Friday, April 4, 2025
Google search engine

Homeವಿದೇಶಭಾರತದಿಂದ ಶೇಖ್ ಹಸೀನಾ ಗಡಿಪಾರಿಗೆ ಅಗತ್ಯ ಕ್ರಮ: ಬಾಂಗ್ಲಾ ಎಚ್ಚರಿಕೆ

ಭಾರತದಿಂದ ಶೇಖ್ ಹಸೀನಾ ಗಡಿಪಾರಿಗೆ ಅಗತ್ಯ ಕ್ರಮ: ಬಾಂಗ್ಲಾ ಎಚ್ಚರಿಕೆ

ಢಾಕಾ: ಬಾಂಗ್ಲಾ ದೇಶದ ಮಾಜಿ ಪ್ರಧಾನಿ ಶೇಖ್ ಹಸೀನಾ ಅವರನ್ನು ಭಾರತದಿಂದ ಗಡಿಪಾರು ಮಾಡಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ನೂತನವಾಗಿ ನೇಮಕಗೊಂಡ ಬಾಂಗ್ಲದ ಅಂತರರಾಷ್ಟ್ರೀಯ ಅಪರಾಧಗಳ ನ್ಯಾಯಾಧಿಕರಣದ ನೂತನ ಮುಖ್ಯ ಪ್ರಾಸಿಕ್ಯೂಟರ್ ತಾಜುಲ್ ಇಸ್ಲಾಂ ಹೇಳಿದ್ದಾರೆ.

ಬಾಂಗ್ಲಾದೇಶದ ಸರ್ಕಾರದ ವಿರುದ್ಧ ವಿದ್ಯಾರ್ಥಿಗಳ ಪ್ರತಭಟನೆ ವೇಳೆ ಸಾಮೂಹಿಕ ಹತ್ಯೆ ಮಾಡಿದ ಆರೋಪದ ಮೇಲೆ ವಿಚಾರಣೆ ನಡೆಸಲು ಅವರನ್ನು ಭಾರತದಿಂದ ಗಡಿಪಾರು ಮಾಡಬೇಕು. ಭಾರತದೊಂದಿಗೆ ಹಸ್ತಾಂತರ ಒಪ್ಪಂದದ ಅಡಿಯಲ್ಲಿ ಮಾಜಿ ಪ್ರಧಾನಿ ಹಸೀನಾ ಅವರನ್ನು ಮರಳಿ ತರಲು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

ಸಾಮೂಹಿಕ ಹತ್ಯೆ ಪ್ರಕರಣಗಳಿಗೆ ಸಂಬಂಧಿಸಿದಂತೆ ಶೇಖ್ ಹಸೀನಾ ಸೇರಿದಂತೆ ಎಲ್ಲಾ ಆರೋಪಿಗಳ ವಿರುದ್ಧ ಬಂಧನ ವಾರಂಟ್‍ಗಳನ್ನು ಜಾರಿಗೊಳಿಸಲು ನಾವು ಅಂತರರಾಷ್ಟ್ರೀಯ ಅಪರಾಧಗಳ ನ್ಯಾಯಾಧಿಕರಣಕ್ಕೆ ಅರ್ಜಿ ಸಲ್ಲಿಸುತ್ತೇವೆ. ಆರೋಪಿಗಳ ವಿರುದ್ಧ ಮಾಹಿತಿ, ದಾಖಲೆಗಳು ಮತ್ತು ಸಾಕ್ಷ್ಯಗಳನ್ನು ದೇಶಾದ್ಯಂತ ಸಂಗ್ರಹಿಸಿ ನ್ಯಾಯಾಧಿಕರಣದ ಮುಂದೆ ಸರಿಯಾಗಿ ಇರಿಸಬೇಕಾಗುತ್ತದೆ. ಇದು ತುಂಬಾ ಸವಾಲಿನ ಕಾರ್ಯವಾಗಿದೆ ಎಂದು ಇಸ್ಲಾಂ ಹೇಳಿದ್ದಾರೆ.

ಸರ್ಕಾರಿ ನೇಮಕಾತಿಯಲ್ಲಿ ಮೀಸಲಾತಿ ವಿರೋಧಿಸಿ ಹಸೀನಾ ನೇತೃತ್ವದ ಸರ್ಕಾರದ ವಿರುದ್ಧ ನಡೆದ ಪ್ರತಿಭಟನೆಯಲ್ಲಿ 1,000ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. ನೂರಾರು ಜನರು ಗಾಯಗೊಂಡಿದ್ದಾರೆ. ಈ ಸಂಬಂಧ ಶೇಖ್ ಹಸೀನಾ ಮತ್ತು ಇತರ ಒಂಬತ್ತು ಜನರ ವಿರುದ್ಧ ನರಮೇಧ ಆರೋಪ ಹೊರಿಸಿ ತನಿಖೆ ಪ್ರಾರಂಭಿಸಲಾಗಿತ್ತು.

ಬಾಂಗ್ಲಾದಲ್ಲಿ ನೊಬೆಲ್ ಪ್ರಶಸ್ತಿ ಪುರಸ್ಕøತ ಮೊಹಮ್ಮದ್ ಯೂನಸ್ ನೇತೃತ್ವದ ಮಧ್ಯಂತರ ಸರ್ಕಾರ ರಚನೆಯಾದ ನಂತರ ಹಿಂದಿನ ಸರ್ಕಾರವು ನೇಮಿಸಿದ್ದ ಪ್ರಾಸಿಕ್ಯೂಷನ್ ತಂಡ ಮತ್ತು ತನಿಖಾ ಸಂಸ್ಥೆ ಹಿಂದೆ ಸರಿದಿದೆ. ಈಗ ಹೊಸ ನ್ಯಾಯಾಧೀಶರು ಮತ್ತು ತನಿಖಾಧಿಕಾರಿಗಳನ್ನು ನೇಮಿಸುವ ಮೂಲಕ ತನಿಖಾ ತಂಡವನ್ನು ಮತ್ತೆ ರಚಿಸಬೇಕು ಎಂದು ಇಸ್ಲಾಂ ಹೇಳಿದ್ದಾರೆ.

RELATED ARTICLES
- Advertisment -
Google search engine

Most Popular