ಬೆಟ್ಟದಪುರ : ಇಲ್ಲಿನ ಖಾಸಗಿ (ಕೊಶಮಟ್ಟಂ) ಫೈನಾನ್ಸ್ ನಲ್ಲಿ ಅಡವಿಟ್ಟ ಚಿನ್ನದ ಬಡ್ಡಿಯ ಮೊತ್ತವನ್ನು ಹೆಚ್ಚುವರಿಯಾಗಿ ಕಟ್ಟಿಸಿಕೊಂಡು ಗ್ರಾಹಕರ ಮೇಲೆ ದಬ್ಬಾಳಿಕೆ ನಡೆಸಿದ ಆರೋಪದ ಮೇಲೆ ಸಿಬ್ಬಂದಿಗಳ ವಿರುದ್ಧ ರೈತ ಸಂಘದ ಮುಖಂಡ ಹರೀಶ್ ರಾಜೇ ಅರಸ್ ಬುಧವಾರ ಫೈನಾನ್ಸ್ ನ ಕಚೇರಿಯಲ್ಲಿ ಪ್ರತಿಭಟಿಸಿದರು.
ಬಳಿಕ ಮಾತನಾಡಿದ ಅವರು ಬೆಟ್ಟದತುಂಗದ ಗ್ರಾಮದ ಮಹಿಳೆ ಪ್ರೀತಿ ರಾಜೇ ಅರಸ್ ರವರು ಅಡವಿಟ್ಟ ಚಿನ್ನಕ್ಕೆ ಪ್ರತಿ ತಿಂಗಳು 5ನೇ ತಾರೀಖಿನಂದು ತಪ್ಪದೇ ಬಡ್ಡಿಯ ಮೊತ್ತವನ್ನು ಕಟ್ಟುತ್ತಿದ್ದರು, ಕಟ್ಟಿದ ಬಡ್ಡಿಯ ಮೊತ್ತವನ್ನು ಬೇರೊಬ್ಬರ ಖಾತೆಗೆ ಜಮಾ ಮಾಡಿ, ನೀವು ಬಡ್ಡಿ ಕಟ್ಟಿಲ್ಲ ಎಂದು ವಾಗ್ವಾದಕ್ಕೆ ಇಳಿದು, ಮಹಿಳೆ ಎಂಬುದು ಕಾಣದೆ ಏಕವಚನದಲ್ಲಿ ನಿಂದಿಸಿರುವುದು, ಎಷ್ಟರಮಟ್ಟಿಗೆ ಸರಿ ಇದೆ ಎಂದು ಸಿಬ್ಬಂದಿಗಳನ್ನು ಪ್ರಶ್ನಿಸಿದರು.
ಪ್ರೀತಿ ರಾಜೇ ಅರಸ್ ಮಾತನಾಡಿ ಅಡವಿಟ್ಟ ಚಿನ್ನಕ್ಕೆ ಪ್ರತಿ ತಿಂಗಳು ತಪ್ಪದೇ ಬಡ್ಡಿಯ ಹಣವನ್ನು ಪಾವತಿಸಿದ್ದೇನೆ, ಚಿನ್ನ ಬಿಡಿಸಿಕೊಳ್ಳುವಾಗ ಹೆಚ್ಚುವರಿ ಹಣ ಪಡೆಯುತ್ತಿರುವುದು ಏಕೆ ಎಂದು ಕೇಳಿದ್ದಕ್ಕೆ, ನನಗೆ ನಿಂದಿಸಿದಲ್ಲದೆ, ಸಿಬ್ಬಂದಿಗಳು ನನ್ನ ಮೇಲೆ ರೆಗಾಡಿದ್ದಾರೆ, ನಾವು ಕಷ್ಟದ ಸಮಯದಲ್ಲಿ ಅನುಕೂಲವಾಗುತ್ತದೆ ಎಂದು ಬಂದಿದ್ದೇವೆ ಆದರೆ, ಇವರುಗಳು ಈ ರೀತಿ ಕೆಲಸ ಮಾಡಿದ್ದಾರೆ, ಇನ್ನು ರೈತರು ಇಲ್ಲಿ ಅಡವಿಟ್ಟ ಚಿನ್ನದ ಬಗ್ಗೆ ಎಷ್ಟು ಗೋಳಾಡಿಸುತ್ತಾರೆ ಎಂಬುದು ಊಹಿಸಿಕೊಳ್ಳಲು ಸಾಧ್ಯವಿಲ್ಲ, ನಾವು ಕಟ್ಟಿರುವ ಬಡ್ಡಿಯ ಹಣವನ್ನು ಬೇರೊಂದು ಖಾತೆಗೆ ಹಾಕಿ ಸಮಾ ಮಾಡುತ್ತಾರೆ ಎಂದರೆ ಫೈನಾನ್ಸಿನ ವ್ಯವಸ್ಥೆ ಹೇಗಿರುತ್ತದೆ ಎಂದು ಆಗ್ರಹಿಸಿದರು. ಸಂಬಂಧಪಟ್ಟ ಅಧಿಕಾರಿಗಳು ಇದರ ಬಗ್ಗೆ ಸೂಕ್ತ ಕ್ರಮ ವಹಿಸಿ ಇನ್ನು ಮುಂದೆಯಾದರೂ ರೈತರಿಗೆ ಅನ್ಯಾಯವಾಗದಂತೆ ನೋಡಿಕೊಳ್ಳಬೇಕು ಎಂದರು.
ಶಾಖೆಯ ಮುಖ್ಯ ವ್ಯವಸ್ಥಾಪಕ ಚಂದ್ರು ಪ್ರತಿಕ್ರಿಯಿಸಿ ಸಿಬ್ಬಂದಿಗಳ ಕಣ್ತಪ್ಪಿನಿಂದ ಬೇರೊಂದು ಖಾತೆಗೆ ಹಣ ವರ್ಗಾವಣೆಯಾಗಿದೆ, ಆದ್ದರಿಂದ ಸಮಸ್ಯೆ ಉಂಟಾಗಿದೆ, ಅದನ್ನು ಸರಿಪಡಿಸಿ, ಗ್ರಾಹಕರಿಗೆ ಇನ್ನು ಮುಂದೆ ಯಾವುದೇ ತೊಂದರೆಗಳಾಗದಂತೆ ಕ್ರಮವಹಿಸಲಾಗುವುದು ಎಂದು ತಿಳಿಸಿದರು.
ಗ್ರಾಮ ಪಂಚಾಯಿತಿ ಸದಸ್ಯ ಗಿರಿಗೌಡ, ಮುಖಂಡರಾದ ಟಿ.ಡಿ ರಾಜೇ ಅರಸ್, ನವೀನ್ ರಾಜೇ ಅರಸ್, ನಂಜುಂಡ, ಸಂತೋಷ್, ಹರೀಶ್, ಸ್ವಾಮಿ ಇದ್ದರು.