ಮೈಸೂರು : ಕೆಆರ್‌ಎಸ್ ಜಲಾಶಯದ ಸುತ್ತಮುತ್ತ ಮತ್ತೇ ಕಲ್ಲು ಗಣಿಗಾರಿಕೆ ನಡೆಸುವ ಉದ್ದೇಶದಿಂದ ಗಣಿಮಾಲಿಕರು ಉಚ್ಛನ್ಯಾಯಾಲಯದಲ್ಲಿ ಸಲ್ಲಿಸಿರುವ ರಿಟ್ ಅರ್ಜಿ ಅನುಸಾರ ಮಂಡ್ಯ ಜಿಲ್ಲೆ, ಪಾಂಡವಪುರ ತಾಲ್ಲೂಕಿನ ಬೇಬಿ ಬೆಟ್ಟದಲ್ಲಿ ಮಂಡ್ಯ ಜಿಲ್ಲಾಡಳಿತ ನಡೆಸಲು ಉದ್ದೇಶಿಸಿರುವ ಟ್ರಯಲ್ ಬ್ಲಾಸ್ಟ್‌ಗೆ ರೈತಸಂಘಟನೆ ವಿರೋಧ ವ್ಯಕ್ತಪಡಿಸಿದ್ದು, ಗೋಬ್ಯಾಕ್ ಚಳವಳಿ ನಡೆಸುವ ಎಚ್ಚರಿಕೆ ನೀಡಿದೆ.
ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಸೋಮವಾರ ಸುದ್ದಿಗೋಷ್ಠಿ ನಡೆಸಿದ ರೈತಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ಮಾತನಾಡಿ, ಯಾವುದೇ ಕಾರಣಕ್ಕೂ ಟ್ರಯಲ್ ಬ್ಲಾಸ್ಟ್ ನಡೆಸಬಾರದು, ಇದರಿಂದ ಕೆಆರ್‌ಎಸ್ ಅಣೆಕಟ್ಟೆಗೆ ಅಪಾಯವಿದೆ. ಇದಕ್ಕೆ ಕಾವೇರಿ ಜಲಾನಯನ ಪ್ರದೇಶದ ಎಲ್ಲ ರೈತರು ಮತ್ತು ಜನಸಾಮಾನ್ಯರ ವಿರೋಧವಿದೆ. ಈ ಹಿಂದೆಯೂ ಮೂರು ಬಾರಿ ಟ್ರಯಲ್ ನಡೆಸಲು ಬಂದಿದ್ದ ಅಧಿಕಾರಿಗಳನ್ನು ಗೋ ಬ್ಯಾಕ್ ಚಳವಳಿ ಮೂಲಕ ವಾಪಸ್ ಕಳಿಸಿದ್ದೇವೆ ಎಂದು ಹೇಳಿದರು.