Saturday, April 19, 2025
Google search engine

Homeರಾಜ್ಯಭಾಷಾತೀತ, ಜಾತ್ಯತೀತವಾಗಿ ಎಲ್ಲರೂ ಬೆಂಗಳೂರು ಬಂದ್‌ಗೆ ಬೆಂಬಲ ನೀಡಬೇಕು: ಮುಖ್ಯಮಂತ್ರಿ ಚಂದ್ರು

ಭಾಷಾತೀತ, ಜಾತ್ಯತೀತವಾಗಿ ಎಲ್ಲರೂ ಬೆಂಗಳೂರು ಬಂದ್‌ಗೆ ಬೆಂಬಲ ನೀಡಬೇಕು: ಮುಖ್ಯಮಂತ್ರಿ ಚಂದ್ರು

ಬೆಂಗಳೂರು: ಕಾವೇರಿ ನೀರಿಗಾಗಿ ಸೆ. ೨೬ರಂದು ಬೆಂಗಳೂರು ಬಂದ್‌ಗೆ ಕರೆ ನೀಡಲಾಗಿದ್ದು, ಭಾಷಾತೀತವಾಗಿ, ಜಾತ್ಯತೀತವಾಗಿ ಎಲ್ಲರೂ ಬಂದ್‌ಗೆ ಬೆಂಬಲ ನೀಡಬೇಕು. ಎಲ್ಲರಿಗೂ ನೀರು ಅನಿವಾರ್ಯವಾಗಿದ್ದು, ಎಲ್ಲರೂ ಬೀದಿಗಿಳಿಯಬೇಕು ಎಂದು ಆಮ್ ಆದ್ಮಿ ಪಕ್ಷದ ರಾಜ್ಯಾಧ್ಯಕ್ಷ ಡಾ ಮುಖ್ಯಮಂತ್ರಿ ಚಂದ್ರು ಮನವಿ ಮಾಡಿದರು.

ಆಮ್ ಆದ್ಮಿ ಪಕ್ಷದ ರಾಜ್ಯಾಧ್ಯಕ್ಷ ಡಾ ಮುಖ್ಯಮಂತ್ರಿ ಚಂದ್ರು ಹಾಗೂ ಕುರುಬೂರು ಶಾಂತಕುಮಾರ್ ಅವರ ನೇತೃತ್ವದ ಕರ್ನಾಟಕ ಜಲ ಸಂರಕ್ಷಣಾ ಸಮಿತಿ, ತಮಿಳುನಾಡಿಗೆ ಕಾವೇರಿ ನೀರು ಹರಿಸುವುದನ್ನು ವಿರೋಧಿಸಿ ಕರೆ ನೀಡಿರುವ ಬೆಂಗಳೂರು ಬಂದ್‌ಗೆ ೧೫೦ಕ್ಕೂ ಹೆಚ್ಚು ಸಂಘಟನೆಗಳು ಬೆಂಬಲ ವ್ಯಕ್ತಪಡಿಸಿವೆ.

ಈ ಕುರಿತು ಫ್ರೀಡಂ ಪಾರ್ಕ್‌ನಲ್ಲಿ ನಡೆದ ಮಾಧ್ಯಮಗೋಷ್ಟಿ ಉದ್ದೇಶಿಸಿ ಮಾತನಾಡಿದ ಅವರು, ಪಕ್ಷಾತೀತವಾಗಿ ಎಲ್ಲರೂ ಬಂದ್‌ಗೆ ಬೆಂಬಲ ನೀಡಿದ್ದಾರೆ. ನೀರು ಖಾಲಿಯಾದ ಮೇಲೆ ಹೋರಾಟ ಮಾಡಿ ಪ್ರಯೋಜನ ಇಲ್ಲ. ತಕ್ಷಣವೇ ತಮಿಳುನಾಡಿಗೆ ಹರಿಸುತ್ತಿರುವ ನೀರನ್ನು ನಿಲ್ಲಿಸಬೇಕು. ಅಧಿವೇಶನ ಕರೆದು ಚರ್ಚೆ ನಡೆಸಿ ಸಂಕಷ್ಟ ಸೂತ್ರ ಜಾರಿ ಮಾಡುವವರೆಗೆ ನೀರು ಬಿಡುವುದಿಲ್ಲ ಎಂದು ನಿರ್ಣಯ ತೆಗೆದುಕೊಳ್ಳಬೇಕು. ಕಾವೇರಿ ನೀರು ನಿರ್ವಹಣಾ ಮಂಡಳಿ ಮತ್ತು ಕಾವೇರಿ ಪ್ರಾಧಿಕಾರದ ಅಧಿಕಾರಿಗಳು ರಾಜಕೀಯ ಒತ್ತಡಕ್ಕೆ ಮಣಿದು ವಾಸ್ತವ ಅರಿಯದೇ ಆದೇಶ ಮಾಡುತ್ತಿದ್ದು, ಇವುಗಳನ್ನು ರದ್ದು ಮಾಡಿ, ಸ್ವತಂತ್ರವಾಗಿ ಕಾರ್ಯ ನಿರ್ವಹಿಸುವ ಮಂಡಳಿ ರಚಿಸಲು ಒತ್ತಾಯಿಸಿ ಬಂದ್‌ಗೆ ಕರೆ ನೀಡಲಾಗಿದೆ ಎಂದು ಮಾಹಿತಿ ನೀಡಿದರು.

ಸೆಪ್ಟೆಂಬರ್ ೨೬ ರಂದು ಬೆಳಗ್ಗೆ ೧೧ ಗಂಟೆಗೆ ಟೌನ್‌ಹಾಲ್ ಬಳಿ ಸೇರಲಾಗುವುದು. ಅಲ್ಲಿಂದ ಮೆರವಣಿಗೆ ಮೂಲಕ ಫ್ರೀಡಂ ಪಾರ್ಕ್‌ಗೆ ಬಂದು ಸೇರಲಾಗುವುದು. ಅಲ್ಲಿ ಪ್ರತಿಭಟನೆ ನಡೆಸಲಾಗುವುದು. ಸಿಎಂ ಸಿದ್ದರಾಮಯ್ಯರಿಗೆ ಒತ್ತಾಯ ಪತ್ರ ನೀಡಲಾಗುವುದು. ಅವರು ಸರಿಯಾಗಿ ಸ್ಪಂದಿಸದಿದ್ದರೆ, ಹೋರಾಟ ತೀವ್ರಗೊಳಿಸಲಾಗುವುದು. ರಾಮನಗರ, ಮಂಡ್ಯ, ಮಳವಳ್ಳಿ, ಟಿ ನರಸೀಪುರ ಸೇರಿದಂತೆ ಹಲವು ಕಡೆಗಳಲ್ಲಿ ಬಂದ್ ಮಾಡುವ ಮೂಲಕ ಬೆಂಬಲ ವ್ಯಕ್ತಪಡಿಸಲಿದ್ದಾರೆ ಎಂದರು.

ಶಾಂತಿಯುತ ಬಂದ್ ಆಚರಿಸಲು ಮನವಿ: ಶಾಂತಿಯುತವಾಗಿ ಬಂದ್ ಆಚರಿಸಬೇಕು. ಬಂದ್ ಬೆಂಬಲಿಸುವ ಸಂಘಟನೆಗಳು ಕೂಡ ಶಾಂತ ರೀತಿಯಿಂದ ಜನರ ಮನವೊಲಿಸಿ ಬಂದ್ ಮಾಡಬೇಕು. ಯಾವುದೇ ಅಹಿತಕರ ಘಟನೆಗಳಿಗೆ ಅವಕಾಶ ಕೊಡಬಾರದು. ಹೋರಾಟ ಹತ್ತಿಕ್ಕಲು ದುಷ್ಟಶಕ್ತಿಗಳು ಕೂಡ ಪ್ರಯತ್ನಿಸಬಹುದು. ಪೊಲೀಸರು ಸೂಕ್ತ ಮುನ್ನೆಚ್ಚರಿಕೆ ವಹಿಸುವಂತೆ ಒತ್ತಾಯಿಸಿದರು.

ಆಮ್ ಆದ್ಮಿ ಪಾರ್ಟಿಯ ಬೆಂಗಳೂರಿನ ಎಲ್ಲ ಪದಾಧಿಕಾರಿಗಳು, ಕಾರ್ಯಕರ್ತರು ಹಾಗೂ ಬೆಂಗಳೂರಿನ ಸುತ್ತಮುತ್ತಲಿರುವ ಎಲ್ಲಾ ಜಿಲ್ಲಾ ತಂಡಗಳು ಹೆಚ್ಚಿನ ಸಂಖ್ಯೆಯಲ್ಲಿ ಹೋರಾಟದಲ್ಲಿ ಭಾಗವಹಿಸುತ್ತಿದ್ದು, ಯಶಸ್ವಿಗೊಳಿಸಬೇಕು ಎಂದು ಆಮ್ ಆದ್ಮಿ ಪಕ್ಷದ ಉಪಾಧ್ಯಕ್ಷ ಮೋಹನ್ ದಾಸರಿ ಹೇಳಿದರು.

RELATED ARTICLES
- Advertisment -
Google search engine

Most Popular