ಹುಣಸೂರು,ಡಿ.31: ಈ ಬಾರಿ ತಂಬಾಕಿಗೆ ಉತ್ತಮ ಬೆಲೆ ಸಿಗದೆ ಕಂಗಾಲಾಗಿದ್ದ ತಂಬಾಕು ಬೆಳೆಗಾರರಿಗೆ ಕನಿಷ್ಟ ಬೆಲೆ ಕೊಡಿಸಲು ರೈತರ ನಿಯೋಗ ದೆಹಲಿ ಪ್ರವಾಸಗೊಂಡು ವಾಣಿಜ್ಯ ಸಚಿವ ಪಿಯೂಷ್ ಗೋಯಲ್ ಭೇಟಿ ಫಲ ನೀಡಿದೆ ಎಂದು ಶಾಸಕ ಜಿ.ಡಿ. ಹರೀಶ್ ಗೌಡ ತಿಳಿಸಿದರು.
ತಾಲೂಕಿನ ಕಟ್ಟೆಮಳಲವಾಡಿಯ ತಂಬಾಕು ಹರಾಜು ಮಾರುಕಟ್ಟೆಯ ಫ್ಲಾಟ್ ಫಾರಂ 3 ಗೆ ಭೇಟಿ ನೀಡಿ ತಂಬಾಕು ಪರೀಶೀಲಿಸಿದ ನಂತರ ಮಾತನಾಡಿದ ಅವರು, ರೈತರು ಶ್ರಮಪಟ್ಟು ದುಡಿದ ತಂಬಾಕಿಗೆ ಉತ್ತಮ ಬೆಲೆ ಸಿಗದಿದ್ದರೆ ಅವರ ಗತಿಯೇನು. ಅದಕ್ಕಾಗೆ ರೈತರ ನಿಯೋಗವನ್ನು ಜೆಡಿಎಸ್ ರಾಷ್ಟ್ರೀಯ ನಾಯಕ ಹಾಗೂ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ಮತ್ತು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿಯವರ ಮೂಲಕ ವಾಣಿಜ್ಯ ಸಚಿವರನ್ನು ಭೇಟಿ ಮಾಡಿದ ಕಾರಣ ಇಂದು 308 ರು ಬೆಲೆ ಸಿಕ್ಕಿದೆ ಎಂದರು.

ರೈತರ ವಿಚಾರದಲ್ಲಿ ನಾನು ಎಂದೂ ರಾಜಕೀಯ ಮಾಡುವುದಿಲ್ಲ. ತಂಬಾಕು ಬೆಳೆಗಾರರಿಗೆ ಉತ್ತಮ ಬೆಲೆ ಕೊಡಿಸುವ ನಿಟ್ಟಿನಲ್ಲಿ ರೈತರ ನಿಯೋಗದೊಂದಿಗೆ ವಾಣಿಜ್ಯ ಸಚಿವರೊಂದಿಗೆ ಹಲವಾರು ಸಮಸ್ಯೆಗಳನ್ನು ಚೆರ್ಚಿಸಿ ಅನಧಿಕೃತವಾಗಿ ಬೆಳೆದಿರುವ ಕಾರ್ಡ್ ದಾರರಿಗೂ ನ್ಯಾಯಸಿಗಬೇಕು. ತಂಬಾಕು ಬೆಳೆಗಾರರಿಗೆ ಶಾಶ್ವತ ಪರಿಹಾರ ನೀಡುವಲ್ಲಿ ನಮ್ಮ ಹೋರಾಟ ನಿರಂತರ ಎಂದರು.
ಅತಿಯಾದ ಮಳೆಯಿಂದ ಈ ಬಾರಿ ರೈತನ ಬದುಕು ಸಂಕಷ್ಟದಲ್ಲಿದೆ. ಕಳೆದ ಬಾರಿ 295 ಇದ್ದ ತಂಬಾಕು ದರ ಈ ಬಾರಿ 308 ಆಗಿದೆ. ಆದರೆ ಬೆಳೆಗಾರನಿಗೆ 350 ರು ಬೆಲೆ ಸಿಗಲಿ. ಇಲ್ಲದಿದ್ದರೆ ಕಳೆದ ಬಾರಿ ಸರಕಾರ ಮಧ್ಯ ಪ್ರವೇಶ ಮಾಡಿ ರೈತರ ಸಂಕಷ್ಟಕ್ಕೆ ನೆರೆವಾದಂತೆ ಪ್ರಸ್ತುತ ಸರಕಾರವು ಮಧ್ಯ ಪ್ರವೇಶ ಮಾಡಿ ತಂಬಾಕು ಖರೀದಿ ಮಾಡಲಿ ಎಂದರು.
ವಾಣಿಜ್ಯ ಸಚಿವರು ಈಗಾಗಲೇ ತಿಳಿಸಿರುವಂತೆ ಮುಂದಿನ ವರ್ಷ ಮಾರುಕಟ್ಟೆ ಶುರುವಿನ ಮೊದಲು ಹರಾಜು ಮಾರುಕಟ್ಟೆಯಲ್ಲಿ ರೈತರ ಸಭೆ ನಡೆಸಿ ರೈತರ ಬಹುತೇಕ ಸಮಸ್ಯೆ, ಮಾರುಕಟ್ಟೆಗೆ ವಿದೇಶಿ ಖರೀದಿದಾರರಿಗೆ ಅವಕಾಶ ನೀಡಲು ಚರ್ಚಿಸಿ ಶಾಶ್ವತ ಪರಿಹಾರ ನೀಡಲು ಚಿಂತನೆ ಮಾಡೋಣ ಎಂದಿದ್ದಾರೆ ಎಂದು ತಿಳಿಸಿದರು.
ಇದೇ ರೀತಿ ತಂಬಾಕು ದರದಲ್ಲಿ ತಾರಾತಮ್ಯ ನಡೆದರೆ ಮುಂದಿನವಾರದಿಂದ 350 ರಿಂದ 400 ಸಿಗುವ ತನಕ ರೈತರ ಒಳಗೊಂಡ ನಿಯೋಗದೊಂದಿಗೆ ಹೋರಾಟ ಮಾಡೋಣವೆಂದರು. ಇಲ್ಲಿ ಎಲ್ಲ ಪಕ್ಷದವರು ಇದ್ದಾರೆ. ನಮಗೆ ಪಕ್ಷ ಬೇಧ ಬೇಡವೆಂದರು.
ಕಾರ್ಯಕ್ರಮದಲ್ಲಿ ದಲಿತ ಮುಖಂಡ ನಾಗರಾಜ ಮಲ್ಲಾಡಿ, ರೈತ ಮುಖಂಡ ಉಂಡವಾಡಿ ಸಿ.ಚಂದ್ರೇಗೌಡ, ನಿಲವಾಗಲು ಪ್ರಭಾಕರ್, ಮೋದೂರು ಶಿವಣ್ಣ, ತಟ್ಟೆಕೆರೆ ಶ್ರೀ ನಿವಾಸ್, ನಂಜುಂಡೇಗೌಡ, ಬನ್ನಿಕುಪ್ಪೆ ಕೂಶಪ್ಪ, ಹಿರಿಕ್ಯಾತನಹಳ್ಳಿ ಪುಟ್ಟಣ್ಣ, ಕೆಂ.ವಾಡಿ.ದೇವರಾಜು, ಆಂಜನಯ್ಯ, ಪುಟ್ಟರಾಜು, ಅಧಿಕಾರಿಗಳಾದ ಬ್ರಿಜು ಭೂಷಣ್, ಮೀನಾ, ಸಿದ್ದರಾಜು, ಹಾಗೂ ಇದ್ದರು.