ನೋಯ್ಡಾ: ಫ್ಯಾಷನ್ ಶೋವೊಂದರಲ್ಲಿ ರ‍್ಯಾಂಪ್ ವಾಕ್ ಮಾಡುವಾಗ ಕಬ್ಬಿಣದ ಪಿಲ್ಲರ್ ಬಿದ್ದು ಮಾಡೆಲ್ ವೊಬ್ಬಳು ಮೃತಪಟ್ಟಿರುವ ಘಟನೆ ರವಿವಾರ (ಜೂ.11 ರಂದು) ನೋಯ್ಡಾದಲ್ಲಿ ನಡೆದಿದೆ.
ನೋಯ್ಡಾದ ಫಿಲ್ಮ್ ಸಿಟಿ ಪ್ರದೇಶದಲ್ಲಿರುವ ಸ್ಟುಡಿಯೋವೊಂದರಲ್ಲಿ ಫ್ಯಾಷನ್ ಶೋ ಆಯೋಜಿಸಲಾಗಿತ್ತು. ಇದರಲ್ಲಿ ವಂಶಿಕಾ ಚೋಪ್ರಾ ಬಾಬಿ ರಾಜ್ ಜೊತೆಯಾಗಿ ರ‍್ಯಾಂಪ್ ಮೇಲೆ ಸ್ಟೈಲಿಸ್ಟ್ ಆಗಿ ವಾಕ್ ಮಾಡಿದ್ದಾರೆ. ಈ ವೇಳೆ ಇದ್ದಕ್ಕಿದ್ದಂತೆ ಸ್ಟೇಜ್ ಗೆ ಲೈಟ್ ಗಳನ್ನು ಫಿಕ್ಸ್ ಮಾಡಲು ಬಳಸುವ ಕಬ್ಬಿಣದ ಪಿಲ್ಲರ್ ಕೆಳಕ್ಕೆ ಬಿದ್ದಿದೆ.
ಕಾರ್ಯಕ್ರಮದ ಆಯೋಜಕರು ಹಾಗೂ ಲೈಟಿಂಗ್ ಟ್ರಸ್ ಅಳವಡಿಸಿದವರನ್ನು ಪೊಲೀಸರು ವಿಚಾರಣೆ ನಡೆಸಿದ್ದಾರೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಬಗ್ಗೆ ಇನ್ನಷ್ಟು ತನಿಖೆ ನಡೆಯುತ್ತಿದೆ.