ಪ್ರೀತಂ ಗೌಡ ಬೆಂಬಲಿಗರು ಹಾಗೂ ಜೆಡಿಎಸ್ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ
ಮಂಡ್ಯ : ಬಿಜೆಪಿ-ಜೆಡಿಎಸ್ ಪಾದಯಾತ್ರೆ ನಡೆಯುತ್ತಿರುವ ಹೊತ್ತಲ್ಲೇ ಮಂಡ್ಯದಲ್ಲಿ ಮಾಜಿ ಶಾಸಕ ಪ್ರೀತಂಗೌಡ ಭಾವಚಿತ್ರವಿದ್ದ ಫ್ಲೆಕ್ಸ್ ಗೆ ಕಿಡಿಗೇಡಿಗಳು ಬೆಂಕಿ ಹಚ್ಚಿರುವ ಘಟನೆ ನಡೆದಿದೆ.
ಮಂಡ್ಯ ಹೊರವಲಯದ ಉಮ್ಮಡಹಳ್ಳಿ ಸಮೀಪ ಬಿಜೆಪಿಯ ಮಾಜಿ ಶಾಸಕ ಪ್ರೀತಂಗೌಡ ಭಾವಚಿತ್ರವಿದ್ದ ಬ್ಯಾನರ್ ಗೆ ಪೆಟ್ರೋಲ್ ಹಾಕಿ ದುಷ್ಕರ್ಮಿಗಳು ಸುಟ್ಟು ಹಾಕಿದ್ದಾರೆ. ಉಮ್ಮಡಹಳ್ಳಿಯಲ್ಲಿ ತಡರಾತ್ರಿ ಈ ಘಟನೆ ನಡೆದಿದ್ದು, ದುಷ್ಕರ್ಮಿಗಳು ಪ್ರೀತಂಗೌಡ ಭಾವಚಿತ್ರವಿದ್ದ ಬ್ಯಾನರ್ ಗೆ ಪೆಟ್ರೋಲ್ ಸುರಿದು ಸುಟ್ಟು ಪರಾರಿಯಾಗಿದ್ದಾರೆ.
ಮೈಸೂರು ಚಲೋ ಪಾದಯಾತ್ರೆಯಲ್ಲಿ ಪ್ರೀತಂ ಗೌಡ ಬೆಂಬಲಿಗರು ಹಾಗೂ ಜೆಡಿಎಸ್ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ನಡೆದು ಕೈ, ಕೈ ಮಿಲಾಯಿಸುವ ಹಂತಕ್ಕೆ ಗಲಾಟೆ ನಡೆಯಿತು.
ಪಾದಯಾತ್ರೆ ಮಂಡ್ಯ ನಗರದ ಸ್ವರ್ಣಸಂದ್ರ ಬಳಿ ಬರುತ್ತಿದ್ದಂತೆ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಸೇರ್ಪಡೆಗೊಂಡರು. ಇದರ ಜತೆಗೆ ಪಾದಯಾತ್ರೆಯಲ್ಲಿ ಹಾಸನದ ಬಿಜೆಪಿ ಮಾಜಿ ಶಾಸಕ ಪ್ರೀತಂಗೌಡ ಕೂಡ ಆಗಮಿಸಿದರು.
ಪಾದಯಾತ್ರೆ ಮೈಶುಗರ್ ಕಾರ್ಖಾನೆ ವೃತ್ತದ ಬಳಿ ಬರುತ್ತಿದ್ದಂತೆ ಹಾಸನದಿಂದ ಬಂದಿದ್ದ ಬಿಜೆಪಿ ಕಾರ್ಯಕರ್ತರು ಪ್ರೀತಂಗೌಡ ಅವರನ್ನು ಹೆಗಲ ಮೇಲೆ ಹೊತ್ತುಕೊಂಡು ಗೌಡರ ಗೌಡ ಪ್ರೀತಂಗೌಡ ಎಂಬ ಘೋಷಣೆ ಕೂಗಿದರು. ಇದರಿಂದ ಕೆರಳಿ ಕೆಂಡವಾದ ಜೆಡಿಎಸ್ ಕಾರ್ಯಕರ್ತರು ಸಹ ಪ್ರತಿಯಾಗಿ ಗೌಡರಗೌಡ ದೇವೇಗೌಡ ಎಂಬ ಘೋಷಣೆ ಕೂಗಿದರು.
ಇದು ಪ್ರೀತಂಗೌಡ ಬೆಂಬಲಿಗರನ್ನು ಕೆರಳುವಂತೆ ಮಾಡಿತು. ಆಗ ಬಿಜೆಪಿ-ಜೆಡಿಎಸ್ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ನಡೆಯಿತು. ಅವಾಚ್ಯ ಶಬ್ದಗಳಿಂದ ನಿಂದನೆ ನಡೆಯಿತು. ಅನಂತರ ತಳ್ಳಾಟ, ನೂಕಾಟ ನಡೆಯಿತು. ಒಂದು ಹಂತದಲ್ಲಿ ಕೈ ಕೈ ಮಿಲಾಯಿಸುವ ಹಂತಕ್ಕೆ ತಲುಪಿತು.
ಗೌಡರಗೌಡ ದೇವೇಗೌಡ ಎಂದು ಘೋಷಣೆ ಕೂಗಿದ ಜೆಡಿಎಸ್ ಕಾರ್ಯಕರ್ತನ ಮೇಲೆ ಪ್ರೀತಂಗೌಡ ಅವರ ಬೆಂಬಲಿಗರು ಹಲ್ಲೆ ನಡೆಸಿದರು ಎನ್ನಲಾಗಿದೆ. ಇದರಿಂದ ಮತ್ತಷ್ಟು ಕೆಂಡವಾದ ಜೆಡಿಎಸ್ ಕಾರ್ಯಕರ್ತರು ಪ್ರೀತಂಗೌಡ ಬೆಂಬಲಿಗರ ಮೇಲೆ ಹಲ್ಲೆ ಮಾಡಲು ಯತ್ನಿಸಿದ್ದಾರೆ. ಇದರ ನಡುವೆ ಪೊಲೀಸರು ಮಧ್ಯೆ ಪ್ರವೇಶಿಸಿ ಪರಿಸ್ಥಿತಿ ತಿಳಿಗೊಳಿಸಿದ್ದಾರೆ. ಅನಂತರ ಪ್ರೀತಂಗೌಡ ಅಲ್ಲಿಂದ ತೆರಳಿದರು. ಅಲ್ಲದೆ, ನಗರದ ಜೆ.ಸಿ.ವೃತ್ತದಲ್ಲಿ ನಡೆದ ಸಾರ್ವಜನಿಕ ಸಭೆಯ ವೇದಿಕೆಯಲ್ಲೂ ಪ್ರೀತಂಗೌಡ ಕಾಣಿಸಿಕೊಳ್ಳಲಿಲ್ಲ.