- ವರದಿ: ಬೆಕ್ಕರೆ ಸತೀಶ್ ಆರಾಧ್ಯ
ಪಿರಿಯಾಪಟ್ಟಣ: ವಿದ್ಯುತ್ ಸಮಸ್ಯೆ ಬಗೆಹರಿಸುವಂತೆ ಮತ್ತು ರೈತರ ಕೃಷಿ ಪಂಪ್ ಸೆಟ್ ಗಳಿಗೆ ಸರಿಯಾಗಿ ವಿದ್ಯುತ್ ಪೂರೈಸುವಂತೆ ಒತ್ತಾಯಿಸಿ ರೈತ ಸಂಘದ ಕಾರ್ಯಕರ್ತರು ಪಟ್ಟಣದ ಸೆಸ್ಕ್ ಕಚೇರಿ ಎದುರು ಶನಿವಾರ ಪ್ರತಿಭಟನೆ ನಡೆಸಿದರು.
ಈ ವೇಳೆ ತಾಲ್ಲೂಕು ಅಧ್ಯಕ್ಷ ಕೆ. ಎಸ್ ಸ್ವಾಮಿಗೌಡ ಮಾತಾನಾಡಿ ರಾಜ್ಯಾಂದ್ಯಂತ ಉಷ್ಣಾಂಶ ಹೆಚ್ಚಿದ್ದು ಕೃಷಿ ಪಂಪ್‌ಸೆಟ್ ಮೂಲಕ ವ್ಯವಸಾಯ ಮಾಡುವ ರೈತರಿಗೆ ಸಮರ್ಪಕ ವಿದ್ಯುತ್ ಸರಬರಾಜು ಇಲ್ಲದಿರುವುದರಿಂದ ಹಲವಾರು ತೊಂದರೆಗಳಾಗುತ್ತಿದ್ದು ಈ ಸಮಸ್ಯೆ ಗಂಭೀರವಾಗಿ ಪರಿಗಣಿಸಿ ಸ್ಪಂದಿಸಬೇಕೆಂದು ಒತ್ತಾಯಿಸಿದರು, ಕೃಷಿ ಪಂಪ್ ಸೆಟ್ ಗಳಿಗೆ 7 ಗಂಟೆ ಕರೆಂಟ್ ನೀಡಲಾಗುತ್ತಿದೆ ಎಂದು ಹೇಳುತ್ತಿರುವುದು ಸುಳ್ಳು ಹಲವಾರು ಕಡೆ 4 ಗಂಟೆ ಕೂಡ ವಿದ್ಯುತ್ ಸರಬರಾಜು ಮಾಡುತ್ತಿಲ್ಲ ಪದೇ ಪದೇ ವಿದ್ಯುತ್ ಕಡಿತ ಮಾಡಲಾಗುತ್ತಿದೆ, ಸರ್ಕಾರ ತೀರ್ಮಾನಿಸಿದಂತೆ ಕನಿಷ್ಟ 7 ಗಂಟೆಯಾದರೂ ವಿದ್ಯುತ್ ಸರಬರಾಜು ಮಾಡಬೇಕು ಎಂದು ಓತ್ತಾಯಿಸಿದರು.
ವಿದ್ಯುತ್ ಟ್ರಾನ್ಸ್ ಫಾರ್ ಮರ್ ಸುಟ್ಟರೆ ನಿಗದಿತ ಕಾಲಾವಧಿಯೊಳಗಾಗಿ ದುರಸ್ಥಿಪಡಿಸಬೇಕು ತಾಂತ್ರಿಕ ತೊಂದರೆ ಮುಂದೊಡ್ಡಿ ವಿದ್ಯುತ್ ಸರಬರಾಜನ್ನು ನಿಲ್ಲಿಸುವುದು ಸರಿಯಲ್ಲ, ಅಕ್ರಮ ಸಂಪರ್ಕವನ್ನು ಸಕ್ರಮಗೊಳಿಸಲು ಈಗಾಗಲೇ ಕೆಲವು ರೈತರು ಹಣ ಪಾವತಿ ಮಾಡಿರುತ್ತಾರೆ ಆದ್ದರಿಂದ ಹೆಚ್ಚುವರಿ ಟಿಸಿಗಳನ್ನು ಅಳವಡಿಸಬೇಕು, ಜೋತುಬಿದ್ದಿರುವ ವಿದ್ಯುತ್ ಲೈನ್‌ಗಳನ್ನು ಸರಿಪಡಿಸಿ ಮುಂದೆ ಆಗುವ ಅನಾಹುತ ತಪ್ಪಿಸಬೇಕು ಎಂದು ಅಗ್ರಹಿಸಿ ಚೆಸ್ಕಾಂ ಪಿರಿಯಾಪಟ್ಟಣ ವಿಭಾಗದ ಎಇಇ ಗುರು ಬಸವರಾಜಸ್ವಾಮಿ ಅವರಿಗೆ ಮನವಿ ನೀಡಿ ಸಮಸ್ಯೆ ಬಗೆಹರಿಸುವಂತೆ ಕೋರಿದರು.

ಈ ವೇಳೆ ಸಂಘದ ಉಪಾಧ್ಯಕ್ಷ ಪ್ರಕಾಶ್ ರಾಜೇಅರಸ್, ಜಿಲ್ಲಾ ಉಪಾಧ್ಯಕ್ಷ ಬಿ.ಜೆ ದೇವರಾಜ್, ಕಾರ್ಯಧ್ಯಕ್ಷ ಪಿ.ಮಹದೇವ, ಹೋಬಳಿ ಅಧ್ಯಕ್ಷ ರಘುಪತಿ, ಕಾರ್ಯಾಧ್ಯಕ್ಷ ಗುರುರಾಜು, ಬಿ.ವಿ ಗಣೇಶ್, ಮಹೇಶ್, ದಶರಥ, ಸತೀಶ್, ಲೀಲಾವತಿ ಮತ್ತಿತರಿದ್ದರು.