ವಿಜ್ಞಾನ ಓದಿ ಕರ್ಮಸಿದ್ಧಾಂತ ನಂಬಿದರೆ, ಮೌಡ್ಯಕ್ಕೆ ಜೋತು ಬಿದ್ದರೆ ಅಂಥಾ ಶಿಕ್ಷಣ ನಿರರ್ಥಕ: ಸಿಎಂ
ಬೆಂಗಳೂರು: ರೈತರು-ಶಿಕ್ಷಕರು-ಸೈನಿಕರು ದೇಶದ ನಿರ್ಮಾತೃಗಳು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನುಡಿದರು.
ಶಾಲಾ ಶಿಕ್ಷಣ ಮತ್ತು ಉನ್ನತ ಶಿಕ್ಷಣ ಇಲಾಖೆ ಬ್ಯಾಂಕ್ವೆಟ್ ಹಾಲ್ ನಲ್ಲಿ ಭಾರತ ರತ್ನ ಡಾ.ಸರ್ವೆಪಲ್ಲಿ ರಾಧಾಕೃಷ್ಣನ್ ಜನ್ಮದಿನದ ಅಂಗವಾಗಿ ಆಯೋಜಿಸಿದ್ದ ಶಿಕ್ಷಕರ ದಿನಾಚರಣೆ ಮತ್ತು ರಾಜ್ಯ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
ದೇಶದ ಎರಡನೇ ರಾಷ್ಟ್ರಾಧ್ಯಕ್ಷರಾಗಿದ್ದ ರಾಧಾಕೃಷ್ಣನ್ ಅವರು ಶ್ರೇಷ್ಠ ಶಿಕ್ಷಕರಾಗಲು ಸಾಧ್ಯವಾಗಿದೆ ಅಂದರೆ, ಇದೇ ಸಾಧ್ಯತೆ ಎಲ್ಲಾ ಶಿಕ್ಷಕರಿಗೂ ಇದ್ದೇ ಇರುತ್ತದೆ. ಹೀಗಾಗಿ ಪ್ರತಿಯೊಬ್ಬ ಶಿಕ್ಷಕರೂ ರಾಧಾಕೃಷ್ಣನ್ ಅವರ ಮಾರ್ಗದಲ್ಲಿ ನಡೆಯಲು ಪ್ರಯತ್ನಿಸಬೇಕು ಎಂದರು.
ಪ್ರತಿಯೊಬ್ಬ ವಿದ್ಯಾರ್ಥಿಯ ವ್ಯಕ್ತಿತ್ವವನ್ನು ರೂಪಿಸುವ ಮೂಲಕ ದೇಶದ ವ್ಯಕ್ತಿತ್ವವನ್ನು ರೂಪಿಸುವವರು ನಮ್ಮ ಶಿಕ್ಷಕರು. ಇದು ಶಿಕ್ಷಕರ ಮೂಲಭೂತ ಜವಾಬ್ದಾರಿ ಎಂದರು. ಆಕಸ್ಮಿಕವಾಗಿ ಶಿಕ್ಷಕ ವೃತ್ತಿಗೆ ಬಂದವರಿಗಿಂತ ಶಿಕ್ಷಕ ವೃತ್ತಿಯನ್ನು ಆಯ್ಕೆ ಮಾಡಿಕೊಂಡವರೇ ಅತಿ ಹೆಚ್ಚಾಗಿದ್ದಾರೆ. ಹೀಗೆ ಈ ವೃತ್ತಿಯನ್ನು ಆಯ್ಕೆ ಮಾಡಿಕೊಂಡವರ ಬಗ್ಗೆ ನನಗೆ ಹೆಮ್ಮೆ ಎನಿಸುತ್ತದೆ ಎಂದರು.
ವಿದ್ಯಾರ್ಥಿಗಳು ಸ್ವತಂತ್ರವಾಗಿ ಯೋಚಿಸುವಂತೆ ರೂಪಿಸುವುದೇ ಶಿಕ್ಷಕರ ಜವಾಬ್ದಾರಿ. ವೈಜ್ಞಾನಿಕತೆ ಮತ್ತು ವೈಚಾರಿಕತೆಯನ್ನು ವಿದ್ಯಾರ್ಥಿಗಳು ಬೆಳೆಸಿಕೊಂಡರೆ ಮಾತ್ರ ಅವರಿಗೆ ಸಮಾಜ ಅರ್ಥ ಆಗುತ್ತದೆ. ಸಮಾಜದ ಸಮಸ್ಯೆಗಳಿಗೆ ಪರಿಹಾರ ರೂಪಿಸುತ್ತಾರೆ ಎಂದರು.
ವಿಜ್ಞಾನ ಓದಿರುವ ವಿದ್ಯಾರ್ಥಿಗಳೂ ಮೌಡ್ಯಕ್ಕೆ ಜೋತು ಬೀಳುವುದು, ಜಾತಿ ತಾರತಮ್ಯ ಮಾಡುವುದಾದರೆ ಅವರಿಗೆ ಸಿಕ್ಕ ಶಿಕ್ಷಣಕ್ಕೆ ಅರ್ಥ ಇರುವುದಿಲ್ಲ. ಆದ್ದರಿಂದ ವಿದ್ಯಾರ್ಥಿಗಳನ್ನು ವೈಚಾರಿಕವಾಗಿ ರೂಪಿಸುವ ಜವಾಬ್ದಾರಿ ಶಿಕ್ಷಣದ್ದಾಗಿದೆ ಎಂದರು.