ಮಂಡ್ಯ: ನವದೆಹಲಿಯ ಕೆಂಪುಕೋಟೆಯಲ್ಲಿ ಜ.೨೬ರಂದು ನಡೆಯುವ ಗಣರಾಜ್ಯೋತ್ಸವದ ಪರೇಡ್‌ನಲ್ಲಿ ಮಂಡ್ಯ ಬೆಲ್ಲ ರೈತ ಉತ್ಪಾದಕರ ಕಂಪನಿಯು ಭಾಗವಹಿಸಲಿದೆ.
ಮಂಡ್ಯದ ರಾಸಾಯನಿಕ ಮುಕ್ತ ಬೆಲ್ಲದ ಘಮಲನ್ನು ನಾಡಿನಾದ್ಯಂತ ಪಸರಿಸುತ್ತಿರುವ ಈ ರೈತ ಉತ್ಪಾದಕರ ಕಂಪನಿಯ ಅಧ್ಯಕ್ಷ ಕಾರಸವಾಡಿ ಮಹದೇವ್ ಮತ್ತು ಪದಾಧಿಕಾರಿಗಳಾದ ಹಳುವಾಡಿ ಕೃಷ್ಣ, ವೆಂಕಟೇಗೌಡ, ಪ್ರಕಾಶ್ ಮಂಗಲ ಅವರ ತಂಡ ಆಯ್ಕೆಯಾಗಿದೆ.
‘ರಾಷ್ಟ್ರೀಯ ಸ್ವಾತಂತ್ರ್ಯದ ಅಮೃತ ಮಹೋತ್ಸವದ ನೆನಪಿಗಾಗಿ ಹಾಗೂ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಆಸಕ್ತಿಯಿಂದ ಅವಕಾಶ ಸಿಕ್ಕಿದೆ’ ಎಂದು ತಂಡ ಹೇಳುತ್ತದೆ. ‘ರಾಷ್ಟ್ರೀಯ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ಅಧಿಕಾರಿಗಳ ತಂಡ ಮತ್ತು ಪ್ರಧಾನ ಮಂತ್ರಿ ಕಾರ್ಯಾಲಯದ ಆದೇಶದ ಮೇರೆಗೆ ಈ ಸಮಾರಂಭಕ್ಕೆ ಆಹ್ವಾನಿಸಿದ್ದು ತಂಡವು ಜ.೨೨ರಂದು ಮಂಡ್ಯದಿಂದ ದೆಹಲಿಗೆ ಪ್ರಯಾಣ ಬೆಳೆಸಲಿದೆ’ ಎಂದು ಕಾರಸವಾಡಿ ಮಹದೇವ್ ತಿಳಿಸಿದ್ದಾರೆ.