ಬೆಂಗಳೂರು: ನಗರದಲ್ಲಿ ಶಂಕಿತ ಉಗ್ರರ ಬಂಧನ ಹಾಗೂ ಸ್ಫೋಟಕಗಳು ಪತ್ತೆಯಾಗಿರುವ ಕಾರಣ ಬೆಂಗಳೂರು ನಗರ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಉನ್ನತ ಮಟ್ಟದ ಸಭೆ ನಡೆಸಲಾಗಿದೆ. ಸ್ವಾತಂತ್ರ್ಯ ದಿನಾಚರಣೆಗೆ 25 ದಿನ ಮುನ್ನವೇ ಪೊಲೀಸ್ ಅಧಿಕಾರಿಗಳು ಸಭೆ ಸೇರಿದ್ದು, ಭದ್ರತೆಗೆ ಸಂಬಂಧಿಸಿದ ವಿಷಯಗಳ ಬಗ್ಗೆ ಚರ್ಚಿಸಿದ್ದಾರೆ. ಸಾಮಾನ್ಯವಾಗಿ ಸ್ವಾತಂತ್ರ್ಯೋತ್ಸವಕ್ಕೆ 10 ದಿನ ಮುಂಚಿತವಾಗಿ ಭದ್ರತಾ ಸ್ಥಿತಿಗತಿ ಕುರಿತು ಚರ್ಚಿಸಲು ಉನ್ನತ ಮಟ್ಟದ ಪೊಲೀಸ್ ಅಧಿಕಾರಿಗಳ ಸಭೆ ನಡೆಯುತ್ತದೆ. ಆದರೆ, ಈ ಬಾರಿ ಮೊದಲೇ ಸಭೆ ನಡೆಸಿ ಭದ್ರತಾ ಕ್ರಮಗಳ ಬಗ್ಗೆ ಚರ್ಚಸಿಸಲಾಗಿದೆ.
ಸ್ವಾತಂತ್ರ್ಯ ದಿನಾಚರಣೆಗೆ ಕೈಗೊಳ್ಳಬೇಕಾದ ಭದ್ರತಾ ಕ್ರಮಗಳ ಕುರಿತು ಮೊದಲ ಸಭೆಯಲ್ಲಿ ಚರ್ಚಿಸಲಾಗಿದೆ. ಸಭೆಯಲ್ಲಿ ನಗರ ಪೊಲೀಸ್ ಕಮಿಷನರ್, ಹೆಚ್ಚುವರಿ ಪೊಲೀಸ್ ಆಯುಕ್ತರು, ಸಂಚಾರ ವಿಭಾಗದ ಜಂಟಿ ಅಯುಕ್ತರು, ಡಿಸಿ, ಬಿಬಿಎಂಪಿ ಅಧಿಕಾರಿಗಳು ಭಾಗಿಯಾಗಿದ್ದಾರೆ.
ಬೆಂಗಳೂರಿನಲ್ಲಿ ಮತ್ತು ರಾಜ್ಯದ ಇತರೆಡೆಗಳಲ್ಲಿ ಕೈಗೊಳ್ಳಬೇಕಾದ ಸುರಕ್ಷತಾ ಮತ್ತು ಭದ್ರತಾ ಕ್ರಮಗಳ ಬಗ್ಗೆಯೂ ಸಭೆಯಲ್ಲಿ ಚರ್ಚೆ ನಡೆದಿದೆ ಎನ್ನಲಾಗಿದೆ.
ಈ ಮಧ್ಯೆ, ಶಂಕಿತ ಉಗ್ರರ ಬಂಧನ ಹಾಗೂ ಇದೇ ಮೊದಲ ಬಾರಿಗೆ ರಾಜ್ಯದಲ್ಲಿ 4 ಸಜೀವ ಗ್ರೆನೇಡ್ ಪತ್ತೆಯಾದ ಕಾರಣ ಕರ್ನಾಟಕದಾದ್ಯಂತ ಪೊಲೀಸರು ಕಟ್ಟೆಚ್ಚರ ವಹಿಸಿದ್ದಾರೆ. ರೈಲು ನಿಲ್ದಾಣ, ಬಸ್ ನಿಲ್ದಾಣ ಹಾಗೂ ವಿಮಾನ ನಿಲ್ದಾಣಗಳಲ್ಲಿ ತಪಾಸಣೆ ಹೆಚ್ಚಿಸಲಾಗಿದೆ.