Tuesday, May 20, 2025
Google search engine

Homeರಾಜ್ಯಅಬಕಾರಿ, ಪರವಾನಗಿ ಶುಲ್ಕ ದುಪ್ಪಟ್ಟು ಹೆಚ್ಚಳ: ನಾಳೆಯಿಂದ ಮದ್ಯ ಮಾರಾಟಗಾರರ ಪ್ರತಿಭಟನೆ

ಅಬಕಾರಿ, ಪರವಾನಗಿ ಶುಲ್ಕ ದುಪ್ಪಟ್ಟು ಹೆಚ್ಚಳ: ನಾಳೆಯಿಂದ ಮದ್ಯ ಮಾರಾಟಗಾರರ ಪ್ರತಿಭಟನೆ

ಬೆಂಗಳೂರು: ರಾಜ್ಯ ಕಾಂಗ್ರೆಸ್‌ ಸರಕಾರ ಅಧಿಕಾರಕ್ಕೆ ಬಂದ ಕಳೆದ ಎರಡು ವರ್ಷಗಳಲ್ಲಿ ಹಲವು ಬಾರಿ ಅಬಕಾರಿ ಹಾಗೂ ಪರವಾನಗಿ ಶುಲ್ಕವನ್ನು ಏರಿಕೆ ಮಾಡುತ್ತಾ ಬಂದಿದೆ. ಈ ಬೆಲೆ ಏರಿಕೆಯನ್ನು ಖಂಡಿಸಿ ಡಿಸ್ಟಿಲರಿಗಳು ಮತ್ತು ಮದ್ಯ ಮಾರಾಟಗಾರರು ಮೇ 20 ರಂದು ಪ್ರತಿಭಟನೆ ಮತ್ತು 21 ರಂದು ಉತ್ಪಾದನೆ ಮತ್ತು ಮಾರಾಟವನ್ನು ಸ್ಥಗಿತಗೊಳಿಸಿ ಪ್ರತಿಭಟನೆ ಮತ್ತು ಮೆರವಣಿಗೆ ನಡೆಸಲು ಮುಂದಾಗಿದ್ದಾರೆ. ಲಿಕ್ಕರ್‌ ಶಾಪ್‌ ಮಾಲೀಕರು ಸರ್ಕಾರಿ ಡಿಪೋಗಳಿಂದ ಮದ್ಯ ಖರೀದಿ ಮಾಡುವುವನ್ನು ನಿಲ್ಲಿಸಲಿದ್ದಾರೆ. ರಾಜ್ಯ ಸರ್ಕಾರ ಬಾಟ್ಲಿಂಗ್ ಮತ್ತು ಮಾರಾಟ ಮಳಿಗೆಗಳು ಸೇರಿ ಎಲ್ಲ ಸ್ವರೂಪದ ಶುಲ್ಕಗಳನ್ನು ಶೇ 100ರಷ್ಟು ಏರಿಕೆ ಮಾಡಲು ನಿರ್ಧರಿಸಿದೆ.

ಕಳೆದ ಎರಡು ವರ್ಷಗಳಿಂದ ವಿವಿಧ ರೀತಿಯ ಶುಲ್ಕಗಳನ್ನು ಪದೇ ಪದೇ ಏರಿಸಲಾಗುತ್ತಿದ್ದು, ದು ನಮಗೆ ಹೊರೆಯಾಗುತ್ತಿದೆ. ಆದ್ದರಿಂದ ರಾಜ್ಯದ ಪರವಾನಗಿ ಪಡೆದ 5,000 ಕ್ಕೂ ಹೆಚ್ಚು ಮದ್ಯದಂಗಡಿಗಳ ಮಾಲೀಕರು ವೈನ್‌ ಶಾಪ್‌ ಗಳನ್ನು ಮುಚ್ಚಿ ಪ್ರತಿಭಟನೆಯಲ್ಲಿ ಭಾಗಿಯಾಗಲಿದ್ದಾರೆ.

ಸರ್ಕಾರ ಪ್ರಕಟಿಸಿರುವ ಕರಡಿನ ಪ್ರಕಾರ ಬ್ರುವರಿ ಸನ್ನದು ಶುಲ್ಕ ರೂ.27 ಲಕ್ಷದಿಂದ ರೂ. 54 ಲಕ್ಷಕ್ಕೆ, ಡಿಸ್ಟಿಲರಿ ಮತ್ತು ವೇರ್‌ಹೌಸ್‌ ಸನ್ನದು ಶುಲ್ಕವು ರೂ.45 ಲಕ್ಷದಿಂದ ರೂ.90 ಲಕ್ಷಕ್ಕೆ ಏರಿಕೆಯಾಗಲಿದೆ. ಡಿಸ್ಟಿಲರಿ ಮತ್ತು ಬ್ರುವರಿಗಳ ಬಾಟ್ಲಿಂಗ್ ಸನ್ನದು ಶುಲ್ಕವನ್ನು ರೂ.1 ಲಕ್ಷದಿಂದ ರೂ.2 ಲಕ್ಷಕ್ಕೆ, ಬಲ್ಕ್‌ ಬಿಯರ್‌ ಮಾರಾಟ ಗುತ್ತಿಗೆ ವಾರ್ಷಿಕ ಶುಲ್ಕವು ರೂ.1 ಲಕ್ಷದಿಂದ ರೂ. 2 ಲಕ್ಷಕ್ಕೆ, ಬಾಟಲ್‌ ಬಿಯರ್ ಚಿಲ್ಲರೆ ಮಾರಾಟ ಹಕ್ಕಿನ ಗುತ್ತಿಗೆ ವಾರ್ಷಿಕ ಶುಲ್ಕವು ರೂ.10,000ಕ್ಕೆ ಹೆಚ್ಚಾಗಲಿದೆ. ಹೊಸ ದರಗಳು ಜುಲೈ 1ರಿಂದ ಜಾರಿಗೆ ಬರಲಿವೆ.

ಈ ಕ್ರಮದಿಂದ ಅನೇಕ ವೈನ್‌ ಶಾಪ್‌ ಗಳನ್ನು ಮುಚ್ಚಬೇಕಾಗುತ್ತದೆ ಮತ್ತು ಗ್ರಾಹಕರಿಗೂ ಹೊರೆಯಾಗಲಿದೆ ಎಂದು ಮದ್ಯ ಮಾರಾಟಗಾರರ ಸಂಘ ಹೇಳುತ್ತಿದೆ.

ಕಳೆದ ವರ್ಷದ ಆದಾಯ ಸಂಗ್ರಹದ ಕೊರತೆಯನ್ನು ನೀಗಿಸಿಕೊಳ್ಳಲು ಶುಲ್ಕಗಳನ್ನು ಹೆಚ್ಚಿಸಲಾಗಿದೆ. ಸರ್ಕಾರದ ಮಟ್ಟದಲ್ಲಿ ಈ ನಿರ್ಧಾರವನ್ನು ತೆಗೆದುಕೊಂಡಿದ್ದು ನಾವು ಜಾರಿಗೊಳಿಸುತ್ತಿದ್ದೇವೆ ಅಷ್ಟೇ ಎಂದು ಅಬಕಾರಿ ಇಲಾಖೆ ಅಧಿಕಾರಿಯೊಬ್ಬರು ಹೇಳುತ್ತಾರೆ. 2024-25 ರ ಅವಧಿಗೆ 38,525 ಕೋಟಿ ರೂ. ಸಂಗ್ರಹದ ಗುರಿ ನೀಡಲಾಗಿದ್ದು, ಇಲಾಖೆ 35,530 ಕೋಟಿ ರೂ ಅಥವಾ ಶೇ. 92.3 ರಷ್ಟನ್ನು ಮಾತ್ರ ಸಂಗ್ರಹಿಸಿದೆ.

ವಿಶೇಷವಾಗಿ ಸಣ್ಣ ಸಣ್ಣ ವೈನ್‌ ಶಾಪ್‌ ಮಾರಾಟಗಾರರು ಹೆಚ್ಚಿನ ತೊಂದರೆ ಅನುಭವಿಸಬೇಕಾಗುತ್ತದೆ. ಕಳೆದ ವರ್ಷ ಹೆಚ್ಚುತ್ತಿರುವ ಶುಲ್ಕ, ನಿರ್ವಹಣಾ ವೆಚ್ಚ ಮತ್ತು ಗ್ರಾಹಕರ ಕೊರತೆಯಿಂದಾಗಿ ಬೆಂಗಳೂರಿನಲ್ಲಿ 40 ಕ್ಕೂ ಹೆಚ್ಚು ಪಬ್‌ ಗಳನ್ನು ಮುಚ್ಚಲಾಗಿದೆ. ವಿಪರೀತ ತೆರಿಗೆ ಮತ್ತು ಶುಲ್ಕಗಳ ಹೆಚ್ಚಳ ನಮ್ಮೆಲ್ಲಾ ಲಾಭವನ್ನು ನುಂಗಿ ಹಾಕುತ್ತಿದೆ. ಹಿಂದೆ ಹೆಚ್ಚುವರಿ ಅಬಕಾರಿ ಶುಲ್ಕ ವಿಧಿಸಲಾಗುತ್ತಿತ್ತು. ಈಗ ದುಪ್ಪಟ್ಟು ಶುಲ್ಕ ವಿಧಿಸಲಾಗುತ್ತಿದೆ. ನಾವೂ ಪಬ್‌ ಮುಚ್ಚುವ ಚಿಂತನೆಯಲ್ಲಿದ್ದೇವೆ ಎಂದು ಪಬ್‌ ಮಾಲೀಕರೊಬ್ಬರು ಹೇಳುತ್ತಾರೆ.

ಬೆಲೆ ಏರಿಕೆ ಕಾರಣಕ್ಕೆ ಬೇಸಿಗೆಯಲ್ಲೂ ಬಿಯರ್‌ ಮಾರಾಟ ಕಡಿಮೆಯಾಗಿದೆ. ನಾವು ಸರ್ಕಾರಕ್ಕೆ ಕೋಟಿ ಕೋಟಿ ತೆರಿಗೆ ಪಾವತಿಸುತ್ತಿದ್ದೇವೆ. ಸಾಕಷ್ಟು ಸಂಖ್ಯೆಯಲ್ಲಿ ಉದ್ಯೋಗಗಳನ್ನು ಸೃಷ್ಟಿಸಿದ್ದೇವೆ. ಕಳೆದ ವರ್ಷ ಬೆಲೆ ಹೆಚ್ಚಳ ಮಾಡಿದ್ದರಿಂದ ತೆರಿಗೆ ಸಂಗ್ರಹ ಕುಂಠಿತವಾಗಿದೆ ಮತ್ತು ಅನೇಕ ವೈನ್‌ ಶಾಪ್‌ ಗಳನ್ನು ಮುಚ್ಚಲಾಗಿದೆ. ಆದರೂ ಸರ್ಕಾರ ಅದೇ ತಪ್ಪನ್ನು ಪುನರಾವರ್ತನೆ ಮಾಡುತ್ತಿದೆ ಎಂದು ಅಪಾದಿಸುತ್ತಾರೆ.

RELATED ARTICLES
- Advertisment -
Google search engine

Most Popular