Wednesday, January 7, 2026
Google search engine

Homeಅಪರಾಧಎಣ್ಣೆ ಜಗಳ ಅಂತ್ಯದಲ್ಲಿ ತಂದೆಯಿಂದ ಮಗನ ಕೊಲೆ

ಎಣ್ಣೆ ಜಗಳ ಅಂತ್ಯದಲ್ಲಿ ತಂದೆಯಿಂದ ಮಗನ ಕೊಲೆ

ಚಿಕ್ಕಮಗಳೂರು : ಅಪ್ಪ ಮತ್ತು ಮಗ ಇಬ್ಬರೂ ಕುಡಿತದ ಚಟಕ್ಕೆ ದಾಸರಾಗಿದ್ದರು. ಅದಷ್ಟೇ ಅಲ್ಲದೆ ನಾ ಮೇಲು, ತಾ ಮೇಲು ಎಂದು ಪೈಪೋಟಿಗೆ ಇಳಿಯುತ್ತಿದ್ದರು. ಹೀಗೆ ಸ್ನೇಹಿತರಂತೆ ಒಟ್ಟೊಟ್ಟಿಗೆ ಕೂತು ನನಗೆ ಜಾಸ್ತಿ, ನನಗೆ ಕಮ್ಮಿ ಅಂತ ಹಠಕ್ಕೆ ಬಿದ್ದು ಕುಡಿಯುತ್ತಿದ್ದರು. ಅಪ್ಪ-ಮಗನ ನಡುವಿನ ಎಣ್ಣೆ ವಿಚಾರವಾಗಿ ಆರಂಭವಾದ ಗಲಾಟೆ ಮಗನ ಕೊಲೆಯಲ್ಲಿ ಅಂತ್ಯವಾಗಿದೆ.‌

ತಂದೆ ರಮೇಶ್​​, ಎದೆಯೆತ್ತರಕ್ಕೆ ಬೆಳೆದಿದ್ದ ಮಗನಿಗೆ ಬುದ್ಧಿ ಹೇಳಿ ಸರಿ‌ ದಾರಿಗೆ ತರಬೇಕಿತ್ತು. ಆದರೆ ತಾನೇ ಮಗನನ್ನ ಜೊತೆಗೆ ಕೂರಿಸಿಕೊಂಡು ಎಣ್ಣೆ ಕುಡಿಯುತ್ತಿದ್ದ, ಅಲ್ಲದೆ ಈಗ ಮಗನ ಹೆಣವನ್ನೇ ಉರುಳಿಸಿದ್ದಾರೆ. ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಬಾಳೂರು ಸಮೀಪದ ಆನೆಗುಂಡಿ ಗ್ರಾಮದ ನಿವಾಸಿ ರಮೇಶ್, ಚಿಕ್ಕ ವಯಸ್ಸಿನಿಂದಲೂ ಕೂಡ ಕುಡಿತದ ಚಟಕ್ಕೆ ದಾಸನಾಗಿದ್ದ. ತಾನೊಬ್ಬನೇ ಕುಡಿದಿದ್ದರೆ ಏನೂ ಆಗ್ತಿರಲಿಲ್ಲ, ತಾನು ಕುಡಿಯೋದರ ಜೊತೆಗೆ ತನ್ನ ಮಗನನ್ನು ಒಟ್ಟಿಗೆ ಕೂರಿಸಿಕೊಂಡು ಕುಡಿಯೋಕೆ ಆರಂಭಿಸಿದ್ದರು.

ಅಪ್ಪ-ಮಗ ಇಬ್ಬರೂ ಎಣ್ಣೆ ಕುಡಿದ ಮೇಲೆ ನಿತ್ಯ ಜಗಳ ಮಾಡಿಕೊಳ್ಳುತ್ತಿದ್ದರು. ಕುಡುಕ ತಂದೆ ಮತ್ತು ಮಗನ ಕಾಟಕ್ಕೆ ತಾಯಿ ಮಂಜುಳಾ ಮನೆ ಬಿಟ್ಟು ಹೋಗಿದ್ದರು. ಹೆಣ್ಣು ದಿಕ್ಕಿಲ್ಲದ ಮನೆಯಲ್ಲಿ ಅಪ್ಪ-ಮಗ ಇಬ್ಬರದ್ದೇ ಕಾರು-ಬಾರು. ಹೇಳೋರು, ಕೇಳೋರು ಯಾರು ಇಲ್ಲದ್ದಿದ್ದರಿಂದ ನಿತ್ಯ ಬೆಳಗ್ಗೆಯಿಂದ ಸಂಜೆವರೆಗೂ ಕುಡಿಯೋದನ್ನೇ ಕಾಯಂ ವೃತ್ತಿ ಮಾಡಿಕೊಂಡಿದ್ದರು. ನನಗೆ ಎಣ್ಣೆ ಕಡಿಮೆ, ನಿನಗೆ ಜಾಸ್ತಿ ಅನ್ನೋ ವಿಚಾರಕ್ಕೆ ರವಿವಾರದಂದು ಗಲಾಟೆ ನಡೆದಿದೆ. ಈ ವೇಳೆ ರಮೇಶ್, ಮಗ ಪ್ರದೀಪನನ್ನೇ ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿದ್ದಾರೆ.

ಮನೆಯಲ್ಲಿ ಅಪ್ಪ-ಮಗ ಇಬ್ಬರೇ ವಾಸವಿದ್ದರು. ಕುಡಿದು ಕ್ಷುಲ್ಲಕ ಕಾರಣಕ್ಕೆ ಆಗಾಗ ಮನೆಯಲ್ಲಿ ಗಲಾಟೆ ಮಾಡುತ್ತಿದ್ದರು ಎನ್ನಲಾಗಿದೆ. ಇವರ ನಿರಂತರ ಜಗಳದ ಕಾಟ ತಡೆಯಲಾರದೆ ಪ್ರದೀಪ್ ತಾಯಿ ಈ ಮೊದಲೇ ಮನೆ ಬಿಟ್ಟು ಹೋಗಿದ್ದರು. ನಿನ್ನೆ ಅಡಿಕೆ ಮಾರಿ ಬಂದಿದ್ದು, ಅದರಿಂದ ಸಿಕ್ಕ ಹಣದಲ್ಲಿ ರಾತ್ರಿ ಜೊಡೆತ್ತಿನಂತಿದ್ದ ಅಪ್ಪ-ಮಗ ಇಬ್ಬರೂ ಕಂಠಪೂರ್ತಿ ಕುಡಿದಿದ್ದಾರೆ. ಕುಡಿದ ಮತ್ತಿನಲ್ಲಿ ಅಪ್ಪ-ಮಗನ ನಡುವೆ ಗಲಾಟೆ ನಡೆದಿದೆ. ಈ ಸಂದರ್ಭದಲ್ಲಿ, ರಮೇಶ್ ಆಚಾ‌ರ್ ತನ್ನ ಮಗ ಪ್ರದೀಪ್‌ನನ್ನು ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿದ್ದಾರೆ.

ಇಡೀ ರಾತ್ರಿ ಪ್ರದೀಪ್ ರಕ್ತದ ಮಡುವಿನಲ್ಲಿ ಬಿದ್ದಿದ್ದರಿಂದ ತೀವ್ರ ರಕ್ತಸ್ರಾವವಾಗಿ ಮೃತಪಟ್ಟಿದ್ದಾರೆ. ಬೆಳಿಗ್ಗೆ ರಮೇಶ್, ಮಗನ ಮೃತದೇಹವನ್ನು ಮನೆಯಿಂದ ಹೊರಕ್ಕೆ ಎಳೆದು ತಂದಿದ್ದಾನೆ. ಇದನ್ನು ಗಮನಿಸಿದ ಅಕ್ಕಪಕ್ಕದ ಮನೆಯವರು ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ವಿಷಯ ತಿಳಿದ ತಕ್ಷಣ‌ ಸ್ಥಳಕ್ಕೆ ಬಂದ ಬಾಳೂರು ಠಾಣೆಯ ಪೊಲೀಸರೇ ಒಂದು ಕ್ಷಣ‌ ಶಾಕ್​​ ಆಗಿದ್ದರು. ಸ್ಥಳ‌ ಪ‌ರಿಶೀಲನೆ ಮಾಡಿದ ಪೊಲೀಸರು ತಂದೆ  ರಮೇಶ್​​ರನ್ನು ಬಂಧಿಸಿದ್ದಾರೆ. ವಿಚಾರಣೆ ವೇಳೆ‌ ಎಣ್ಣೆ ವಿಚಾರಕ್ಕೆ ಮಗನ ಕೊಲೆ ಮಾಡಿರುವುದಾಗಿ ರಮೇಶ್ ಒಪ್ಪಿಕೊಂಡಿದ್ದಾರೆ.

‘ಹಿರಿಯಕ್ಕನ ಚಾಳಿ ಮನೆಮಂದಿಗೆಲ್ಲಾ’ ಎಂಬ ಮಾತಿನಂತೆ ಮಗನನ್ನು ಚೆನ್ನಾಗಿ ಬೆಳೆಸಿ ಬುದ್ಧಿವಂತನನ್ನಾಗಿ ಮಾಡಬೇಕಿದ್ದ ಅಪ್ಪನೇ ತನ್ನ ಜೊತೆಗೆ ಕೂರಿಸಿಕೊಂಡು ಕುಡಿಯೋದನ್ನ ಕಲಿಸಿ, ಇದೀಗ ತಾವೇ ತಮ್ಮ ಮಗನನ್ನ ಕೊಲೆ ಮಾಡಿರುವುದು ಮಾತ್ರ ದುರಂತವೇ ಸರಿ.

RELATED ARTICLES
- Advertisment -
Google search engine

Most Popular