ವರದಿ: ವಿನಯ್ ದೊಡ್ಡ ಕೊಪ್ಪಲು
ಕೆ.ಆರ್.ನಗರ: ಸಮಾಜ ಅಭಿವೃದ್ದಿ ಹೊಂದ ಬೇಕಾದರೆ ಶಿಕ್ಷಣ ಬಹಳ ಮುಖ್ಯ ಆದ್ದರಿಂದ ಪ್ರತಿಯೊಬ್ಬರು ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಬೇಕು ಎಂದು ವಿಧಾನ ಪರಿಷತ್ ಸದಸ್ಯ ಎಚ್.ವಿಶ್ವನಾಥ್ ಹೇಳಿದರು.
ಸಂಗೊಳ್ಳಿ ರಾಯಣ್ಣ ಪ್ರಾಥಮಿಕ ಶಾಲಾ ಶಿಕ್ಷಕರ ಕ್ಷೇಮಾಭಿವೃದ್ದಿ ಸಂಘದ ವತಿಯಿಂದ ಪಟ್ಟಣದ ಸಮುದಾಯ ಭವನದಲ್ಲಿ ನಡೆದ ಪ್ರತಿಭಾ ಪುರಸ್ಕಾರ, ನಿವೃತ್ತ ಶಿಕ್ಷಕರಿಗೆ ಸನ್ಮಾನ ಮತ್ತು ಸಂಘದ ೯ನೇ ವರ್ಷದ ವಾರ್ಷಿಕೋತ್ಸವ ಹಾಗೂ ಅಭಿನಂದನಾ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಸಮಾಜದ ಮಕ್ಕಳ ವಿದ್ಯಾಭ್ಯಾಸಕ್ಕೆ ಸಂಘ ಸಂಸ್ಥೆಗಳು ಮತ್ತು ಚುನಾಯಿತ ಸದಸ್ಯರು ಸಹಕಾರ ನೀಡಬೇಕೆಂದು ಸಲಹೆ ನೀಡಿದ ವಿಧಾನ ಪರಿಷತ್ ಸದಸ್ಯರು ದೇವರಾಜ್‌ಅರಸು ಸರ್ಕಾರದಲ್ಲಿ ಮಂತ್ರಿಯಾಗಿದ್ದ ಟಿ.ಮರಿಯಪ್ಪರವರ ಸಹಕಾರದಿಂದ ಕುರುಬ ಸಮಾಜದ ಮಕ್ಕಳು ಶಿಕ್ಷಿತರಾಗಲು ಸಾಕಷ್ಟು ಅನುಕೂಲವಾಗಿತ್ತು. ಮಧುವನಹಳ್ಳಿ ಬಡಾವಣೆಯಲ್ಲಿ ವಿದ್ಯಾರ್ಥಿ ನಿಲಯ ಮತ್ತು ಶಾಲೆ ಆರಂಭಿಸಲು ಅವರ ಕೊಡುಗೆ ಅಪಾರವಾಗಿದೆ ಎಂದರು.
ಶೆಫರ್ಡ್ಸ್ ಇಂಡಿಯಾ ಇಂಟರ್‌ನ್ಯಾಷಿನಲ್ ಸಂಸ್ಥೆ ಸಾಕಷ್ಟು ಬಲಗೊಂಡಿದ್ದು ದೇಶದಲ್ಲಿ ಇರುವ ೧೨ ಕೋಟಿ ಕುರುಬ ಸಮಾಜವನ್ನು ಸಂಘಟಿಸುವ ಕೆಲಸ ಮಾಡುತ್ತಿದ್ದೇವೆ ಸಮುದಾಯದ ವಿದ್ಯಾರ್ಥಿಗಳು ಹೆಚ್ಚಿನ ಅಧ್ಯಾಯನಕ್ಕೆ ಹೊರ ದೇಶಕ್ಕೆ ಹೋಗುವಂತಹವರಿಗೆ ಸಂಸ್ಥೆ ವತಿಯಿಂದ ಎಲ್ಲಾ ರೀತಿಯ ವ್ಯವಸ್ಥೆ ಕಲ್ಪಿಸುತ್ತಿದ್ದು ಇದರ ಸದ್ಬಳಕೆ ಮಾಡಿಕೊಂಡು ಉತ್ತಮ ಶಿಕ್ಷಣ ಪಡೆಯಬೇಕು ಎಂದು ಸಲಹೆ ನೀಡಿದರು.
ಕೆ.ಆರ್.ನಗರದ ಹಳೆ ಗ್ರಂಥಾಲಯದ ಆವರಣದಲ್ಲಿ ಉನ್ನತ ಶಿಕ್ಷಣ ಪಡೆಯುವ ವಿದ್ಯಾರ್ಥಿಗಳಿಗೆ ಅನುಕೂಲ ಕಲ್ಪಿಸಲು ಹೈಟೆಕ್ ಮಾದರಿಯ ಗ್ರಂಥಾಲಯ ನಿರ್ಮಾಣ ಮಾಡಬೇಕು ಈ ಬಗ್ಗೆ ಶಾಸಕ ಡಿ.ರವಿಶಂಕರ್ ಗಮನ ಹರಿಸಿ ಸರ್ಕಾರದಿಂದ ಅಗತ್ಯ ಅನುದಾನ ಮಂಜೂರು ಮಾಡಿಸಿ ಜಿಲ್ಲಾ ಮಟ್ಟದ ಗ್ರಂಥಾಲಯ ನಿರ್ಮಾಣ ಮಾಡಬೇಕು ಎಂದು ಹೇಳಿದರು.
ಶಾಸಕ ಡಿ.ರವಿಶಂಕರ್ ಮಾತನಾಡಿ ಸಮಾಜದ ವಿದ್ಯಾರ್ಥಿಗಳು ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿಯಲ್ಲಿ ಹೆಚ್ಚು ಅಂಕಗಳಿಸುವುದರ ಜತೆಗೆ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ತೆಗೆದುಕೊಂಡು ಉನ್ನತ ಮಟ್ಟದ ಅಧಿಕಾರಿಗಳಾಗುವಂತೆ ಕಿವಿ ಮಾತು ಹೇಳಿದಲ್ಲದೆ ಬಡ ಮಕ್ಕಳ ಶಿಕ್ಷಣಕ್ಕೆ ಎಲ್ಲಾ ರೀತಿಯ ಸಹಕಾರ ನೀಡುವುದಾಗಿ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ೧೪ ಮಂದಿ ವೈದ್ಯ ವಿದ್ಯಾರ್ಥಿಗಳು ಸೇರಿದಂತೆ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ಆರ್‌ಟಿಒ ಅಧಿಕಾರಿ ಮಲ್ಲಿಕಾರ್ಜುನ್, ಕ್ಷೇಮಾಭಿವೃದ್ದಿ ಸಂಘದ ಅಧ್ಯಕ್ಷ ಜಿ.ಎ.ನಾಗರಾಜು, ಪ್ರಧಾನ ಕಾರ್ಯದರ್ಶಿ ಬಿ.ಭಾಸ್ಕರ್ ಮಾತನಾಡಿದರು.
ತಾಲೂಕು ಕುರುಬರ ಸಂಘದ ಅಧ್ಯಕ್ಷ ಚರ‍್ನಹಳ್ಳಿಶಿವಣ್ಣ, ಉಪಾಧ್ಯಕ್ಷ ಕೆ.ಎಂ.ಶ್ರೀನಿವಾಸ್, ಪುರಸಭೆ ಸದಸ್ಯ ನಟರಾಜು, ಟಿಎಪಿಸಿಎಂಎಸ್ ನಿರ್ದೇಶಕ ದೊಡ್ಡಕೊಪ್ಪಲುರವಿ, ಮುಖಂಡರಾದ ಕುಳ್ಳಬೋರೆಗೌಡ, ಆನಂದ್, ಡಾ.ಶ್ರೀಕಾಂತ್, ಉಮೇಶ್, ಸಂಘದ ಪದಾಧಿಕಾರಿಗಳಾದ ಕಾಳೇಗೌಡ, ಕಲಾವಿದಮಹದೇವ್, ಸಿ.ಎನ್.ಸ್ವಾಮಿ, ಹೆಚ್.ಡಿ.ಚಿಕ್ಕೇಗೌಡ, ಮಂಜುನಾಥ್, ಪ್ರಮಿಳಾ, ಮಂಜುರಾಜ್, ಜ್ಯೋತಿಶ್ವರಿ, ವಸಂತ್‌ಕುಮಾರ್, ನಾಗರಾಜು ಮತ್ತಿತರರು ಇದ್ದರು.