ಮಂಗಳೂರು(ದಕ್ಷಿಣ ಕನ್ನಡ): ಹೆಂಡ್ತಿ ಜೊತೆಗಿನ ಮನಸ್ತಾಪದಿಂದ ಮನನೊಂದು ತನ್ನ ಪುತ್ರಿ ಜೊತೆಗೆ ಆತ್ಮಹತ್ಯೆಗೆ ಮುಂದಾಗಿದ್ದ ವ್ಯಕ್ತಿಯನ್ನು ಮಂಗಳೂರಿನ ಪಣಂಬೂರು ಪೊಲೀಸರು ಸಮಯಪ್ರಜ್ಞೆ ಮೆರೆದು ರಕ್ಷಿಸಿದ ಘಟನೆ ನಡೆದಿದೆ.
ಕೂಳೂರು ಪಂಜಿಮೊಗರು ಅಂಬಿಕಾ ನಗರ ನಿವಾಸಿ ರಾಜೇಶ್(35) ಮತ್ತವರ ನಾಲ್ಕು ವರ್ಷದ ಪುತ್ರಿಯನ್ನು ರಕ್ಷಿಸಲಾಗಿದೆ.
ಪತ್ನಿಯೊಂದಿಗೆ ಜಗಳ ಮಾಡಿಕೊಂಡಿದ್ದ ರಾಜೇಶ್ ತನ್ನ ಮಗಳೊಂದಿಗೆ ತಣ್ಣೀರುಬಾವಿ ಬೀಚ್‌ಗೆ ತೆರಳಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಸೆಲ್ಫಿ ವೀಡಿಯೊ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಈ ವೀಡಿಯೊವನ್ನು ಸಾರ್ವಜನಿಕರೊಬ್ಬರು ಪೊಲೀಸರಿಗೆ ಕಳುಹಿಸಿದ್ದರು. ವೀಡಿಯೊವನ್ನು ಗಂಭೀರವಾಗಿ ಪರಿಗಣಿಸಿದ ಎಸಿಪಿ ತಕ್ಷಣ ಪಣಂಬೂರು ಪೊಲೀಸರಿಗೆ ಮಾಹಿತಿ ನೀಡಿದ್ದರು.
ಆದರೆ ಆ ವೀಡಿಯೊ ಯಾವ ಬೀಚ್‌ನಲ್ಲಿ ಚಿತ್ರೀಕರಿಸಿದ್ದು ಎಂದು ಗೊತ್ತಾಗುತ್ತಿರಲಿಲ್ಲ. ಈ ಹಿನ್ನೆಲೆಯಲ್ಲಿ ಪೊಲೀಸರು ಎರಡು ತಂಡಗಳಾಗಿ ಪಣಂಬೂರು, ತಣ್ಣೀರು ಬಾವಿ ಬೀಚ್ ಗಳಿಗೆ ತೆರಳಿ ಪರಿಶೀಲಿಸಿದ್ದರು. ತಣ್ಣೀರುಬಾವಿ ಬೀಚ್‌ನಲ್ಲಿ ಗಂಟೆಯ ಹಿಂದೆ ವೀಡಿಯೋದಲ್ಲಿದ್ದ ತಂದೆ-ಮಗಳನ್ನು ನೋಡಿದ್ದಾಗಿ ಸಾರ್ವಜನಿಕರೊಬ್ಬರು ಮಾಹಿತಿ ನೀಡಿದ್ದರು.
ಆ ಮಾಹಿತಿಯನ್ನು ಆಧರಿಸಿ ವಿಚಾರಿಸಿದಾಗ ಅದು ರಾಜೇಶ್ ಎಂದು ತಿಳಿದುಬಂದಿತ್ತು. ತಕ್ಷಣ ಅವರ ಮೊಬೈಲ್ ನಂಬರ್ ಕಲೆ ಹಾಕಿ ಕರೆ ಮಾಡಿದರೆ ಅದು ಸ್ವಿಚ್‌ಆಫ್ ಆಗಿತ್ತು. ರಾತ್ರಿ 9:15ರ ಸುಮಾರಿಗೆ ರಾಜೇಶ್‌ರ ಮೊಬೈಲ್ ಆನ್ ಆಗಿತ್ತು. ತಕ್ಷಣ ಅವರ ಮೊಬೈಲ್ ಲೊಕೇಶನ್ ಆಧರಿಸಿ ಪಂಜಿಮೊಗರು ಅಂಬಿಕಾ ನಗರದಲ್ಲಿರುವ ಅವರ ಮನೆಗೆ ಭೇಟಿ ನೀಡಿದಾಗ ಬಾಗಿಲು ಒಳಗಿನಿಂದ ಚಿಲಕ ಹಾಕಿ ಮುಚ್ಚಲಾಗಿತ್ತು. ಕಿಟಿಕಿಯಲ್ಲಿ ನೋಡಿದಾಗ ರಾಜೇಶ್ ಸೀರೆಯಿಂದ ಮನೆಯ ಪಕ್ಕಾಸಿಗೆ ನೇಣು ಬಿಗಿದುಕೊಳ್ಳುವ ಯತ್ನದಲ್ಲಿದ್ದರು. ತಕ್ಷಣ ಪೊಲೀಸರು ಬಾಗಿಲು ಒಡೆದು ಮನೆಯೊಳಗೆ ಪ್ರವೇಶಿಸಿ ಅವರನ್ನು ರಕ್ಷಿಸಿದ್ದಾರೆ.



