧ್ಯಪ್ರದೇಶದಲ್ಲಿ ದಲಿತರ ಮೇಲಿನ ದೌರ್ಜನ್ಯ ಕಾಯಿದೆಗಳು ದಾಖಲಾಗುತ್ತಿವೆ. ಅಟ್ರಾಸಿಟಿ ಕಾಯಿದೆ ಇದ್ದರೂ ನಿಯಂತ್ರಣ ಮಾಡಲಾಗುತ್ರಿಲ್ಲ. ಈ ಕಾನೂನು ಏನಾದರೂ ಸತ್ತು ಹೋಗಿದೆಯೇ? ಅಟ್ರಾಸಿಟಿ ಮೊಕದ್ದಮೆ ದಾಖಲಾದ ತಕ್ಷಣವೇ ಆರೋಪಿಗಳನ್ನು ಬಂಧಿಸಬೇಕೆಂಬ ವಿಚಾರ ಇದ್ದರೂ ಆರೋಪಿಗಳಿಗೆ ನಿರೀಕ್ಷಣಾ ಜಾಮೀನು ದೊರೆಯುತ್ತಿದೆ. ರಾಜಕೀಯ ಸಾಮಾಜಿಕ ಹಾಗೂ ಆರ್ಥಿಕ ಸಮಾನತೆ ಬರಬೇಕು. ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಅಂಬೇಡ್ಕರ್ ಆಶಯದಂತೆ ಸಾಮಾಜಿಕ ನ್ಯಾಯ ದೊರೆಯಬೇಕು ಎಂದರು.
ಅಂಬೇಡ್ಕರ್ ಶೈಕ್ಷಣಿಕ ವಿಚಾರಗಳನ್ನು ಅರಿಯಲು ವಿಫಲರಾಗಿದ್ಧೇವೆ. ಸಂಶೋಧನೆಯಲ್ಲಿ ಮನೋಧರ್ಮ, ಸಮಾನತೆ ಶಿಕ್ಷಣ ಅಳವಡಿಸಲು ಸಾಧ್ಯವಾಗಿಲ್ಲ. ಖಾಸಗೀಕರಣ ಮತ್ತು ಆರ್ಥಿಕ ಮೀಸಲಾತಿ ಬರುತ್ತಿಲ್ಲ. ಮೀಸಲಾತಿ ವಿರೋಧಿ ಶಕ್ತಿಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಕಾರಣ ಬಹಳ ಅಪಾಯ ಉಂಟಾಗುವ ಪರಿಸ್ಥಿತಿ ನಿರ್ಮಾಣ ಆಗಬಹುದು ಎಂದು ಆತಂಕ ವ್ಯಕ್ತಪಡಿಸಿದರು.
ಪ್ರಾಂಶುಪಾಲ ಪ್ರೊ.ಎಚ್.ಸಿ.ದೇವರಾಜೇಗೌಡ ಅಧ್ಯಕ್ಷತೆ ವಹಿಸಿದ್ದರು. ಆಡಳಿತಾಧಿಕಾರಿ ಪ್ರೊ.ಎಸ್.ಮಹದೇವಮೂರ್ತಿ, ಪರೀಕ್ಷಾ ನಿಯಂತ್ರಣಾಧಿಕಾರಿ ಪ್ರೊ.ಕೆ.ಬಿ.ಉಮೇಶ್, ಜ್ಞಾನವಾಹಿನಿ ಸಮಿತಿ ಸಂಚಾಲಕ ಪ್ರಾಧ್ಯಾಪಕ ಜಿ.ಕೃಷ್ಣಮೂರ್ತಿ ಹಾಜರಿದ್ದರು.