Friday, November 14, 2025
Google search engine

Homeಅಪರಾಧಬೆಳಗಾವಿಯಲ್ಲಿ ನಕಲಿ ಕಾಲ್ ಸೆಂಟರ್ ಪತ್ತೆ; ಅಮೆರಿಕ ಪ್ರಜೆಗಳಿಗೆ ವಂಚಿಸಿದ 33 ಜನರ ಬಂಧನ.

ಬೆಳಗಾವಿಯಲ್ಲಿ ನಕಲಿ ಕಾಲ್ ಸೆಂಟರ್ ಪತ್ತೆ; ಅಮೆರಿಕ ಪ್ರಜೆಗಳಿಗೆ ವಂಚಿಸಿದ 33 ಜನರ ಬಂಧನ.

ವರದಿ :ಸ್ಟೀಫನ್ ಜೇಮ್ಸ್.

28 ಪುರುಷರು ಮತ್ತು ಐದು ಮಹಿಳೆಯರು ಸೇರಿದಂತೆ ಒಟ್ಟು 33 ಜನರನ್ನು ಬಂಧಿಸಲಾಗಿದ್ದು, ಅವರಿಂದ 37 ಲ್ಯಾಪ್‌ಟಾಪ್‌ಗಳು ಮತ್ತು 37 ಮೊಬೈಲ್ ಫೋನ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.

ಬೆಳಗಾವಿ: ಅಂತರರಾಷ್ಟ್ರೀಯ ಪ್ರಜೆಗಳಿಗೆ ವಂಚಿಸುತ್ತಿದ್ದ ಬೆಳಗಾವಿ ಮೂಲದ ನಕಲಿ ಕಾಲ್ ಸೆಂಟರ್ ಅನ್ನು ಪತ್ತೆಹಚ್ಚಿದ್ದು, 33 ಜನರನ್ನು ಬಂಧಿಸಲಾಗಿದೆ ಎಂದು ಪೊಲೀಸರು ಗುರುವಾರ ತಿಳಿಸಿದ್ದಾರೆ.

ಬೆಂಗಳೂರಿನ ಆಂತರಿಕ ಭದ್ರತಾ ವಿಭಾಗ(ಐಎಸ್‌ಡಿ) ಮೂರು ದಿನಗಳ ಹಿಂದೆ ನೀಡಿದ ಸುಳಿವು ಮತ್ತು ಬುಧವಾರ ಅನುಮಾನಾಸ್ಪದ ಕೇಂದ್ರದ ಬಗ್ಗೆ ಹೆಚ್ಚುವರಿ ಅನಾಮಧೇಯ ದೂರಿನ ಮೇರೆಗೆ ಈ ಕಾರ್ಯಾಚರಣೆ ನಡೆಸಲಾಯಿತು.

ಈ ಮಾಹಿತಿಯ ಆಧಾರದ ಮೇಲೆ, ಎಫ್‌ಐಆರ್ ದಾಖಲಿಸಿಕೊಂಡ ಪೊಲೀಸರು, ಕಾಲ್ ಸೆಂಟರ್ ಕಾರ್ಯನಿರ್ವಹಿಸುತ್ತಿದ್ದ ಬಾಕ್ಸೈಟ್ ರಸ್ತೆಯಲ್ಲಿರುವ ಕುಮಾರ್ ಹಾಲ್ ಮೇಲೆ ದಾಳಿ ನಡೆಸಿದ್ದಾರೆ.

ಈ ಕಾಲ್ ಸೆಂಟರ್ ಅಮೆರಿಕನ್ ನಾಗರಿಕರನ್ನು ಗುರಿಯಾಗಿಸಿಕೊಂಡು, ಆನ್‌ಲೈನ್‌ ಟ್ರೇಡಿಂಗ್‌ ಹೆಸರಿನಲ್ಲಿ ಜನರಿಗೆ ವಂಚಿಸಿ ಹಣ ವರ್ಗಾಯಿಸಿಕೊಳ್ಳುತ್ತಿತ್ತು ಎಂದು ಬೆಳಗಾವಿ ನಗರ ಪೊಲೀಸ್ ಆಯುಕ್ತ ಬೋರ್ಸೆ ಭೂಷಣ್ ಗುಲಾಬ್ರಾವ್ ಅವರು ತಿಳಿಸಿದ್ದಾರೆ.

28 ಪುರುಷರು ಮತ್ತು ಐದು ಮಹಿಳೆಯರು ಸೇರಿದಂತೆ ಒಟ್ಟು 33 ಜನರನ್ನು ಬಂಧಿಸಲಾಗಿದ್ದು, ಅವರಿಂದ 37 ಲ್ಯಾಪ್‌ಟಾಪ್‌ಗಳು ಮತ್ತು 37 ಮೊಬೈಲ್ ಫೋನ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.

ಆರೋಪಿಗಳು ಅಮೆರಿಕಾದ ಪ್ರಜೆಗಳಿಗೆ ಕರೆ ಮಾಡಿ, ಶೇರ್‌ ಟ್ರೇಡಿಂಗ್‌, ಹೊಸ ಮೊಬೈಲ್‌ ಆಫರ್‌ ಸೇರಿದಂತೆ ನಾನಾ ಆಮಿಷ ಒಡ್ಡಿ ಹಣ ದೋಚುತ್ತಿದ್ದರು. ದಾಳಿ ವೇಳೆ ಪತ್ತೆಯಾದ ಮೊಬೈಲ್‌ ಹಾಗೂ ಲ್ಯಾಪ್‌ಟಾಪ್‌ ಪರಿಶೀಲಿಸಿದಾಗ ವಿಶೇಷ ಸಾಫ್ಟ್‌ವೇರ್‌ ಬಳಸಿ ಅಮೆರಿಕಾದ ಅಸಂಖ್ಯಾತ ಮೊಬೈಲ್‌ಗಳಿಗೆ ಕರೆ ಮಾಡಿರುವುದು ಗೊತ್ತಾಗಿದೆ. ನೈಜ ಲೊಕೇಷನ್‌ ಮಾಹಿತಿ ಮರೆಮಾಚಿ ನಕಲಿ ಲೊಕೇಷನ್‌ ತೋರಿಸುವ ಸಾಫ್ಟ್‌ವೇರ್‌ ಬಳಕೆ ಮಾಡುತ್ತಿದ್ದರು” ಎಂದು ಅವರು ತಿಳಿಸಿದ್ದಾರೆ.

ಆರೋಪಿಗಳು ಅಸ್ಸಾಂ, ಗುಜರಾತ್, ಹಿಮಾಚಲ ಪ್ರದೇಶ, ಜಾರ್ಖಂಡ್, ಮಹಾರಾಷ್ಟ್ರ, ಮೇಘಾಲಯ, ನಾಗಾಲ್ಯಾಂಡ್, ರಾಜಸ್ಥಾನ, ಉತ್ತರ ಪ್ರದೇಶ, ಉತ್ತರಾಖಂಡ ಮತ್ತು ಪಶ್ಚಿಮ ಬಂಗಾಳದವರಾಗಿದ್ದು, ನೇಪಾಳದ ಒಬ್ಬ ವ್ಯಕ್ತಿ ಸಹ ಸೇರಿದ್ದಾರೆ.

ಈ ಜಾಲದ ಮುಖ್ಯ ಸಂಚುಕೋರ ಗುಜರಾತ್‌ನಲ್ಲಿ ನೆಲೆಸಿದ್ದು, ಇನ್ನಿಬ್ಬರು ಪಶ್ಚಿಮ ಬಂಗಾಳದಲ್ಲಿದ್ದು, ಪೊಲೀಸರು ಅವರನ್ನು ಪತ್ತೆಹಚ್ಚುತ್ತಿದ್ದಾರೆ.

ಈ ಕಾಲ್ ಸೆಂಟರ್ ಕಳೆದ ಮಾರ್ಚ್‌ನಿಂದ ಸಕ್ರಿಯವಾಗಿದ್ದು, ಕಾರ್ಯಾಚರಣೆಯನ್ನು ವಿಸ್ತರಿಸಲು ಯೋಜಿಸುತ್ತಿತ್ತು.

ಮಾಹಿತಿ ತಂತ್ರಜ್ಞಾನ ಕಾಯ್ದೆಯ ಸೆಕ್ಷನ್ 66C ಮತ್ತು 66D ಅಡಿಯಲ್ಲಿ ಭಾರತೀಯ ನ್ಯಾಯ ಸಂಹಿತಾ(BNS)ನ ಸೆಕ್ಷನ್ 319 ರ ಅಡಿಯಲ್ಲಿ ಕೇಸ್ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ವಂಚನೆಯು ಅಮೆರಿಕನ್ ನಾಗರಿಕರನ್ನು ಗುರಿಯಾಗಿಸಿಕೊಂಡಿರುವುದರಿಂದ, ಐಟಿ ಕಾಯ್ದೆಯ ಸೆಕ್ಷನ್ 75 ಮತ್ತು ಭಾರತದ ಹೊರಗಿನ ಅಪರಾಧಗಳಿಗೆ ನ್ಯಾಯವ್ಯಾಪ್ತಿಯನ್ನು ವಿಸ್ತರಿಸುವ BNS ನ ಸೆಕ್ಷನ್ 48 ಮತ್ತು 49 ಅನ್ನು ಸೇರಿಸಲಾಗಿದೆ.

RELATED ARTICLES
- Advertisment -
Google search engine

Most Popular