Saturday, April 19, 2025
Google search engine

Homeಸ್ಥಳೀಯಸಹಕಾರ ಸಂಘಗಳಿಂದ ಶೋಷಣೆ ತಪ್ಪಿಸಲು ಸಾಧ್ಯ : ಹೆಚ್.ವಿ.ರಾಜೀವ್

ಸಹಕಾರ ಸಂಘಗಳಿಂದ ಶೋಷಣೆ ತಪ್ಪಿಸಲು ಸಾಧ್ಯ : ಹೆಚ್.ವಿ.ರಾಜೀವ್

ಮೈಸೂರು : ಜನ ಸಾಮಾನ್ಯರ ಮೇಲೆ ಖಾಸಗಿ ಲೇವಾದೇವಿದಾರರು ನಡೆಸುತ್ತಿರುವ ಶೊಷಣೆಯನ್ನು ತಪ್ಪಿಸಲು ಸಹಕಾರ ಸಂಘಗಳನ್ನು ಪ್ರಾರಂಭಿಸಲಾಗಿದ್ದು, ಸಹಕಾರಿಗಳು ಇದನ್ನು ಅರ್ಥಮಾಡಿಕೊಂಡು ತಮ್ಮ ಸಂಸ್ಥೆಗಳನ್ನು ಜನರತ್ತ ಕೊಂಡೊಯ್ಯಬೇಕಿದೆ ಎಂದು ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ಸಂಸ್ಥೆಯ ನಿಕಟಪೂರ್ವ ನಿರ್ದೇಶಕ ಹೆಚ್.ವಿ.ರಾಜೀವ್ ಹೇಳಿದರು.

ನಗರದ ಜೆಎಲ್‌ಬಿ ರಸ್ತೆಯಲ್ಲಿರುವ ರೋಟರಿ ಸಭಾಂಗಣದಲ್ಲಿ ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ಸಂಸ್ಥೆವತಿಯಿಂದ ಮೈಸೂರು ಮತ್ತು ಕೊಡಗು ಸೌಹಾರ್ದ ಸಹಕಾರಿಗಳಿಗಾಗಿ ಏರ್ಪಡಿಸಿದ್ದ ವಿಷಯಾಧಾರಿತ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಪ್ರಸ್ತುತ ದಿನಗಳಲ್ಲಿ ಸಹಕಾರಿ ಸಂಸ್ಥೆಗಳು ಬೇರೆ ಬೇರೆ ಖಾಸಗಿ ಸಂಸ್ಥೆಗಳ ಜತೆ ತೀವ್ರ ಪೈಪೋಟಿಯನ್ನು ಎದುರಿಸಬೇಕಿದೆ. ಇದಕ್ಕಾಗಿ ಸಹಕಾರಿ ಕ್ಷೇತ್ರದಲ್ಲಿ ಕೆಲಸ ಮಾಡುವ ನೌಕರರ ಸಮೇತ ಆಡಳಿತ ಮಂಡಳಿಯವರು ತಮ್ಮನ್ನು ತಾವು ಹೊಸದಾದ ಬದಲಾವಣೆಗಳಿಗೆ ತೊಡಗಿಸಿಕೊಳ್ಳಬೇಕು. ಸಾಲ ಕೊಡುವಾಗ ಲಭ್ಯವಿರುವ ದಾಖಲೆಗಳನ್ನು ಪರಿಶೀಲಿಸಿ ಸಾಲ ಕೊಡಬೇಕಿದೆ.

ಕೆಲವೊಮ್ಮೆ ಆಸ್ತಿ ಅಡಮಾನ ಸಾಲ ನೀಡುವಾಗ ಟೈಟಲ್ ಡೀಡ್ ಇರುವುದಿಲ್ಲ. ಆ ಸಂದರ್ಭದಲ್ಲಿ ವಕೀಲರ ಸಲಹೆ ಪಡೆದು ಕನಿಷ್ಠ ಸಾಲ ನೀಡಬೇಕು. ಸಾಲ ಕೊಡುವುದಿಲ್ಲ ಎಂದು ಕಳಿಸಬಾರದು. ನಾವು ಅವರಿಗೆ ಸಾಲ ಕೊಡದಿದ್ದರೆ ಅವರು ಮತ್ತೆ ಖಾಸಗಿ ವ್ಯಕ್ತಿಗಳ ಜತೆ ಲೇವಾದೇವಿ ಮಾಡಿ ಶೋಷಣೆಗೆ ಒಳಗಾಗುತ್ತಾರೆ. ಇದರಿಂದ ಸಹಕಾರಿ ತತ್ವ ವಿಫಲವಾಗುತ್ತದೆ ಎಂದರು. ಕೇವಲ ಶೇರುದಾರರಿಂದ ಡಿಪಾಸಿಟ್ ಪಡೆದು ಅದನ್ನು ಬೇರೆ ಬ್ಯಾಂಕಿನಲ್ಲಿ ತೊಡಗಿಸಿ ಅದರಿಂದ ಬರುವ ಕನಿಷ್ಠ ಲಾಭದಿಂದ ಸಂಸ್ಥೆಗಳು ನಡೆದರೆ ಮುಂದೊಂದು ದಿನ ಅವು ತಮ್ಮ ಅಸ್ತಿತ್ವ ಕಳೆದುಕೊಳ್ಳುವ ಸಾಧ್ಯತೆ ಇದೆ. ಜತೆಗೆ ಆಡಳಿತ ಮಂಡಳಿಗೆ ಸಂಸ್ಥೆ ನಡೆಸಲು ನಿರಾಸಕ್ತಿ ಉಂಟಾಗಬಹುದು. ಅದರ ಬದಲು ನಿರ್ದಿಷ್ಟ ರೂಪದಲ್ಲಿ ಸಂಸ್ಥೆಯವರೇ ನೇರವಾಗಿ ವ್ಯಕ್ತಿಗಳಿಗೆ ಸಾಲ ನೀಡಿದರೆ ಲಾಭ ಹೆಚ್ಚು ಸಿಗುತ್ತದೆ. ಈ ನಿಟ್ಟಿನಲ್ಲಿ ಹೆಚ್ಚು ಕ್ರಿಯಾಶೀಲತೆಯಿಂದ ಕೆಲಸ ಮಾಡಬೇಕು ಎಂದು ಅವರು ಸಲಹೆ ನೀಡಿದರು.

ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ಸಂಸ್ಥೆಯ ಪ್ರಾಂತೀಯ ಅಧಿಕಾರಿ ಎಸ್.ಆರ್.ನಾರಾಯಣರಾವ್ ಅಧ್ಯಕ್ಷತೆ ವಹಿಸಿದ್ದರು.
ಸೌಹಾರ್ದ ಅಭಿವೃದ್ಧಿ ಅಧಿಕಾರಿಗಳಾದ ಶಿವಕುಮಾರ್ ಬಿರಾದಾರ, ಜವಾಹರ ಮುಗ್ಗನವರ, ಸಹಕಾರ ಸಂಘಗಳ ಜಂಟಿ ನಿರ್ದೇಶಕರಾದ ರವಿ, ಸಂಪನ್ಮೂಲ ವ್ಯಕ್ತಿ ಸುಭಾಷ್ ಹೆಗಡೆ, ಸಪ್ತರ್ಷಿ ಸೌಹಾರ್ದ ಸಹಕಾರಿ ಸಂಘದ ಅಧ್ಯಕ್ಷರಾದ ಎನ್.ನಾಗಚಂದ್ರ, ಮೈಸೂರು ಮಂಡ್ಯ ಮತ್ತು ಕೊಡಗು ಜಿಲ್ಲಾ ಸೌಹಾರ್ದ ಸಹಕಾರಿ ಒಕ್ಕೂಟದ ಮುಖ್ಯ ಕಾರ್ಯ ನಿರ್ವಾಹಕರಾದ ಎಚ್.ಎನ್.ನವೀನ್, ಹೀಲ್ ಸೌಹಾರ್ದ ಸಹಕಾರಿ ಸಂಘದ ನಿರ್ದೇಶಕರಾದ ವಿ.ರೇಖಾ ಮುಂತಾದವರು ಇದ್ದರು.

RELATED ARTICLES
- Advertisment -
Google search engine

Most Popular