ಕುರುಬೂರ್ ಶಾಂತಕುಮಾರ್ ಪ್ರವಾಸಿ ಮಂದಿರದಲ್ಲಿ ರೈತ ಮುಖಂಡರೊಂದಿಗೆ ಸಭೆ
ಕೆ.ಆರ್.ನಗರ: ಕಳೆದ ಮೂರು ವರ್ಷಗಳಿಂದ ಅತಿವೃಷ್ಟಿ ಪ್ರವಾಹ ಹಾನಿ ಮಳೆಹಾನಿ, ಬರಗಾಲಕ್ಕೆ ತುತ್ತಾಗಿರುವ ರಾಜ್ಯದ ಎಲ್ಲಾ ರೈತರ ಕೃಷಿ ಸಾಲ ಸಂಪೂರ್ಣ ಮನ್ನಾ ಮಾಡಬೇಕು ಕೃಷಿ ಸಾಲ ಪಡೆದ ರೈತರು ಬೆಳೆ ಬೆಳೆಯಲು ಹೂಡಿಕೆ ಮಾಡಿ ಬೆಳೆ ನಾಶವಾಗಿದೆ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ, ಅದಕ್ಕಾಗಿ ಸಾಲಮನ್ನಾ ಆಗಲೇಬೇಕು, ಕೈಗಾರಿಕೆ, ಉದ್ಯಮಿಗಳಿಗೆ ಸಂಕಷ್ಟದ ನೆರವು ಎಂದು 12 ಲಕ್ಷ ಕೋಟಿ ಮನ್ನಾ ಮಾಡಿರುವ ರೀತಿ ಸಂಕಷ್ಟದಲ್ಲಿರುವ ರೈತರ ಸಾಲ ಮನ್ನಾ ಆಗಬೇಕು, ಈ ಬಗ್ಗೆ ರೈತರು ಕರ್ನಾಟಕ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ರಾಜ್ಯದ ರೈತರ ಒತ್ತಾಯ ಪತ್ರ 23 ರಂದು ಸಲ್ಲಿಸಲಾಗುತ್ತದೆ ರಾಜ್ಯಾದಂತ ಸಾಲ ಮಾಡಿದ ರೈತರು ಸ್ವಯಂಪ್ರೇರಿತರಾಗಿ ಬರಬೇಕು ಎಂದು ರಾಜ್ಯ ರೈತ ಸಂಘಟನೆಗಳ ಒಕ್ಕೂಟದ ರಾಜ್ಯಾಧ್ಯಕ್ಷ ಕುರುಬೂರ್ ಶಾಂತಕುಮಾರ್ ಮನವಿ ಮಾಡಿದರು.ಅವರು ಪಟ್ಟಣದ ಪ್ರವಾಸಿ ಮಂದಿರದಲ್ಲಿ ರೈತ ಮುಖಂಡರೊಂದಿಗೆ ಸಭೆ ನಡೆಸಿ ಮಾತನಾಡಿದರು.
ರೈತರ ಸಾಲ ಮನ್ನಾ ಆಗದಂತೆ ತಡೆಯಲು ಬಲವಂತವಾಗಿ ಬ್ಯಾಂಕುಗಳು ಮುದ್ರಿತ ಪತ್ರಕ್ಕೆ ರೈತರ ಸಹಿ ಪಡೆದು ನವೀಕರಣ ಮಾಡುತ್ತಿದ್ದಾರೆ ಈ ಬಗ್ಗೆ ರೈತರು ಜಾಗೃತರಾಗಿರಬೇಕು. ಭತ್ತ ಕಬ್ಬು ಉತ್ಪಾದನೆ ಶೇಕಡ 50ರಷ್ಟು ಕಡಿಮೆಯಾಗಿರುವ ಕಾರಣ ಭತ್ತ ಮಾರಾಟ ಮಾಡದೆ ಉಗ್ರಾಣಗಳಲ್ಲಿ ದಾಸ್ತಾನು ಮಾಡಿ ದಾಸ್ತಾನು ಚೀಟಿ ನೀಡಿದರೆ ಬ್ಯಾಂಕುಗಳು ಶೇಕಡ 75 ರಷ್ಟು ಮುಂಗಡ ಸಾಲ ಕೊಡುತ್ತವೆ ಅದರ ಉಪಯೋಗ ಪಡೆದು ಬೆಲೆ ಏರಿಕೆ ಆದಾಗ ಮಾರಾಟ ಮಾಡಬಹುದು.
ಎಲ್ಲಾ ಕೃಷಿ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ ಖಾತರಿ ಕಾನೂನು ಜಾರಿ ಆಗಬೇಕು ಸ್ವಾಮಿನಾಥನ್ ಆಯೋಗದ ವರದಿಯಂತೆ ಕನಿಷ್ಠ ಬೆಂಬಲ ಬೆಲೆ ನಿಗದಿಯಾಗಬೇಕು ಎಂದು ದೆಹಲಿಯಲ್ಲಿ ರೈತರು ಹೋರಾಟ ಮಾಡಿದಾಗ ಪ್ರಧಾನಿಯವರು ಭರವಸೆ ನೀಡಿದಂತೆ ಕೂಡಲೇ ಈ ಕಾನೂನು ಜಾರಿ ಮಾಡಭೇಕು.
ನಮ್ಮ ರಾಜ್ಯ ಸರ್ಕಾರ ಬರ ಬೆಳೆ ನಷ್ಟ ಪರಿಹಾರ 2 ಸಾವಿರ ಭಿಕ್ಷೆ ನೀಡಿ ಆಪಮಾನ ಮಾಡುತ್ತಿದೆ.
ಜಾತ್ರೆಗಳಲ್ಲಿ ಜನರನ್ನು ಮೋಸಗೊಳಿಸಲು ಖಾಲಿ ಡಬ್ಬದ ಆಟ ಆಡಿಸುತ್ತಾರೆ, ಅದೇ ರೀತಿ ರಾಜ್ಯ ಸರ್ಕಾರ ಸಂಕಷ್ಟದಲ್ಲಿರುವ ರೈತರನ್ನು ಮೋಸಗೂಳಿಸಲು ಬರ ಸಂಕಷ್ಟದ ರಾಜಕೀಯ ಚೆಲ್ಲಾಟ ಆಡುತ್ತಿದ್ದಾರೆ, ಬರ ಬೆಳೆ ನಷ್ಟ ಎಕರೆಗೆ ಕನಿಷ್ಠ 25,000 ಕೊಡಬೇಕು. ತೆಲಂಗಾಣದ ಸರ್ಕಾರ ರೈತರಿಗೆ ಪ್ರತಿ ಎಕರೆಗೆ 10,000 ರೂ ಗೊಬ್ಬರ ಬೀಜ ಖರೀದಿಗೆ ನೀಡುತ್ತದೆ, ಇದನ್ನಾದರೂ ನೋಡಿ ಅರಿತುಕೊಳ್ಳಲಿ, ಕಬ್ಬು ಉತ್ಪಾದನೆ ಶೇಕಡ 50ರಷ್ಟು ಕಡಿಮೆಯಾಗಿದೆ ಕಾರ್ಖಾನೆಗಳು ಪೈಪೋಟಿಯಲ್ಲಿ ಕಬ್ಬು ಖರೀದಿ ಮಾಡುತ್ತಿವೆ ರೈತರಿಗೆ ನ್ಯಾಯಯುತ ಬೆಲೆ ಕೊಡದೆ ವಂಚನೆ ಮಾಡುತ್ತಿವೆ,ಎಲ್ಲಾ ಕೃಷಿ ಬೆಳೆಗಳಿಗೂ ಕಡ್ಡಾಯವಾಗಿ ಬೆಳೆ ವಿಮೆಯನ್ನು ಜಾರಿಗೊಳಿಸಬೇಕು.ಬೆಳೆ ವಿಮೆ ಸರಳೀಕರಣಗೊಳಿಸಬೇಕು ಅತಿವೃಷ್ಟಿ ಬರ ನಷ್ಟ ಪರಿಹಾರ ಬೆಳೆ ವಿಮೆ ವ್ಯಾಪ್ತಿಯಲ್ಲಿ ನಷ್ಟ ಪರಿಹಾರ ನೀಡಬೇಕು ಈಗ ಇರುವ ಬೆಳೆ ವಿಮೆ ವಿಮಾ ಕಂಪನಿಗಳಿಗೆ ಲೂಟಿ ಮಾಡಲು ಹೆಚ್ಚು ಸಹಕಾರಿಯಾಗಿದೆ ವಿಮಾ ನೀತಿ ಬದಲಾಯಿಸಿ ರೈತರಿಗೆ ಅನುಕೂಲ ಕಲ್ಪಿಸಬೇಕು.
ದೇಶದ 140 ಕೋಟಿ ಜನರಿಗೆ ಆಹಾರ ಉತ್ಪಾದಿಸಲು ತಮ್ಮ ಜೀವನವನ್ನೆ ತ್ಯಾಗ ಮಾಡುತ್ತಿರುವ 60 ವರ್ಷ ಪೂರೈಸಿದ ರೈತರಿಗೆ ತಿಂಗಳಿಗೆ ಕನಿಷ್ಠ 5000 ಪಿಂಚಣಿ ನೀಡುವ ಯೋಜನೆ ಜಾರಿಗೆ ತರಬೇಕು.
ಕೃಷಿ ಪಂಪ್ಸೆಟ್ಗಳಿಗೆ ನೀಡುವ ಉಚಿತ ವಿದ್ಯುತ್ ತಪ್ಪಿಸುವಂತ ವಿದ್ಯುತ್ ಖಾಸಗೀಕರಣ ನೀತಿಯನ್ನು ಕೇಂದ್ರ ಸರ್ಕಾರ ಕೈಬಿಡಬೇಕು.ಕೃಷಿ ಪಂಪ್ಸೆಟ್ಗಳಿಗೆ ಹಗಲು ವೇಳೆ ನಿರಂತರ 10 ಗಂಟೆಗಳ ವಿದ್ಯುತ್ ನೀಡಬೇಕು,
ಕೃಷಿ ಪಂಪ್ಸೆಟ್ ಗಳಿಗೆ ಸೋಲಾರ್ ವಿದ್ಯುತ್ ಅಳವಡಿಸಿಕೊಳ್ಳಲು ಕೇಂದ್ರ ಸರ್ಕಾರ ನೀಡುವ ಶೇಕಡಾ 60/ ಸಹಾಯಧನ ಕುಸುಮ ಯೋಜನೆಗೆ ರಾಜ್ಯ ಸರ್ಕಾರ ಶೇಕಡ 30ರಷ್ಟು ಸೇರಿಸಿ ಸಹಾಯಧನ ನೀಡಲಿ ಇದರಿಂದ ರೈತರಿಗೆ ಹಗಲು ವೇಳೆ ಯಾವುದೇ ಸಮಸ್ಯೆ ಇಲ್ಲದೆ ವಿದ್ಯುತ್ ಸಿಗುತ್ತದೆ.ರೈತನ ಮಗನ ಮದುವೆಯಾಗುವ ವಧುವಿಗೆ ಸರ್ಕಾರಿ ಕೆಲಸದಲ್ಲಿ ಶೇಕಡ 10 ಮೀಸಲಾತಿ ನೀಡುವ ನೀತಿ ಜಾರಿಗೆ ತರಬೇಕು ರೈತರ ಮಕ್ಕಳನ್ನು ಅಪಾಯದಿಂದ ಪಾರು ಮಾಡಬೇಕು.ದೆಹಲಿಯಲ್ಲಿ ವರ್ಷ ಕಾಲ ಹೋರಾಟ ಮಾಡಿದ ರೈತರ ಮೇಲೆ ಹಾಕಿರುವ ಪೊಲೀಸ್ ಮೊಖದಮೆಗಳನ್ನು ವಾಪಸ್ ಪಡೆಯಬೇಕು.ದೇಶದ ರೈತರನ್ನು ಸಂರಕ್ಷಿಸಲು ವಿಶ್ವ ವ್ಯಾಪಾರದ ಒಪ್ಪಂದದಿಂದ ಭಾರತ ಸರ್ಕಾರ ಹೊರ ಬರಬೇಕು.
ಈ ಎಲ್ಲಾ ಒತ್ತಾಯಗಳ ಬಗ್ಗೆ ರಾಜ್ಯದ ರೈತರ ಸಮ್ಮುಖದಲ್ಲಿ, ರಾಷ್ಟ್ರೀಯ ರೈತ ಮುಖಂಡರು ಬೆಂಗಳೂರಿನ ಅಧಿವೇಶನದಲ್ಲಿ ಚರ್ಚೆ ನಡೆಸಿ ರೈತರನ್ನು ಜಾಗೃತಿ ಮಾಡಿ ದೇಶದ ಎಲ್ಲಾ ರೈತರು ರಾಜಕೀಯೇತರವಾಗಿ ಹೋರಾಟ ನಡೆಸಲು ತೀರ್ಮಾನಿಸಲಾಗಿದೆ ಈ ಕಾರಣಕ್ಕಾಗಿ ಬೆಂಗಳೂರಿನಲ್ಲಿ ಡಿಸೆಂಬರ್ 23 ರಂದು ಬೃಹತ್ ರೈತರ ಮಹಾ ಅಧಿವೇಶನ ಹಮ್ಮಿಕೊಳ್ಳಲಾಗಿದೆ.
ರಾಜ್ಯಾದ್ಯಂತ ಇರುವ ಎಲ್ಲಾ ರೈತ ಸಂಘಟನೆಗಳ ಮುಖಂಡರು, ರೈತರು ಸ್ವಯಂ ಪ್ರೇರಿತರಾಗಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಸಾಲ ಮನ್ನಾ ಆಂದೋಲನ ಅರ್ಜಿ ಸಲ್ಲಿಸುವ ಕಾರ್ಯಕ್ಕೆ ಕೈಜೋಡಿಸಬೇಕು ಎಂದು ಮನವಿ ಮಾಡಿದರು. ರೈತ ಮುಖಂಡರಾದ ಅತ್ತಳ್ಳಿ ದೇವರಾಜ್, ಹೇಮೇಶ್, ಎಸ್.ಕೆ.ರೇವಣ್ಣ, ಚಂದ್ರಶೇಖರಯ್ಯ, ಮಂಜುಳ, ವೀಣಾ, ಜಯಮ್ಮ, ಸುಮಿತ್ರಾ, ಜಯಶಂಕರ್ ಮೊದಲಾದವರು ಇದ್ದರು.