ಸೈದಾಪುರ : ಕೌಟುಂಬಿಕ ಕಲಹದ ಹಿನ್ನಲೆ ಯುವಕನೊಬ್ಬ ತನ್ನ ಹೆಂಡತಿ, ಅತ್ತೆ, ಮಾವನನ್ನು ಕೊಲೆ ಮಾಡಿರುವ ಘಟನೆ ಯಾದಗಿರಿ ತಾಲ್ಲೂಕಿನ ಮುನಗಾಲದಲ್ಲಿ ನಡೆದಿದೆ.
ಗ್ರಾಮದ ನಿವಾಸಿ ನವೀನ್ ದೇವಿಂದ್ರಪ್ಪ (೩೫) ಎಂಬಾತನು ತನ್ನ ಕುಟುಂಬದಲ್ಲಿ ಉಂಟಾದ ಕಲಹದಿಂದಾಗಿ ಪತ್ನಿ, ಅತ್ತೆ, ಮಾವನನ್ನು ಬರ್ಬರವಾಗಿ ಕೊಲೆ ಮಾಡಿದ್ದಾನೆ. ಕೊಲೆಯಾದ ಮೂವರು ದಾವಣಗೆರೆ ಮೂಲದವರಾಗಿದ್ದು, ನವೀನ್ ಪತ್ನಿ ಅನ್ನಪೂರ್ಣ (೨೫), ಅತ್ತೆ ಕವಿತಾ (೪೫) ಮಾವ ಬಸವರಾಜಪ್ಪ (೫೨) ಕೊಲೆಯಾದ ದುರ್ದೈವಿಗಳು. ಕಳೆದ ನಾಲ್ಕು ವರ್ಷಗಳ ಹಿಂದೆ ಪ್ರೀತಿಸಿ ದಾವಣಗೆರೆ ಮೂಲದ ಅನ್ನಪೂರ್ಣಳನ್ನು ನವೀನ್ ಮದುವೆಯಾಗಿದ್ದ. ಅನ್ನಪೂರ್ಣ ಮತ್ತು ನವೀನ್ ದಂಪತಿಗೆ ಒಂದು ಹೆಣ್ಣು ಮಗು ಇದೆ. ಕಳೆದ ಒಂದು ವರ್ಷದ ಹಿಂದೆ ಗಂಡನ ಕಿರುಕುಳ ತಾಳದೆ ಅನ್ನಪೂರ್ಣ ತವರು ಮನೆಗೆ ಹೋಗಿದ್ದಳು. ಒಂದು ವರ್ಷದಿಂದ ತಂದೆ, ತಾಯಿ ಜೊತೆಗಿದ್ದ ಅನ್ನಪೂರ್ಣ, ಮತ್ತೆ ಜೊತೆಗೆ ಇರೋಣಾ ಅಂತ ಕರೆದಿದ್ದರಿಂದ ಬಂದಿದ್ದರು.
ಇದರಿಂದ ನ್ಯಾಯ ಪಂಚಾಯಿತಿ ಮಾಡಿ ಮತ್ತೆ ಜೊತೆಗಿರಲು ಒಪ್ಪಿಗೆ ನೀಡಿದ ನಂತರ ಮಗಳನ್ನು ಗಂಡ ಮನೆಗೆ ಬಿಡಲು ದಾವಣಗೆರೆಯಿಂದ ಅನ್ನಪೂರ್ಣ ಪೋಷಕರು ಬಂದಿದ್ದರು. ಈ ವೇಳೆ ಕಬ್ಬಿಣದ ರಾಡ್ ಹಾಗೂ ಚಾಕುನಿಂದ ಮೂವರನ್ನು ಕೊಲೆ ಮಾಡಲಾಗಿದೆ ಎನ್ನಲಾಗಿದೆ. ಕೊಲೆ ಮಾಡಿ ವಡಗೇರಾ ತಾಲ್ಲೂಕಿನ ಜೋಳದಡಗಿ ಬಳಿ ಶವ ಬಿಸಾಡಿದ್ದಾನೆಂದು ಉನ್ನತ ಮೂಲಗಳಿಂದ ತಿಳಿದುಬಂದಿದೆ.
ಸದ್ಯ ಅನ್ನಪೂರ್ಣ ಶವವನ್ನು ಪೊಲೀಸರು ಪತ್ತೆ ಮಾಡಿದ್ದಾರೆ. ಸೈದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.