ಚಾಮರಾಜನಗರ: ಎದೆಗೆ ಬಿದ್ದ ಅಕ್ಷರ, ಭೂಮಿಗೆ ಬಿದ್ದ ಬೀಜ ಎಂದು ವ್ಯರ್ಥವಾಗುವುದಿಲ್ಲ. ಸದಾ ಕಾಲ ಫಲ ನೀಡುತ್ತವೆ. ವಿದ್ಯಾರ್ಥಿಗಳು ಶಿಕ್ಷಣವನ್ನು ಉನ್ನತವಾಗಿ ರೂಪಿಸಿಕೊಳ್ಳಿ.ಶಿಕ್ಷಣದಿಂದ ಸಮಗ್ರ ಅಭಿವೃದ್ಧಿಯ ವಿಕಾಸ ಸಾಧ್ಯವೆಂದು ಆಲೂರು ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯರಾದ ತಿಮ್ಮರಾಜು ರವರು ತಿಳಿಸಿದರು.
ಅವರು ಆಲೂರು ಸರ್ಕಾರಿ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳ ಸಾಂಸ್ಕೃತಿಕ ಹಾಗೂ ಕ್ರೀಡಾ ಸಂಘದ ಉದ್ಘಾಟನೆ, ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ ಸುವರ್ಣಾವತಿ ನದಿ ತೀರದಲ್ಲಿ ಉತ್ತಮ ಪರಿಸರ ವಾತಾವರಣದಲ್ಲಿ ಇರುವ ಆಲೂರು ಗ್ರಾಮ ಇತಿಹಾಸ ಪ್ರಸಿದ್ಧವಾಗಿದೆ. ಚಾಮರಾಜನಗರ ಸಿದ್ದಪ್ಪಾಜಿ, ಮಂಟೇಸ್ವಾಮಿ ,ಮಹದೇಶ್ವರರ ನಾಡಾಗಿದೆ. ಸರಿ ತಪ್ಪುಗಳ ಚಿಂತನೆ ಇಲ್ಲಿ ಹೆಚ್ಚು ಜಾಗೃತವಾಗಿದೆ . ಮೌಲ್ಯಗಳ ಬಗ್ಗೆ ಅರಿವಿದೆ. ಕರ್ನಾಟಕ ವಚನ ಸಾಹಿತ್ಯ ,ಶರಣ ಸಾಹಿತ್ಯ, ದಾಸ ಸಾಹಿತ್ಯಗಳ ಸಂಗಮವಾಗಿದೆ ಎಂದರು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಆಲೂರು ಗ್ರಾಮದ ಶಿವಶಂಕರ್ ಮಾಜಿ ರಾಜ್ಯಪಾಲರಾಗಿದ್ದ ಬಿ ರಾಚಯ್ಯನವರ ಗ್ರಾಮವಾಗಿದೆ. ಆಲೂರು ಶೈಕ್ಷಣಿಕ ವಾತಾವರಣ ಉತ್ತಮವಾಗಿದ್ದು, ವಿದ್ಯಾರ್ಥಿಗಳು ಸದುಪಯೋಗ ಪಡಿಸಿಕೊಳ್ಳಬೇಕು. ಗ್ರಾಮೀಣ ಪ್ರದೇಶದ ಹೆಣ್ಣು ಮಕ್ಕಳು ಬಾಲ್ಯ ವಿವಾಹವಾಗದೆ ಶಿಕ್ಷಣವನ್ನು ಪಡೆಯುವ ಮೂಲಕ ಸದೃಢ ಸಮಾಜವನ್ನು ನಿರ್ಮಿಸಬೇಕು. ಹೆಣ್ಣು ಮಕ್ಕಳು ಉನ್ನತ ಶಿಕ್ಷಣವನ್ನು ಪಡೆಯ ಬೇಕು. ವಿದ್ಯಾರ್ಥಿಗಳು ಸದಾಕಾಲ ಕ್ರಿಯಾತ್ಮಕವಾಗಿ ಎಲ್ಲಾ ಚಟುವಟಿಕೆಗಳಲ್ಲಿ ಭಾಗವಹಿಸಿ ಯಶಸ್ವಿಯಾಗಿ ಎಂದು ತಿಳಿಸಿದರು.
ತಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರು ಹಾಗೂ ಸಂಸ್ಕೃತಿ ಚಿಂತಕರಾದ ಸುರೇಶ್ ಎನ್ ಋಗ್ವೇದಿ ಮಾತನಾಡಿ ವಿದ್ಯಾರ್ಥಿಗಳಲ್ಲಿ ಸಾಂಸ್ಕೃತಿಕ ಹಾಗೂ ಕ್ರೀಡಾ ಪ್ರಜ್ಞೆಯನ್ನು ಹೆಚ್ಚು ಬೆಳೆಸಿದಾಗ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಪೂರಕ ವಾತಾವರಣವನ್ನು ಸ್ಪೂರ್ತಿಯನ್ನು, ಉಲ್ಲಾಸವನ್ನು ,ಶೈಕ್ಷಣಿಕ ಆಲೋಚನೆಯ ಮನೋಭಾವನೆಯನ್ನು ಬೆಳೆಸುತ್ತದೆ. ಭಾರತ ಇಡೀ ವಿಶ್ವಕ್ಕೆ ತನ್ನದೇ ಆದ ಸಾಂಸ್ಕೃತಿಕ ಪರಂಪರೆಯ ದಿವ್ಯ ತತ್ವಗಳನ್ನು ನೀಡಿದೆ. ವಿಶ್ವದಲ್ಲೇ ಅತ್ಯುನ್ನತ ಸಾಂಸ್ಕೃತಿಕ ದೇಶವಾಗಿದ್ದು, ತತ್ವಜ್ಞಾನಿಗಳು, ಚಿಂತಕರು ,ದಾರ್ಶನಿಕರು, ತಪಸ್ವಿಗಳ ದಿವ್ಯತೆಯ ಸಂದೇಶಗಳು ಇಡೀ ದೇಶದ ಪ್ರತಿಯೊಬ್ಬ ಪ್ರಜೆಯಲ್ಲಿಯೂ ಮೂಡಿದೆ. ಸಂಸ್ಕೃತಿ ಮೂಲಕ ಶಿಕ್ಷಣ ,ಶಿಕ್ಷಣದ ವಿಕಾಸದ ಮೂಲಕ ವ್ಯಕ್ತಿಯ ಸಮಗ್ರತೆ, ವ್ಯಕ್ತಿಯ ಸಮಗ್ರತೆಯ ಮೂಲಕ ರಾಷ್ಟ್ರದ ಅಭಿವೃದ್ಧಿ ಎಂದು ರಾಷ್ಟ್ರ ಕ್ಕಾಗಿ ಸದಾಕಾಲ ದುಡಿಯುವ ಮನೋಭಾವ ನಮ್ಮೆಲ್ಲರಲ್ಲೂ ಮೂಡಲಿ. ವಿದ್ಯಾರ್ಥಿಗಳು ಸೋಲು ಗೆಲುವಿನ ಬಗ್ಗೆ ತಲೆಕೆಡಿಸಿಕೊಳ್ಳದೆ ಭಾಗವಹಿಸುವ ಮೂಲಕ ಪ್ರತಿ ಹಂತದಲ್ಲೂ ಜ್ಞಾನವನ್ನು ಹೆಚ್ಚಿಸಿಕೊಳ್ಳಬೇಕು . ಸಾಂಸ್ಕೃತಿಕ ಹಾಗೂ ಕ್ರೀಡಾ ಚಟುವಟಿಕೆಗಳು ಮಾನವನ ಚೈತನ್ಯವನ್ನು ಹೆಚ್ಚಿಸುತ್ತದೆ ಎಂದರು.
ಹಿರಿಯ ಉಪನ್ಯಾಸಕ ಮಹಾ ಲಿಂಗು ಮಾತನಾಡಿ ಸಾಧಕರ ಹಾಗೂ ಮಹಾಜ್ಞಾನಿಗಳ ಸಾಧನೆಗಳು ವಿದ್ಯಾರ್ಥಿಗಳಿಗೆ ಮುಖ್ಯ ಗುರಿಯಾಗಬೇಕು. ಉತ್ತಮ ಆದರ್ಶ ಬೆಳೆಸಿಕೊಂಡು ಉನ್ನತ ವ್ಯಕ್ತಿತ್ವವನ್ನು ಬೆಳೆಸಿಕೊಳ್ಳಿ ಎಂದರು.
ಪಿಯುಸಿ ಪರೀಕ್ಷೆಯಲ್ಲಿ ಅತ್ಯುನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿ ಕಾಲೇಜಿಗೆ ಕೀರ್ತಿ ತಂದ ಕಲಾವಿಭಾಗದ ಮಹದೇವಮ್ಮ , ವಾಣಿಜ್ಯ ವಿಭಾಗದ ಸಹನ ರವರನ್ನು ಅಭಿನಂದಿಸಿ ಸನ್ಮಾನಿಸಲಾಯಿತು.
ಪ್ರೌಢಶಾಲಾ ವಿಭಾಗದ ಮುಖ್ಯ ಶಿಕ್ಷಕ ಪ್ರಭುಸ್ವಾಮಿ ,ಪ್ರಾಥಮಿಕ ಶಾಲಾ ವಿಭಾಗದ ಮುಖ್ಯ ಶಿಕ್ಷಕ ಮಹದೇವಸ್ವಾಮಿ, ನಿವೃತ್ತ ಉಪನ್ಯಾಸಕ ಪ್ರಭುಸ್ವಾಮಿ, ಉಪನ್ಯಾಸಕರಾದ ನಾಗರಾಜು, ಸುರೇಶ್, ಕೃಷ್ಣಮೂರ್ತಿ, ಪ್ರಸಾದ್ ರಶ್ಮಿತಾ, ಮಹೇಶ್ ವಿದ್ಯಾರ್ಥಿ ಪ್ರತಿನಿಧಿಗಳು ಉಪಸ್ಥಿತರಿದ್ದರು. ವಿದ್ಯಾರ್ಥಿಗಳ ಸಾಂಸ್ಕೃತಿಕ ಕಾರ್ಯಕ್ರಮಗಳು ಗಮನ ಸೆಳೆದವು.