ವರದಿ: ವಿನಯ್ ದೊಡ್ಡಕೊಪ್ಪಲು
ಕೆ.ಆರ್.ನಗರ : ನಾಲೆಗಳಿಗೆ ಹರಿಸುವ ಮೊದಲ ಹಂತದಲ್ಲಿ ನೀರಿನಿಂದ ಕೆರೆಕಟ್ಟೆಗಳು ತುಂಬಿಸಲು ಆದ್ಯತೆ ನೀಡಿ ನಂತರ ಆದ್ಯತೆಯ ಮೇರೆಗೆ ಕೃಷಿ ಚಟುವಟಿಕೆಗಳಿಗೆ ನೀರನ್ನು ರೈತರು ಬಳಕೆ ಮಾಡಿಕೊಳ್ಳಬೇಕು ಎಂದು ಶಾಸಕ ಡಿ.ರವಿಶಂಕರ್ ಮನವಿ ಮಾಡಿದರು.
ಶುಕ್ರವಾರ ಸಾಲಿಗ್ರಾಮ ತಾಲೂಕಿನ ಬಳ್ಳೂರು ಅಣೆಕಟ್ಟೆಯಿಂದ ಚಾಮರಾಜ ಮತ್ತು ರಾಮಸಮುದ್ರ ಎಡ ಮತ್ತು ಬಲದಂಡೆ ನಾಲೆಗಳಿಗೆ ಹಾಗೂ ಮಿರ್ಲೆ ಶ್ರೇಣಿಯ ನಾಲೆಗಳಿಗೆ ನೀರು ಬಿಡುವ ಕಾರ್ಯಕ್ಕೆ ಚಾಲನೆ ನೀಡಿ ಮಾತನಾಡಿದರು.
ರೈತರುಗಳ ಸಮಸ್ಯೆಗಳಿಗೆ ನೀರಾವರಿ ಇಲಾಖೆಯ ಕೆಲವು ಅಧಿಕಾರಿಗಳು ಸಕಾರಾತ್ಮಕವಾಗಿ ಸ್ಪಂದಿಸುತ್ತಿಲ್ಲ ಎಂಬ ದೂರುಗಳು ಕೇಳಿ ಬರುತ್ತಿದ್ದು ಅದಕ್ಕೆ ಆಸ್ಪದ ಕೊಡದೆ ರೈತರುಗಳ ಸಮಸ್ಯೆಗಳನ್ನು ಶೀಘ್ರವಾಗಿ ಪರಿಹರಿಸುವ ಕೆಲಸ ಮಾಡಬೇಕು ಎಂದು ಸೂಚಿಸಿದ ಶಾಸಕರು ಪ್ರತಿಯೊಬ್ಬ ಅಧಿಕಾರಿಗಳು ತಮ್ಮ ತಮ್ಮ ಕರ್ತವ್ಯವನ್ನು ಪ್ರಾಮಾಣಿಕವಾಗಿ ಮಾಡುವ ಮೂಲಕ ಸಾರ್ವಜನಿಕರ ಸೇವೆಯನ್ನು ಮಾಡಬೇಕು ಎಂದರು.

ಅಧಿಕಾರಿಗಳ ಹಂತದಲ್ಲಿ ಸಮಸ್ಯೆಗಳ ಇತ್ಯರ್ಥಕ್ಕೆ ಸಮಸ್ಯೆ ಆದರೆ ನನ್ನ ಗಮನಕ್ಕೆ ಅದನ್ನು ತಂದರೆ ಸರ್ಕಾರದ ಮಟ್ಟದಲ್ಲಿ ಆ ಕೆಲಸವನ್ನು ಮಾಡಿಸಲಾಗುವುದು.
ಸಾಲಿಗ್ರಾಮ ಮತ್ತು ಕೆ.ಆರ್.ನಗರ ಅವಳಿ ತಾಲೂಕಿನಲ್ಲಿ ನೀರಾವರಿ ಇಲಾಖೆಗೆ ಸಂಬಂಧಿಸಿದಂತೆ ಹಲವು ಅಭಿವೃದ್ಧಿ ಕಾರ್ಯಗಳನ್ನು ಮಾಡಲು ಈಗಾಗಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರೊಂದಿಗೆ ಚರ್ಚಿಸಿದ್ದು ಸದ್ಯದಲ್ಲೇ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡುವ ಮೂಲಕ ಕ್ಷೇತ್ರದ ರೈತರುಗಳ ಸೇವೆಯನ್ನು ಮಾಡಲಾಗುವುದೆಂದರು.
ಮೈದುಂಬಿ ಹರಿಯುತ್ತಿರುವ ಕಾವೇರಿ ನದಿಗೆ ಬಳ್ಳೂರುಕಟ್ಟೆಯ ಬಳಿ ಆಶಾಡ ಶುಕ್ರವಾರವಾದ ಇಂದು ವಿಶೇಷ ಪೂಜೆಯನ್ನು ಸಲ್ಲಿಸಿದ್ದು ರೈತರ ಬಾಳು ಹಸನಾಗಿ ಅನ್ನದಾತನಿಗೆ ಶುಭವಾಗಲೆಂದು ದೇವರಲ್ಲಿ ಪ್ರಾರ್ಥಿಸಿ ಬಾಗಿನವನ್ನು ಅರ್ಪಿಸಲಾಗಿದೆ ಎಂದರು.
ಈ ಬಾರಿ ರಾಜ್ಯದಲ್ಲಿ ಮಳೆ ಇಲ್ಲದೆ ರೈತರು ಬೆಳೆಗಳನ್ನು ಬೆಳೆಯಲು ನೀರಿನ ಕೊರತೆಯಾಗುತ್ತದೆ ಎಂಬ ಚಿಂತೆ ಅನ್ನದಾತರನ್ನು ಕಾಡುತ್ತಿತ್ತು ಆದರೆ ಕೆಲವು ದಿನಗಳಿಂದ ವರುಣನ ಕೃಪೆ ತೋರಿದ್ದು ರಾಜ್ಯಾದ್ಯಂತ ಉತ್ತಮ ಮಳೆಯಾಗುತ್ತಿದೆ. ಇದರಿಂದ ನದಿಗಳು, ಕೆರೆಕಟ್ಟೆಗಳು, ಅಣೆಕಟ್ಟೆಗಳು ತುಂಬಿದ್ದು ರೈತರಲ್ಲಿ ಸಂತಸ ಮನೆ ಮಾಡಿದೆ ಎಂದರು.
ಹವಾಮಾನ ಇಲಾಖೆ ವಾಡಿಕೆ ಮಳೆಗಿಂತ ಈ ಬಾರಿ ಹೆಚ್ಚು ಮಳೆ ಬೀಳುತ್ತದೆ ಎಂದು ಹೇಳಿದ್ದು. ರೈತರು ಯಾವುದೇ ಆತಂಕಕ್ಕೆ ಒಳಗಾಗದೆ ಕೃಷಿ ಚಟುವಟಿಕೆ ಹಾಗೂ ಬಿತ್ತನೆ ಕಾರ್ಯ ಆರಂಭಿಸಬಹುದಾಗಿದೆ. ಮುಂಗಾರು ಹಂಗಾಮಿನ ಕೃಷಿಗೆ ಯಾವುದೇ ರೀತಿಯಲ್ಲಿ ರೈತರಿಗೆ ತೊಂದರೆಯಾಗದಂತೆ ಅವರ ಅಗತ್ಯತೆಯ ಕೃಷಿ ಚಟುವಟಿಕೆ ಸಂಬಂಧಸಿದ ಪರಿಕರಗಳು, ಉತ್ತಮ ಗುಣಮಟ್ಟದ ಬಿತ್ತನೆ ಬೀಜಗಳು ಹಾಗೂ ರಸಗೊಬ್ಬರಗಳನ್ನು ಸಕಾಲದಲ್ಲಿ ರೈತರಿಗೆ ಪೂರೈಸಲು ಈಗಾಗಲೇ ಇಲಾಖೆಗಳಿಗೆ ಸೂಚಿಸಲಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಗ್ರಾ.ಪಂ.ಅಧ್ಯಕ್ಷೆ ಮಣಿಲಾ ಮಂಜುನಾಥ್, ಸದಸ್ಯರಾದ ಹುಚ್ಚೇಗೌಡ, ನಾಗೇಂದ್ರ, ನಿತಿನ್, ರಂಗೇಗೌಡ, ಪಾಪಣ್ಣ, ತಾ.ಪಂ. ಮಾಜಿ ಅಧ್ಯಕ್ಷ ಎಚ್.ಟಿ.ಮಂಜಪ್ಪ, ಮಾಜಿ ಸದಸ್ಯ ಸಣ್ಣಪ್ಪ, ವಿ ಎಸ್ ಎಸ್ ಬಿ ಎನ್ ಅಧ್ಯಕ್ಷ ಲೋಕೇಶ್, ಉಪಾಧ್ಯಕ್ಷ ದೇವರಾಜು, ಪುರಸಭಾ ಮಾಜಿ ಅಧ್ಯಕ್ಷರಾದ ಕೋಳಿ ಪ್ರಕಾಶ್, ನರಸಿಂಹರಾಜು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಉದಯಶಂಕರ್, ಎಸ್ ಸಿ ಘಟಕದ ಅಧ್ಯಕ್ಷ ಕಂಠಿಕುಮಾರ್, ನಗರಾಧ್ಯಕ್ಷ ಪ್ರಭಾಕರ್, ಯುವ ಕಾಂಗ್ರೆಸ್ ಅಧ್ಯಕ್ಷ ಸೈಯದ್ ಮಹಮ್ಮದ್, ಶೌಕತ್, ಮುಖಂಡರುಗಳಾದ ಪ್ರಭಾಕರ್, ಹರೀಶ್, ನರೇಂದ್ರ, ರಘು, ಹೇಮಂತ್ ಕುಮಾರ್, ಬಲರಾಮೇಗೌಡ, ಗುಣಪಾಲ್ ಜೈನ್, ತೋಟಪ್ಪನಾಯಕ, ತಿಪ್ಪೂರು ಮಹದೇವನಾಯಕ, ಶ್ರೀನಿವಾಸ್, ಇಇ ಕುಶುಕುಮಾರ್, ವಡ್ಡರಕೊಪ್ಪಲು ಕುಮಾರಸ್ವಾಮಿ ಎಇಇಗಳಾ ಆಯಾಜ್ ಪಾಷ, ಈಶ್ವರ್, ಇಂಜಿನಿಯರ್ ಗಳಾದ ಕಿರಣ್, ಉದಯ್, ಪ್ರತಾಪ್, ಶಂಕರೇಗೌಡ, ಕನ್ನಿಕಾ ಸೇರಿದಂತೆ ಹಲವರು ಇದ್ದರು.