ಮೈಸೂರು : ದೆಹಲಿಯಲ್ಲಿ ಫೆ.೧೩ ರಂದು ಸಂಯುಕ್ತ ಕಿಸಾನ್ ಮೋರ್ಚಾ (ರಾಜಕೀಯೇತರ) ಸಂಘಟನೆ ಕರೆ ನೀಡಿರುವ ಹೋರಾಟದಲ್ಲಿ ಭಾಗವಹಿಸಲು ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್ ನೇತೃತ್ವದಲ್ಲಿ ನೂರಾರು ರೈತರು ರೈಲಿನಲ್ಲಿ ದೆಹಲಿಗೆ ಪ್ರಯಾಣ ಬೆಳೆಸಿದರು.
ಕೃಷಿ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ ಖಾತ್ರಿ ಕಾನೂನು ಜಾರಿಯಾಗಬೇಕು, ರೈತರ ಸಾಲ ಸಂಪೂರ್ಣ ಮನ್ನಾ ಆಗಬೇಕು. ೬೦ವರ್ಷ ತುಂಬಿದ ರೈತರಿಗೆ ಪಿಂಚಣಿ ಯೋಜನೆ ಜಾರಿಗೆ ತರಬೇಕು ಎಂದು ಒತ್ತಾಯಿಸಿದರು.
ರೈಲ್ವೆ ನಿಲ್ದಾಣದಲ್ಲಿ ಶನಿವಾರ ಮಾತನಾಡಿದ ಕುರುಬೂರ್ ಶಾಂತಕುಮಾರ್, ಕೇಂದ್ರ ಸರ್ಕಾರ ರೈತರ ಹೋರಾಟವನ್ನು ಗಂಭೀರವಾಗಿ ಪರಿಗಣಿಸಿ, ರೈತರ ಹಿತಾಸಕ್ತಿಯನ್ನು ಕಾಪಾಡಬೇಕು, ಎಮ್.ಎಸ್. ಸ್ವಾಮಿನಾಥನ್ ಅವರಿಗೆ ಭಾರತರತ್ನ ನೀಡಿ ಗೌರವಿಸುವ ಸರ್ಕಾರ ಅವರು ರೈತರ ಪರ ನೀಡಿರುವ ವರದಿಯನ್ನು ಯಾಕೆ ಜಾರಿ ಮಾಡುತ್ತಿಲ್ಲ ಇದು ಅನುಮಾನವಾಗಿದೆ. ರೈತರ ಹಕ್ಕೂತ್ತಾಯಗಳ ಈಡೇರಿಸಬೇಕು ಇಲ್ಲದಿದ್ದರೆ ಮುಂದಿನ ಲೋಕಸಭಾ ಚುನಾವಣೆ ರೈತರ ಪಾಲಿಗೆ ಕರಾಳ ಚುನಾವಣೆಯಾಗುತ್ತದೆ ಎಂದು ಎಚ್ಚರಿಸಿದರು.
ರಾಜ್ಯದ ಬೇರೆ ಬೇರೆ ಭಾಗದಿಂದ ಬೇರೆ ಬೇರೆ ರೈಲುಗಳ ಮೂಲಕ ಸಾವಿರಾರು ಸಂಖ್ಯೆಯಲ್ಲಿ ದೆಹಲಿ ಚಲೋ ನಡೆಸುತ್ತಿದ್ದೇವೆ ಎಂದರು.
ರೈತ ಮುಖಂಡರುಗಳಾದ ಬರಡನಪುರ ನಾಗರಾಜ್, ಉಡಿಗಾಲ ರೇವಣ್ಣ, ಮೂಕಳ್ಳಿ ಮಹದೇವಸ್ವಾಮಿ, ಕುರುಬೂರು ಸಿದ್ದೇಶ್, ಗೌರಿಶಂಕರ, ಶಿವಮೂರ್ತಿ, ಕಮಲಮ್ಮ, ಪ್ರದೀಪ್, ನಾಗರಾಜ್ ಮೂರ್ತಿ ಮುಂತಾದವರು ಇದ್ದರು.