ನವದೆಹಲಿ: ನಕಲಿ ಪ್ರಮಾಣ ಪತ್ರ ನೀಡಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿ ಮಾಜಿ ಪ್ರೊಬೇಷನರಿ ಐಎಎಸ್ ಅಧಿಕಾರಿ ಪೂಜಾ ಖೇಡ್ಕರ್ ಅವರಿಗೆ ದಿಲ್ಲಿ ಹೈಕೋರ್ಟ್ ನಿರೀಕ್ಷಣಾ ಜಾಮೀನು ನಿರಾಕರಿಸಿದೆ.
ದೈಹಿಕ ನ್ಯೂನತೆ ಬಗ್ಗೆ ಸುಳ್ಳು ಹೇಳಿ ಹೆಸರು ಮತ್ತು ಉಪನಾಮವನ್ನು ಬದಲಿಸಿ ನಕಲಿ ಒಬಿಸಿ ಪ್ರಮಾಣಪತ್ರವನ್ನು ಮಾಡಿಸಿಕೊಂಡಿದ್ದ ಆರೋಪ ಅವರ ಮೇಲಿದೆ. ಈ ಸಂಬಂಧ ಅವರು ನಿರೀಕ್ಷಣಾ ಜಾಮೀನಿಗಾಗಿ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು. ಅರ್ಜಿಯನ್ನು ವಿಚಾರಣೆ ನಡೆಸಿದ ನ್ಯಾಯಾಲಯ ಆಕೆಯ ಉದ್ದೇಶಗಳು ಅಧಿಕಾರಿಗಳನ್ನು ವಂಚಿಸುವುದಾಗಿತ್ತು. ಅವಳ ನಿರ್ಧಾರ ದೊಡ್ಡ ಪಿತೂರಿಯ ಭಾಗವಾಗಿತ್ತು ಎಂದು ಹೇಳಿದೆ.
ಆಕೆಯ ವಿರುದ್ಧದ ಆರೋಪಗಳು ಅಧಿಕಾರಿಗಳಿಗೆ ಮಾತ್ರವಲ್ಲದೆ, ರಾಷ್ಟ್ರದ ದೊಡ್ಡ ವಂಚನೆಗೆ ಉದಾಹರಣೆಯಾಗಿದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ. ಕಳೆದ ತಿಂಗಳು ಹೈಕೋರ್ಟ್ ತನ್ನ ಆದೇಶವನ್ನು ಕಾಯ್ದಿರಿಸಿತ್ತು.
ಆಕೆಯ ವಿರುದ್ಧ ಆರೋಪ ಕೇಳಿಬಂದ ಬೆನ್ನಲ್ಲೇ ನಡೆದಿದ್ದ ಪ್ರಾಥಮಿಕ ತನಿಖೆ ವೇಳೆ ಆಕೆ ತಪ್ಪಿತಸ್ಥೆ ಎಂದು ಕಂಡು ಬಂದಿತ್ತು. ಪೂಜಾ ಖೇಡ್ಕರ್ ವಿರುದ್ಧ ಆರೋಪ ಕೇಳಿ ಬಂದ ಬಳಿಕ ಅವರನ್ನು ಭಾರತೀಯ ಆಡಳಿತ ಸೇವೆಯಿಂದ ಕೇಂದ್ರ ಸರಕಾರ ಬಿಡುಗಡೆ ಮಾಡಿತ್ತು.