Saturday, April 19, 2025
Google search engine

Homeಸ್ಥಳೀಯಕ್ಷಯರೋಗ ನಿರ್ಮೂಲನೆಗೆ ಎಲ್ಲರ ಸಹಕಾರ ಅಗತ್ಯ:ಡಾ.ಕುಮಾರ

ಕ್ಷಯರೋಗ ನಿರ್ಮೂಲನೆಗೆ ಎಲ್ಲರ ಸಹಕಾರ ಅಗತ್ಯ:ಡಾ.ಕುಮಾರ

ಮಂಡ್ಯ:ಕ್ಷಯರೋಗ ನಿರ್ಮೂಲನೆಗೆ ಎಲ್ಲಾ ಇಲಾಖೆ ಅಧಿಕಾರಿಗಳು ಹಾಗೂ ಸಾರ್ವಜನಿಕರ ಸಹಕಾರ ಅಗತ್ಯ ಎಂದು ಜಿಲ್ಲಾಧಿಕಾರಿ ಡಾ.ಕುಮಾರ ಅವರು ತಿಳಿಸಿದರು.
ಅವರು ಬುಧವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಕ್ಷಯರೋಗ ಪತ್ತೆ ಮತ್ತು ಚಿಕಿತ್ಸಾ ಆಂದೋಲನ ಸಮನ್ವಯ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಕ್ಷಯ ರೋಗವನ್ನು ಪತ್ತೆ ಹಚ್ಚುವ ಕೆಲಸ ಹೆಚ್ಚಾಗಬೇಕು. ಪತ್ತೆ ಹಚ್ಚಿದ ನಂತರ ಅವರಿಗೆ ನಿಗದಿಪಡಿಸಿದ ಅವಧಿಯಲ್ಲಿ ತಪ್ಪದೇ ಔಷಧಿ ಪಡೆಯುತ್ತಿರುವ ಬಗ್ಗೆ ಖಾತ್ರಿ ಪಡಿಸಿಕೊಳ್ಳಿ‌ ಎಂದರು.
ಕ್ಷಯರೋಗದ ಬಗ್ಗೆ ಗ್ರಾಮೀಣ ಭಾಗದ ಜನರಲ್ಲಿ ಅರಿವು ಕಡಿಮೆ. ಅವರಲ್ಲಿ ಕ್ಷಯರೋಗ ನಿರ್ಮೂಲ
ನೆಗೆ ಜಾಗೃತಿ ಮೂಡಿಸುವ ಕೆಲಸವಾಗಬೇಕು. ಸರ್ಕಾರದಿಂದ ಕ್ಷಯರೋಗದ ಚಿಕಿತ್ಸೆಗೆ ಲಭ್ಯವಿರುವ ಸೌಲಭ್ಯದ ಬಗ್ಗೆ ತಿಳಿಸುವ ಕೆಲಸವಾಗಬೇಕು ಎಂದರು.
ಕ್ಷಯರೋಗಿಗಳು ಸಾಕಷ್ಟು ಮಂದಿ ಚಿಕಿತ್ಸೆಯನ್ನು ಅರ್ಧಕ್ಕೆ ನಿಲ್ಲಿಸುತ್ತಾರೆ. ಇಂತಹವರನ್ನು ಗುರುತಿಸುವ ಕೆಲಸವಾಗಬೇಕು. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಪರಿಶೀಲನೆ ನಡೆಸಿ, ಸಂಪೂರ್ಣ ಗುಣಮುಖರಾಗುವವರೆಗೂ ಚಿಕಿತ್ಸೆಯಿಂದ ವಂಚಿತರಾಗದಂತೆ ನೋಡಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಮಂಡ್ಯ ಹಾಗೂ ಮದ್ದೂರು ತಾಲ್ಲೂಕುಗಳಲ್ಲಿ ಕ್ಷಯರೋಗಿಗಳ ಸಂಖ್ಯೆ ಹೆಚ್ಚಿದೆ.ಯಾವ ಕಾರಣಕ್ಕಾಗಿ ಈ ಭಾಗದಲ್ಲಿ ಕ್ಷಯ ರೋಗಿಗಳ ಸಂಖ್ಯೆ ಅಧಿಕವಾಗುತ್ತಿದೆ ಎಂಬ ಬಗ್ಗೆ ಪರಿಶೀಲನೆ ನಡೆಸಿ ಕ್ಷಯರೋಗ ನಿವಾರಣೆಗೆ ಮುಂದಾಗಿ ಎಂದರು.
ಕ್ಷಯರೋಗಿಗಳು ಹಾಗೂ ಕುಟುಂಬದವರಿಗೆ ಕೌನ್ಸಿಲಿಂಗ್ ಮಾಡಬೇಕು. ಕ್ಷಯರೋಗಿಗಳು ಕುಟುಂಬದವರೊಂದಿಗೆ ಅಂತರ ಕಾಯ್ದುಕೊಳ್ಳುವಂತೆ ಸಲಹೆ ಸೂಚನೆ ನೀಡಬೇಕು. ಆಗ ಮಾತ್ರ ಕ್ಷಯರೋಗ ನಿವಾರಣೆ ಸಾಧ್ಯ ಎಂದರು.
ಕ್ಷಯರೋಗ ನಿವಾರಣೆ ಸಂಬಂಧ ಇಲಾಖಾವಾರು ಅಧಿಕಾರಿಗಳು ನಿರ್ವಹಿಸಬೇಕಾದ ಜವಾಬ್ದಾರಿಗಳ ಬಗ್ಗೆ ಪಟ್ಟಿ ಮಾಡಿ ಕೊಡಿ ಎಂದು ಜಿಲ್ಲಾ ಕ್ಷಯರೋಗ ನಿರ್ಮೂಲನಾ
ಧಿಕಾರಿ ಡಾ.ಆಶಾಲತಾ ಅವರಿಗೆ ಸೂಚಿಸಿದರು.
ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಕ ಅಧಿಕಾರಿ ಶೇಖ್ ತನ್ವೀರ್ ಆಸೀಫ್ ಮಾತನಾಡಿ, ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಕ್ಷಯರೋಗ ನಿಯಂತ್ರಣ ಸಂಬಂಧ ಕರಪತ್ರ ಮುದ್ರಿಸಿ ಹಂಚಿಕೆ ಮಾಡುವ ಮೂಲಕ ಜನರಲ್ಲಿ ಜಾಗೃತಿ ಮೂಡಿಸಿ ಎಂದು ಸಲಹೆ ನೀಡಿದರು.
ಜಿಲ್ಲಾ ಕ್ಷಯರೋಗ ನಿರ್ಮೂಲನಾಧಿಕಾರಿ ಡಾ.ಆಶಾಲತಾ ಎಂ.ಎನ್.ಮಾತನಾಡಿ,ಜಿಲ್ಲೆಯಲ್ಲಿ ಸಕ್ರಿಯ ಕ್ಷಯಯರೋಗ ಪತ್ತೆ ಆಂದೋಲನವೂ ದಿನಾಂಕ 17-07-2023 ರಿಂದ 02-08-2023 ರವರೆಗೆ ಸಮೀಕ್ಷಾ ಕಾರ್ಯ ಹಮ್ಮಿಕೊಂಡಿದ್ದು, ಸೂಕ್ಷ್ಮ ಪ್ರದೇಶಗಳಾದ ಕೊಳಚೆ, ಗುಡ್ಡಗಾಡು ಪ್ರದೇಶಗಳಾದ ಕಲ್ಲುಕ್ವಾರೆ ಹಾಗೂ ಕೈಗಾರಿಕಾ ಪ್ರದೇಶ, ಧೂಮಪಾನ ಹಾಗೂ ಮದ್ಯಪಾನ ಮಧುಮೇಹಿ ಜನರನ್ನು ಗುರಿಯಾಗಿಸಿಕೊಂಡು ಈ ಸಮೀಕ್ಷಾ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗಿದೆ. ಈ ನಿಟ್ಟಿನಲ್ಲಿ ಕ್ಷಯರೋಗ ಲಕ್ಷಣಗಳಾದ ಕೆಮ್ಮು, ಕಫದಲ್ಲಿ ರಕ್ತ ಬೀಳುವುದು, ಸಂಜೆ ವೇಳೆ ಜ್ವರ, ತೂಕ ಕಡಿಮೆಯಾಗಿರುವುದು, ಹಸಿವಾಗದಿರುವುದು ಇಂತಹ ಲಕ್ಷಣಗಳಿದ್ದರೆ ಆರೋಗ್ಯ ಕಾರ್ಯಕರ್ತರು ಮನೆ ಭೇಟಿ ಸಂದರ್ಭದಲ್ಲಿ ಮಾಹಿತಿ ನೀಡಿ ಕಫ ಪರೀಕ್ಷೆಗೆ ಮುಂದಾಗಬೇಕೆಂದು ತಿಳಿಸಿದರು.
ಜಿಲ್ಲೆಯಲ್ಲಿ ಮಂಡ್ಯ,ಪಾಂಡವಪುರ, ನಾಗಮಂಗಲ ತಾಲ್ಲೂಕಿನಲ್ಲಿ ಕ್ಷಯರೋಗ ಪತ್ತೆ ಹಚ್ಚುವ (ಸಿಬಿನೆಟ್) ಯಂತ್ರೋಪಕರಣಗಳಿದ್ದು, ಕೆ.ಆರ್.ಪೇಟೆ ಮತ್ತು ಮಳವಳ್ಳಿಯಲ್ಲಿ ನ್ಯಾಟ್ ಯಂತ್ರಗಳಿದ್ದು, ಶ್ರೀರಂಗಪಟ್ಟಣ ಹಾಗೂ ಮದ್ದೂರು ತಾಲ್ಲೂಕುಗಳಿಗೆ ಡಿಎಂ.ಎಫ್ ಅನುದಾನದಿಂದ ನ್ಯಾಟ್ ಯಂತ್ರೋಪಕರಣ ಒದಗಿಸಲು ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದರು.
ವೈದ್ಯರ ದಿನದ ಅಂಗವಾಗಿ ಜು.೧ ರಂದು ಡಾ.ಆಶಾಲತಾ ಎಂ.ಎನ್.ಅವರಿಗೆ ಅತ್ಯುತ್ತಮ ವೈದ್ಯರು ಎಂಬ ಪ್ರಶಸ್ತಿಯನ್ನು ಕರ್ನಾಟಕ ಸರ್ಕಾರ ನೀಡಿ ಗೌರವಿಸಿತ್ತು. ಈ ಅಂಗವಾಗಿ ಜಿಲ್ಲಾಡಳಿತದಿಂದ ಡಾ.ಆಶಾಲತಾ ಎಂ.ಎನ್. ಅವರನ್ನು ಅಭಿನಂದಿಸಿ ಗೌರವಿಸಲಾಯಿತು.
ಇದೇ ಸಂದರ್ಭದಲ್ಲಿ ಸಕ್ರಿಯ ಕ್ಷಯರೋಗ ಪತ್ತೆ ಆಂದೋಲನದ ಪೋಸ್ಟರ್‌ಗಳನ್ನು ಬಿಡುಗಡೆ ಮಾಡಲಾಯಿತು.
ವಿಶ್ವ ಆರೋಗ್ಯ ಸಂಸ್ಥೆ ಸಹಲೆಗಾರರಾದ ಡಾ.ಶಾಜೀಯ ಅಂಜುಮ್, ಜಿಲ್ಲಾ ಕುಷ್ಠರೋಗ ನಿರ್ಮೂಲನಾಧಿಕಾರಿ ಡಾ.ಅಶ್ವಥ್ ಕೆ.ಪಿ,ವೈದ್ಯಕೀಯ ಕಾಲೇಜಿನ ಪ್ರಾಧ್ಯಾಪಕರಾದ ಸಿದ್ದಲಿಂಗಪ್ಪ ಹೂಗಾರ್, ಶ್ವಾಸಕೋಷ ತಜ್ಞರಾದ ಡಾ.ಮೋಹನ್ ಕುಮಾರ್, ತಾಲ್ಲೂಕು ಆರೋಗ್ಯಾಧಿಕಾರಿಗಳಾದ ಜವರೇಗೌಡ,ಮಧುಸೂದನ್, ಪ್ರಸನ್ನ, ಅರವಿಂದ್, ರವೀಂದ್ರ ಬಿ.ಗೌಡ, ವೀರಭದ್ರಪ್ಪ, ಸಹಾಯಕ ಔಷಧ ನಿಯಂತ್ರಕರಾದ ಮಹಮದ್ ಜಾವೀದ್ ಕಲೀಲ್, ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿದೇರ್ಶಕ ಎಸ್.ಟಿ.ಜವರೇಗೌಡ, ವಾರ್ತಾಧಿಕಾರಿ ನಿರ್ಮಲಾ, ವಕೀಲ ಗುರುಪ್ರಸಾದ್ ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಹಾಜರಿದ್ದರು.

RELATED ARTICLES
- Advertisment -
Google search engine

Most Popular