ಗುಂಡ್ಲುಪೇಟೆ: ಕಿಲಗೆರೆ ಗ್ರಾಮದಲ್ಲಿ ನಡೆಯುತ್ತಿರುವ ಗಣಿಗಾರಿಕೆಯಿಂದ ರೈತರು ಹಾಗೂ ಗ್ರಾಮಸ್ಥರಿಗೆ ತೀವ್ರ ತೊಂದರೆ ಉಂಟಾಗುತ್ತಿದ್ದು, ಕೂಡಲೆ ಗಣಿಗಾರಿಕೆ ಪರವಾಗಿಯನ್ನು ರದ್ದುಗೊಳಿಸುವಂತೆ ರೈತ ಮುಖಂಡರು ಹಾಗೂ ಗ್ರಾಮಸ್ಥರು ಒತ್ತಾಯಿಸಿದರು.
ಕಿಲಗೆರೆ ಗ್ರಾಮದ ಸರ್ವೇ ನಂ-153/2ರಲ್ಲಿ 2.24 ಗುಂಟೆ ಹಾಗೂ 153/3ರಲ್ಲಿ 2.37 ಗುಂಟೆ ಜಮೀನಿನಲ್ಲಿ ಗಣಿಗಾರಿಕೆ ನಡೆಯುತ್ತಿದೆ. ಇದರಿಂದ ರೈತರು ಹಾಗೂ ಗ್ರಾಮಸ್ಥರಿಗೆ ತೊಂದರೆಯಾಗುತ್ತಿರುವ ಕುರಿತು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಸಹಾಯಕ ನಿರ್ದೇಶಕಿ ರಶ್ಮಿ ಅವರಿಗೆ ಮನವಿ ಸಲ್ಲಿಸಿದ ಮೇರೆಗೆ ಸ್ಥಳಕ್ಕೆ ಆಗಮಿಸಿದ ಅಧಿಕಾರಿಗಳ ಮುಂದೆ ಸ್ಥಳೀಯರು ಸಮಸ್ಯೆಗಳ ಸರಮಾಲೆ ಬಿಚ್ಚಿಟ್ಟರು.
ಕಿಲಗೆರೆ ಗ್ರಾಮದ ಎಂ.ಮೂರ್ತಿ ಅವರ ಮಗ ಶಶಿಕುಮಾರ್ ಎಂಬುವವರು ಸರ್ವೇ ನಂ-153/2ರಲ್ಲಿ 2.24 ಗುಂಟೆ ಹಾಗೂ 153/3ರಲ್ಲಿ 2.37 ಗುಂಟೆ ಜಮೀನಿನಲ್ಲಿ ಗಣಿಗಾರಿಕೆ ಮಾಡಲು ಪ್ರಾರಂಭಿಸಿದ್ದಾರೆ. ಆದರೆ ಗಣಿಗಾರಿಕೆ ಮಾಡುತ್ತಿರುವ ಜಮೀನಿನ ಸುತ್ತಲು ಸುಮಾರು 20ರಿಂದ 30 ನೀರಾವರಿ ಪಂಪ್ ಸೆಟ್ ಗಳಿವೆ. ಜೊತೆಗೆ ಜಮೀನೊಂದರಲ್ಲಿ ಗುರುಸಿದ್ದಪ್ಪ ಮನೆ ಕಟ್ಟಿದ್ದಾರೆ. ಇವರ ಮನೆಗೆ ಕೇವಲ 50 ಮೀಟರ್ ಅಂತರದಲ್ಲಿ ಗಣಿಗಾರಿಕೆ ಮಾಡುತ್ತಿದ್ದು, ಸಿಡಿ ಮದ್ದು ಸಿಡಿಸಿದಾಗ ಮನೆಯು ಕುಸಿದು ಬೀಳುವ ಸಂಭವವಿದೆ. ಗಣಿಗಾರಿಕೆ ನಡೆಸುತ್ತಿರುವ ಜಮೀನು ಸಹ ಕಿಲಗೆರೆ ಗ್ರಾಮಕ್ಕೆ ಕೇವಲ 400 ಮೀಟರ್ ಅಂತರದಲ್ಲಿದೆ. ಇದರಿಂದ ಗ್ರಾಮದ ಮನೆಗಳಿಗೆ ತೊಂದರೆಯಾಗುತ್ತಿದೆ ಎಂದು ಸ್ಥಲೀಯರು ಆಕ್ರೋಶ ವ್ಯಕ್ತಪಡಿಸಿದರು.
ತೆರಕಣಾಂಬಿಗೆ ಹೋಗುವ ಮುಖ್ಯ ರಸ್ತೆ ಹಾಗೂ ಸೇತುವೆ ಗಣಿಗಾರಿಕೆ ಮಾಡುತ್ತಿರುವ ಜಮೀನಿಗೆ ಹೊಂದಿಕೊಂಡಂತಿದೆ. ಜೊತೆಗೆ ಜಮೀನಿನ ಪಕ್ಕದಲ್ಲಿ ದನ ಕರು ಕುಡಿಯುವ ನೀರಿನ ಕಟ್ಟಿ ಇದೆ. 1 ಕಿ.ಮೀ ದೂರದಲ್ಲಿ ಹುಲಿಗನ ಮುರಡಿ ವೆಂಕಟರಮಣ ಸ್ವಾಮಿಯ ದೇವಸ್ಥಾನವಿದ್ದು, ಅಕ್ಕಪಕ್ಕದ ರೈತರು ರೇಷ್ಮೆ ಕಡ್ಡಿಯನ್ನು ಹಾಕಿ ರೇಷ್ಮೆ ಉತ್ಪಾದನೆ ಮಾಡುತ್ತಿದ್ದಾರೆ. ಹೀಗಿದ್ದರೂ ಕೂಡ ಗಣಿಗಾರಿಕೆಗೆ ಅವಕಾಶ ನೀಡಿರುವುದರಿಂದ ಗ್ರಾಮ ಪರಿಸರ ಹಾಳಾಗಿ ಧೂಳು ಬಂದು ಗ್ರಾಮಸ್ಥರು ರೋಗರುಜನಗಳಿಗೆ ತುತ್ತಾಗುವ ಸಂಭವವಿದೆ. ಜೊತೆಗೆ ಭೂಮಿಯನ್ನು ಆಳವಾಗಿ ತೋಡಿ ಸಿಡಿಮದ್ದು ಸಿಡಿಸಿ ಕಲ್ಲು ತೆಗೆದರೆ ಅಕ್ಕಪಕ್ಕದ ಕೊಳವೆ ಬಾವಿಗಳಿಗೆ ನೀರಿಗೆ ತೊಂದರೆಯಾಗಿ ಬತ್ತಿ ಹೋಗುವ ಸಂಭವವಿದ್ದು, ವ್ಯವಸಾಯ ಮಾಡಲು ಕಷ್ಟವಾಗುತ್ತದೆ ಎಂದು ದೂರಿದರು.
ಸಮಸ್ಯೆಗಳು ಹೆಚ್ಚಿನ ರೀತಿಯಲ್ಲಿದ್ದರೂ ಸಹ ಈ ಪ್ರದೇಶದಲ್ಲಿ ಇಲಾಖೆ ಅಧಿಕಾರಿಗಳು ಗಣಿಗಾರಿಕೆಗೆ ಅವಕಾಶ ನೀಡಿರುವುದು ಖಂಡನೀಯ. ಆದ್ದರಿಂದ ಕಿಲಗೆರೆ ಗ್ರಾಮದ ಎಂ.ಮೂರ್ತಿ ಅವರ ಮಗ ಶಶಿಕುಮಾರ್ ಎಂಬುವವರು ಸರ್ವೇ ನಂ-153/2ರಲ್ಲಿ 2.24 ಗುಂಟೆ ಹಾಗೂ 153/3ರಲ್ಲಿ 2.37 ಗುಂಟೆ ಜಮೀನಿನಲ್ಲಿ ನಡೆಯುತ್ತಿರುವ ಗಣಿಗಾರಿಕೆ ಪರವಾನಗಿಯನ್ನು ಈ ಕೂಡಲೇ ರದ್ದು ಪಡಿಸಬೇಕು. ಇಲ್ಲದಿದ್ದರೆ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಲಾಗವುದು ಎಂದು ರೈತ ಮುಖಂಡರು ಹಾಗು ಕಿಲಗೆರೆ ಗ್ರಾಮಸ್ಥರು ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ರೈತ ಮುಖಂಡರಾದ ತೆರಕಣಾಂಬಿ ಶಾಂತಮಲ್ಲಪ್ಪ, ಕಿಲಗೆರೆ ಗ್ರಾಮಸ್ಥರಾದ ಗುರುಸಿದ್ದಪ್ಪ, ಜಗದೀಶ್, ಮಲ್ಲೇಶ್, ಮಹದೇವಕುಮಾರ್, ಗುರುಸ್ವಾಮಿ, ಕರಿಯಪ್ಪ, ಮಹದೇವಪ್ಪ, ರಾಜಪ್ಪ, ಜಯಕುಮಾರ್, ಪ್ರಭುಸ್ವಾಮಿ, ಮಲ್ಲೇಶಪ್ಪ, ಶಿವಶಂಕರಮೂರ್ತಿ, ನಾಗರಾಜು, ಸಿದ್ದಲಿಂಗಪ್ಪ, ಈಶ್ವರ, ಬಸವರಾಜಪ್ಪ, ಮಲ್ಲಪ್ಪ, ನಾಗರಾಜಪ್ಪ ಸೇರಿದಂತೆ ಇತರರು ಹಾಜರಿದ್ದರು.