ವರದಿ : ಚಪ್ಪರದಹಳ್ಳಿ ವಿನಯ್ ಕುಮಾರ್
ಬೆಟ್ಟದಪುರ: ಗ್ರಾಮೀಣ ಬ್ಯಾಂಕಿನಲ್ಲಿ ಇರುವಂತಹ ವಿಮೆ ಸೌಲಭ್ಯಗಳನ್ನು ಪ್ರತಿಯೊಬ್ಬರು ಸದುಪಯೋಗ ಮಾಡಿಕೊಳ್ಳಿ ಎಂದು ಕರ್ನಾಟಕ ಗ್ರಾಮೀಣ ಬ್ಯಾಂಕಿನ ಚಪ್ಪರದಹಳ್ಳಿ ಶಾಖೆಯ ವ್ಯವಸ್ಥಾಪಕ ಜಿ.ಮಧುಸೂಧನ್ ಹೇಳಿದರು.
ಬೆಟ್ಟದಪುರ ಸಮೀಪದ ಚಪ್ಪರದಹಳ್ಳಿ ಗ್ರಾಮದ ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ಬುಧವಾರ ಕರ್ನಾಟಕ ಗ್ರಾಮೀಣ ಬ್ಯಾಂಕಿನಿಂದ ಆಯೋಜಿಸಿದ ಜನಸುರಕ್ಷಾ ಯೋಜನೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕೆಟ್ಟ ಸಮಯ, ಸಂದರ್ಭದಿಂದ ಕುಟುಂಬಕ್ಕೆ ಆಸರೆ ಆದವರನ್ನು ನಾವು ಕಳೆದುಕೊಂಡಾಗ ದಿಕ್ಕು ಇಲ್ಲದಂತೆ ಆಗತ್ತದೆ. ಕಷ್ಟದಲ್ಲಿ ಇರುವಂತ ಕುಟುಂಬಗಳಿಗೆ ಕೊನೆಯಲ್ಲಿ ಆರ್ಥಿಕವಾಗಿ ಸಹಾಯ ಮಾಡುವುದು ವಿಮೆ ಯೋಜನೆಗಳು ಮಾತ್ರ. ಹಾಗಾಗಿ ಪ್ರತಿಯೊಬ್ಬರೂ ವಿಮೆ ಸೌಲಭ್ಯಗಳನ್ನು ಸದ್ಬಳಕೆ ಮಾಡಿಕೊಳ್ಳಿ ಎಂದರು.
ಕೇಂದ್ರ ಸರ್ಕಾರದ ಪ್ರಧಾನ ಮಂತ್ರಿ ಜೀವನ್ ಜ್ಯೋತಿ, ಪ್ರಧಾನ ಮಂತ್ರಿ ಸುರಕ್ಷಾ ಭೀಮ ವಿಮೆ ಸೌಲಭ್ಯಗಳು ಹಾಗೂ ಅಟಲ್ ಪಿಂಚಣಿ ಯೋಜನೆ ಎಂಬ ಹಲವಾರು ಯೋಜನೆಗಳ ಸೌಲಭ್ಯಗಳಿವೆ. ಇವುಗಳ ನೋಂದಣಿಗಾಗಿ ಶಾಖೆಗೆ ಭೇಟಿ ನೀಡಿ ಮಾಹಿತಿ ಪಡೆದುಕೊಳ್ಳಬಹುದು. ಅಲ್ಲದೆ ಬೆಳೆ ಸಾಲ ಪಡೆದಂತ ರೈತರು ಸಾಲ ಪಡೆದ ಒಂದು ವರ್ಷದೊಳಗೆ ಸಾಲವನ್ನು ಸುಸ್ತಿ ಮಾಡದೇ, ನವೀಕರಣ ಮಾಡಿಸಿದರೆ ಸರ್ಕಾರದಿಂದ ಬರುವಂತಹ ಬಡ್ಡಿ ಸಹಾಯಧನವನ್ನು ಪಡೆದುಕೊಳ್ಳಬಹುದು ಎಂದು ಸಲಹೆ ನೀಡಿದರು.
ಈ ವೇಳೆ ಗ್ರಾಪಂ ಅಭಿವೃದ್ಧಿ ಅಧಿಕಾರಿ ಕೆ.ಕೆ ಶ್ರೀದೇವಿ, ಕಾರ್ಯದರ್ಶಿ ಕುಮಾರ್, ಎಸ್.ಬಿ.ಐ ಜನರಲ್ ವಿಮೆ ಸಿಬ್ಬಂದಿ ಶರತ್, ಬ್ಯಾಂಕಿನ ಸಿಬ್ಬಂದಿಗಳಾದ ಸಂದೀಪ್, ಅಭಿಲಾಷ್, ಪಂಚಾಯಿತಿ ಸಿಬ್ಬಂದಿಗಳಾದ ಮಂಜುನಾಥ್, ರಮಣಯ್ಯ, ಮಹೇಂದ್ರ, ಪವಿತ್ರ, ಸುವರ್ಣ ಹಾಗೂ ಗ್ರಾಮಸ್ಥರು ಇದ್ದರು.