ದಾವಣಗೆರೆ : ಹೆಚ್ಚು ಮಳೆ ಹಾಗೂ ಬೇರೆ ಕಾರಣಗಳಿಂದ ಪರಿಶಿಷ್ಟ ಜಾತಿ ಕುಟುಂಬಗಳ ಒಳ ಮೀಸಲಾತಿ ಸಮೀಕ್ಷೆಯ ದಿನಾಂಕವನ್ನು ವಿಸ್ತರಿಸಲಾಗಿದೆ ಎಂದು ಜಿಲ್ಲಾಧಿಕಾರಿ ಗಂಗಾಧರಸ್ವಾಮಿ.ಜಿ.ಎಂ ತಿಳಿಸಿದರು.
ಶುಕ್ರವಾರ(ಮೇ.23) ರಂದು ಜಿಲ್ಲಾದಿಕಾರಿಗಳ ಕಚೇರಿಯಲ್ಲಿ ಪರಿಶಿಷ್ಟ ಜಾತಿ ಸಮಗ್ರ ಸಮೀಕ್ಷೆ ಕುರಿತು ಆಯೋಜಿಸಲಾಗಿದ್ದ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದರು. ಈಗಾಗಲೇ ಸಮೀಕ್ಷೆ ನಡೆಯುತ್ತಿದ್ದು ಮೇ 25 ರ ಸಂಜೆ 6 ಗಂಟೆಯವರೆಗೆ ನಡೆಯಲಿದೆ.
ವಿಶೇಷ ಶಿಬಿರಗಳು ಮೇ.26 ರಿಂದ 28 ರವರೆಗೆ ನಡೆಯಲಿದೆ. ಮತಗಟ್ಟೆ ಕೇಂದ್ರಗಳಲ್ಲಿ ಗಣತಿದಾರರು ಲಭ್ಯವಿರುತ್ತಾರೆ. ಯಾರನ್ನಾದರೂ ಬಿಟ್ಟು ಹೋಗಿದ್ದಲ್ಲಿ ವಿಶೇಷ ಶಿಬಿರದ ವೇಳೆ ಸೇರ್ಪಡೆ ಮಾಡಲು ಅವಕಾಶ ಕಲ್ಪಿಸಲಾಗಿದೆ.
2011ರ ಜನಗಣತಿಯ ಪ್ರಕಾರ 318305 ಪ.ಜಾತಿ ಜನಸಂಖ್ಯೆಯನ್ನು ಹೊಂದಿದ್ದು, ಪ್ರಸ್ತುತ ನಡೆಯುತ್ತಿರುವ ಗಣತಿಯ ಪ್ರಕಾರ ಸುಮಾರು 3,29,064 ಲಕ್ಷಕ್ಕೂ ಹೆಚ್ಚು ಪರಿಶಿಷ್ಟ ಜಾತಿಯ ಜನಗಣತಿ ಸಮೀಕ್ಷೆ ಮಾಡಿ ಶೇ 100 ಕ್ಕಿಂತ ಹೆಚ್ಚು ಸಾಧನೆ ಮಾಡಲಾಗಿದೆ. ಸಮೀಕ್ಷೆ ವೇಳೆ 85369 ಮನೆ ಭೇಟಿ ಗುರಿ ಇತ್ತು, ಈಗಾಗಲೇ 86366 ಮನೆಗಳ ಸಮೀಕ್ಷೆ ಮಾಡಲಾಗಿದೆ. ಸಮೀಕ್ಷೆಯಲ್ಲಿ ರಾಜ್ಯದಲ್ಲೇ ದಾವಣಗೆರೆ ಮೊದಲನೇ ಸ್ಥಾನದಲ್ಲಿದೆ ಎಂದರು.
ಸಾರ್ವಜನಿಕರು ಮೊಬೈಲ್ ಆಪ್ಲಿಕೇಶನ್ ಮೂಲಕವು ಕೂಡ ನೋಂದಾಣಿ ಮಾಡಿಸಬಹುದು. ಮೇ.5 ರಿಂದ ಆರಂಭವಾಗಿದ್ದು ಮೇ 25 ರವರೆಗೆ ಮನೆ-ಮನೆ ಭೇಟಿ ನೀಡಿ ಸಮೀಕ್ಷೆ ನಡೆಸಲಾಗುವುದು, ವಿಶೇಷ ಶಿಬಿರ (ಸಮೀಕ್ಷಾ ಬ್ಲಾಕ್ ವ್ಯಾಪ್ತಿಯಲ್ಲಿ) 3 ದಿನಗಳ ಕಾಲ ಮೇ.26 ರಿಂದ 28 ರವರೆಗೆ ಕೈಬಿಟ್ಟು ಹೋದಂತಹ ಪರಿಶಿಷ್ಟ ಜಾತಿಯ ಕುಟುಂಬದವರು ಶಿಬಿರಕ್ಕೆ ಆಗಮಿಸಿ ನೋಂದಾಯಿಸಿಕೊಳ್ಳಬಹುದು.
ಮೇ.19 ರಿಂದ 28 ರವರೆಗೆ ಸಮೀಕ್ಷೆಯಲ್ಲಿ ಆನ್‍ಲೈನ್ ವೆಬ್ ಸೈm http://schedulecastesurvey.karnataka.gov.in/selfdeclaration ಮೂಲಕ ಸ್ವಯಂ ಘೋಷಣೆಯನ್ನು ನಿಗದಿಪಡಿಸಲಾಗಿದೆ.
ಜಿಲ್ಲೆಯಲ್ಲಿ ಸಮೀಕ್ಷೆದಾರರು ಪ್ರತಿ ಮತಗಟ್ಟೆಗೆ ಒಬ್ಬರಂತೆ 1693 ಗಣತಿದಾರರು, ಪರಿಶಿಷ್ಟ ಜಾತಿ ಹೆಚ್ಚಿರುವ ಮತಗಟ್ಟೆಗಳಲ್ಲಿ ಹೆಚ್ಚುವರಿ 119 ಗಣತಿದಾರರನ್ನು ನೇಮಿಸಲಾಗಿರುತ್ತದೆ. ಪ್ರತಿ 10 ಸಮೀಕ್ಷಾದಾರರಿಗೆ ಒಬ್ಬರಂತೆ 169 ಮೇಲ್ವಿಚಾರಕರನ್ನು ಸೇರಿದಂತೆ ಒಟ್ಟು 1981 ಗಣತಿ ಕಾರ್ಯದಲ್ಲಿ ತೊಡಗಿದ್ದಾರೆ.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸುರೇಶ್.ಬಿ.ಇಟ್ನಾಳ್ ಮಾತನಾಡಿ ಜಿಲ್ಲೆಯಲ್ಲಿ 2 ಗ್ರಾಮಗಳಲ್ಲಿ ಮಾತ್ರ ಖಾಸಗಿ ಬೋರ್‍ವೆಲ್ ಕೊರೆಸಲಾಗಿದೆ. ಮಳೆಗಾಲ ಪ್ರಾರಂಭವಾಗಿರುವುದರಿಂದ ಜಿಲ್ಲೆಯಲ್ಲಿರುವ ಎಲ್ಲಾ ಪೈಪ್ ಲೈನ್ ಗಳನ್ನು ಅಳವಡಿಸಿ, ಕಲುಷಿತ ನೀರನ್ನು ಹೊರಹಾಕಲು ಕ್ರಮಕೈಗೊಳ್ಳಲಾಗಿದೆ. ಚರಂಡಿಯಲ್ಲಿರುವ ಗಲೀಜನ್ನು ಸ್ವಚ್ಚಗೊಳಿಸಲಾಗಿದೆ. 6 ತಾಲ್ಲೂಕುಗಳಲ್ಲಿ ಚರಂಡಿ ಸ್ವಚ್ಚಗೊಳಿಸಲಾಗಿದೆ. ಹರಿಹರದಲ್ಲಿರುವ ಬೆಂಕಿ ನಗರದಿಂದ ಗುತ್ತೂರುವರೆಗೂ ಚರಂಡಿಗಳನ್ನು ಸ್ವಚ್ಚಗೊಳಿಸಿಲಾಗಿದೆ. ಜಲಜೀವನ್ ನೀರಿನ ಗುಣಮಟ್ಟವನ್ನು ಪರಿಶೀಲಿಸಲಾಗಿದೆ. ಇದರಿಂದ ಜನರು ಹಳೆಯ ನೀರನ್ನು ಉಪಯೋಗಿಸದೇ ಪದೇ ಪದೇ ನೀರನ್ನು ಚರಂಡಿಗೆ ಬಿಟ್ಟು ಹೊಸ ಶುದ್ದವಾದ ನೀರನ್ನು ತುಂಬುತ್ತಾರೆ. ಇದರಿಂದ ಡೆಂಗ್ಯೂ ತಡೆಗಟ್ಟಬಹುದು. ಜಿಲ್ಲೆಯಲ್ಲಿ 113 ಕಿ.ಮೀ ಸಸಿ ನಡೆಸುವ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು, ಪ್ರತಿ 1 ಕಿ.ಮೀಗೆ 300 ಗಿಡದಂತೆ 42000 ಗಿಡ ನಡೆಲಾಗುವುದು ಎಂದರು.
ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕರಾದ ನಾಗರಾಜ.ಕೆ, ಡಿಡಿಪಿಯು ಕರಿಸಿದ್ದಪ್ಪ ಉಪಸ್ಥಿತರಿದ್ದರು.