Thursday, April 3, 2025
Google search engine

Homeಸ್ಥಳೀಯಅಂಧತ್ವ ನಿವಾರಣೆಗೆ ನೇತ್ರದಾನವೇ ಪರಿಹಾರ: ಪ್ರಾಂಶುಪಾಲ ಎಸ್.ವಿಷಕಂಠಮೂರ್ತಿ

ಅಂಧತ್ವ ನಿವಾರಣೆಗೆ ನೇತ್ರದಾನವೇ ಪರಿಹಾರ: ಪ್ರಾಂಶುಪಾಲ ಎಸ್.ವಿಷಕಂಠಮೂರ್ತಿ

ಮೈಸೂರು: ನಮ್ಮ ರಾಜ್ಯದಲ್ಲಿ ಲಕ್ಷಾಂತರ ಮಂದಿ, ತಮ್ಮ ಅಂಧತ್ವ ನಿವಾರಿಸಿಕೊಳ್ಳಲು, ನೇತ್ರದಾನಿಗಳ ನಿರೀಕ್ಷೆಯಲ್ಲಿದ್ದಾರೆ ಎಂದು ಮಹಾಜನ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಎಸ್. ವಿಷಕಂಠಮೂರ್ತಿ ತಿಳಿಸಿದರು.

ಕಾಲೇಜಿನ ವಿವೇಕಾನಂದ ಸಭಾಂಗಣದಲ್ಲಿ  ವಿಶ್ವ ನೇತ್ರದಾನ ದಿನದ ಅಂಗವಾಗಿ  ಸಮರ್ಥನಂ ಅಂಗವಿಕಲರ ಸಂಸ್ಥೆ, ಥಿಯೇಟರ್ ಫೋಕ್ಸ್ ಹಾಗೂ ಮಹಾಜನ ಕಾಲೇಜು ಎನ್.ಎಸ್.ಎಸ್ ಘಟಕ ಸಂಯುಕ್ತ ಆಶ್ರಯದಲ್ಲಿ ನಡೆದ ನೇತ್ರದಾನ ನೋಂದಣಿ ಶಿಬಿರ ಹಾಗೂ ಜಾಗೃತಿ ಕಾರ್ಯಕ್ರಮಕ್ಕೆ  ಚಾಲನೆ ಕೊಟ್ಟು ಮಾತನಾಡಿದರು. ನೇತ್ರ ದಾನ ಮಹಾದಾನವಾಗಿದ್ದು, ನಮ್ಮ ರಾಜ್ಯದಲ್ಲಿ ನೇತ್ರ ದಾನ ಮಾಡುವುದರಿಂದ ಒಂದು ಅಥವಾ ಹೆಚ್ಚಿನ ವ್ಯಕ್ತಿಗಳಲ್ಲಿ ಅಂಧತ್ವ  ಸರಿಪಡಿಸಲು  ಸಹಾಯ ಮಾಡಿದಂತಾಗುತ್ತದೆ ಎಂದು ತಿಳಿಸಿದರು.

ಉಪನ್ಯಾಸಕ ಡಾ.ಎಂ.ಜಿ. ಪ್ರಭುದೇವ ಪ್ರಾಸ್ತಾವಿಕ ನುಡಿ ಮಾತನಾಡಿ, ಒಬ್ಬ ವ್ಯಕ್ತಿಯ ನೇತ್ರದಾನದಿಂದ,  ಕನಿಷ್ಠ ಇಬ್ಬರು ವ್ಯಕ್ತಿಗಳ ಜೀವನವನ್ನು ಬೆಳಗಿಸಲು ಸಾಧ್ಯವಿದೆ. ದೂರ ದೃಷ್ಟಿ, ಸಮೀಪ ದೃಷ್ಟಿ ಹಾಗು ಆಸ್ಟಿಗ್ಮಾಟಿಸಂ ಮುಂತಾದ ದೃಷ್ಟಿಗೆ ಸಂಬಂಧಿಸಿದ ರೋಗಗಳಿಂದ ನರಳುವವರು ಸಹ ನೇತ್ರ ದಾನ ಮಾಡಬಹುದು ಎಂದು ತಿಳಿಸಿದರು.

ಸಮರ್ಥನಂ ಅಂಗವಿಕಲರ ಸಂಸ್ಥೆಯ ಮೈಸೂರು ವಿಭಾಗದ ಸಂಯೋಜಕ ಶಿವರಾಜು ಮಾತನಾಡಿ, ಅಂಕಿಅಂಶಗಳ ಪ್ರಕಾರ ಭಾರತದಲ್ಲಿ ಸುಮಾರು ಒಂದು ಕೋಟಿ ೫೦ ಲಕ್ಷ ಅಂಧರಿದ್ದು, ಅವರುಗಳಲ್ಲಿ ಸುಮಾರು ೬೮ ಲಕ್ಷ ಪಾರದರ್ಶಕ ಜನರಿಗೆ ಪಟಲಕ್ಕೆ ಸಂಬಂಧಿಸಿದ ದೃಷ್ಟಿಹೀನತೆ ಇದ್ದು, ಕಾರ್ನಿಯಾದ ಬದಲಿಸುವಿಕೆಯಿಂದ ಇವರುಗಳ ದೃಷ್ಟಿಮರಳುವ ಸಾಧ್ಯತೆ ಇದೆ. ಮಾನವ ಅಂಗಾಂಶಗಳನ್ನು ಸಮೀಕರಿಸಬಲ್ಲ ಇನ್ಯಾವುದೇ ಅಂಶಗಳಿಲ್ಲ ಎಂಬ ಕಾರಣದಿಂದ ನಾವೆಲ್ಲರೂ ನಮ್ಮ ಮೃತ್ಯುವಿನ ನಂತರ ನಮ್ಮ ಕಣ್ಣುಗಳನ್ನು ದಾನ ಮಾಡಲು ಪ್ರತಿಜ್ಞೆ ಮಾಡುವ ಅಗತ್ಯವಿದೆ ಎಂದು ಹೇಳಿದರು. 

ಥಿಯೇಟರ್ ಫೋಕ್ಸ್ ಸಂಸ್ಥಾಪಕ ಪ್ರಜ್ವಲ್ ಮಾತನಾಡಿ, ಎಲ್ಲ ದಾನಕ್ಕಿಂತ ಶ್ರೇಷ್ಠ ದಾನ ನೇತ್ರ ದಾನ, ಮರಣಾ ನಂತರ ಕಣ್ಣನ್ನು ಮಣ್ಣು ಮಾಡದೆ ದಾನ ಮಾಡಿದರೆ, ಇಬ್ಬರ ಅಂಧರ ಬಾಳಿಗೆ ಬೆಳಕು ನೀಡಿದಂತಾಗುತ್ತದೆ ಎಂದು ತಿಳಿಸಿದರು.

ವೇದಿಕೆ ಕಾರ್ಯಕ್ರಮ ಮುಗಿದ ನಂತರ ನೇತ್ರದಾನದ ಬಗ್ಗೆ ಮೂರು ಕಿರು ನಾಟಕಗಳನ್ನು ಪ್ರದರ್ಶಿಸಿ ಜಾಗೃತಿ ನೀಡಲಾಯಿತು.  ಕಾಲೇಜಿನ ವಿದ್ಯಾರ್ಥಿಗಳು ಸೇರಿದಂತೆ ೧೫೦ಕ್ಕೂ ಹೆಚ್ಚು ಯುವಕರು ನೇತ್ರದಾನ ನೋಂದಣಿ ಮಾಡಿಸಿದರು.

 ಸದರಿ ಕಾರ್ಯಕ್ರಮದಲ್ಲಿ ಎನ್. ಎಸ್.ಎಸ್ ಕಾರ್ಯಕ್ರಮ ಅಧಿಕಾರಿ ಬಸವರಾಜಪ್ಪ, ಯುವ ರಂಗಕರ್ಮಿಗಳಾದ ದರ್ಶನ್, ಹೃತಿಕ್, ಪ್ರತೀಕ್ಷಾ ಆಳ್ವ, ಎಸ್.ರಾಕೇಶ್, ಪ್ರೀತಿ, ಸನ್ಮತಿ, ಸಲ್ಮಾನ್, ಕಾರ್ತಿಕ್ ಸಾರಸ್, ಕಿರಣ್, ಮಾನಸಿ ಪೂವಮ್ಮ ಸೇರಿದಂತೆ ಮತ್ತಿತರರು ಹಾಜರಿದ್ದರು.

RELATED ARTICLES
- Advertisment -
Google search engine

Most Popular