ಬೆಂಗಳೂರು : ಎಲ್ ನೀನೋ ಪರಿಣಾಮದಿಂದಾಗಿ ಕರ್ನಾಟಕದಲ್ಲಿ ಜುಲೈ 11ರ ವೇಳೆಗೆ ಶೇ.30ರಷ್ಟು ಮಳೆ ಕೊರತೆ ದಾಖಲಾಗಿದ್ದು, ರಾಜ್ಯದಲ್ಲಿ ಉಲ್ಬಣಗೊಳ್ಳುತ್ತಿರುವ ಬರ ಪರಿಸ್ಥಿತಿಯನ್ನು ಅಧ್ಯಯನ ಮಾಡಲು ಕೇಂದ್ರ ಸರ್ಕಾರ ತಕ್ಷಣವೇ ತಜ್ಞರ ತಂಡವನ್ನು ನಿಯೋಜಿಸಬೇಕೆಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಮನವಿ ಮಾಡಿದ್ದಾರೆ.
ಈ ಕುರಿತು ಪ್ರಧಾನಮಂತ್ರಿಗೆ ಪತ್ರ ಬರೆದಿರುವ ಅವರು, ರಾಜ್ಯದ ಪ್ರಸ್ತುತ ಪರಿಸ್ಥಿತಿಯನ್ನು ವಿವರಿಸಿ, ಕೇಂದ್ರ ತಂಡದ ಭೇಟಿ ಬರದ ತೀವ್ರತೆಯನ್ನು ನೇರವಾಗಿ ಮೌಲ್ಯಮಾಪನ ಮಾಡಲು ನೆರವಾಗಲಿದೆ. ಕೇಂದ್ರ ಸರ್ಕಾರದ ಸಮಯೋಚಿತ ಬೆಂಬಲವು ರಾಜ್ಯ ಸರ್ಕಾರ ಕೈಗೊಂಡಿರುವ ಪರಿಹಾರ ಕ್ರಮಗಳಿಗೆ ಮತ್ತಷ್ಟು ಬಲ ನೀಡುವುದರ ಜೊತೆಗೆ ರೈತರಿಗೆ ಆತ್ಮವಿಶ್ವಾಸ ತುಂಬಲಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಕರ್ನಾಟಕವು ದೇಶದಲ್ಲೇ ಹೆಚ್ಚು ಬರಪೀಡಿತ ರಾಜ್ಯಗಳಲ್ಲಿ ಒಂದಾಗಿದ್ದು, ರಾಜ್ಯದ ಶೇ.77ರಷ್ಟು ಭೌಗೋಳಿಕ ಪ್ರದೇಶವು ಶುಷ್ಕ ಮತ್ತು ಅರೆ-ಶುಷ್ಕ ವಲಯದಲ್ಲಿದೆ. ಸುಮಾರು 84.79 ಲಕ್ಷ ಹೆಕ್ಟೇರ್ ಮಳೆ ಆಶ್ರಿತ ಕೃಷಿ ಭೂಮಿಯನ್ನು ಹೊಂದಿರುವ ರಾಜ್ಯದಲ್ಲಿ ಕೃಷಿ ಚಟುವಟಿಕೆಗಳು ಬಹುತೇಕ ಮುಂಗಾರು ಮಳೆಯನ್ನೇ ಅವಲಂಬಿಸಿವೆ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.
ರಾಜ್ಯದ ವಾರ್ಷಿಕ ಮಳೆಯ ಶೇ.74ರಷ್ಟು ಭಾಗ ನೈಋತ್ಯ ಮುಂಗಾರು ಅವಧಿಯಲ್ಲಿ ಸುರಿಯುವುದರಿಂದ, ಮಳೆಯ ಕೊರತೆಯು ಕೃಷಿ, ಕುಡಿಯುವ ನೀರು, ಜೀವನೋಪಾಯ ಹಾಗೂ ಗ್ರಾಮೀಣ ಆರ್ಥಿಕತೆಯ ಮೇಲೆ ಗಂಭೀರ ಪರಿಣಾಮ ಬೀರುತ್ತದೆ ಎಂದು ಮುಖ್ಯಮಂತ್ರಿ ಎಚ್ಚರಿಸಿದ್ದಾರೆ. ಭಾರತೀಯ ಹವಾಮಾನ ಇಲಾಖೆ (IMD) ಮುಂಚಿತವಾಗಿಯೇ ಎಲ್ ನೀನೋ ಪರಿಣಾಮದಿಂದ 2026ರ ಮುಂಗಾರು ದುರ್ಬಲವಾಗುವ ಸಾಧ್ಯತೆಯನ್ನು ಸೂಚಿಸಿತ್ತು. ಅದರಂತೆ, ಜುಲೈ 11ರ ವೇಳೆಗೆ ರಾಜ್ಯದಲ್ಲಿ ವಾಡಿಕೆಯ 292 ಮಿಮೀ ಮಳೆಯ ಬದಲು ಕೇವಲ 203 ಮಿಮೀ ಮಳೆಯಾಗಿದ್ದು, ಶೇ.30ರಷ್ಟು ಕೊರತೆ ದಾಖಲಾಗಿದೆ.
31 ಜಿಲ್ಲೆಗಳ ಪೈಕಿ 18 ಜಿಲ್ಲೆಗಳು ತೀವ್ರ ಮಳೆ ಕೊರತೆಯನ್ನು ಎದುರಿಸುತ್ತಿದ್ದು, 240 ತಾಲೂಕುಗಳಲ್ಲಿ 141 ತಾಲೂಕುಗಳು ಕೊರತೆ ಅಥವಾ ತೀವ್ರ ಕೊರತೆ ಮಳೆಯ ವ್ಯಾಪ್ತಿಗೆ ಸೇರಿವೆ. ಮಲೆನಾಡು ಪ್ರದೇಶದಲ್ಲಿ ಶೇ.34, ಕರಾವಳಿಯಲ್ಲಿ ಶೇ.30, ಉತ್ತರ ಒಳನಾಡಿನಲ್ಲಿ ಶೇ.24 ಹಾಗೂ ದಕ್ಷಿಣ ಒಳನಾಡಿನಲ್ಲಿ ಶೇ.18ರಷ್ಟು ಮಳೆ ಕೊರತೆ ದಾಖಲಾಗಿದೆ.
ಮುಂಗಾರು ಬಿತ್ತನೆಯೂ ಹಿನ್ನಡೆ ಅನುಭವಿಸಿದ್ದು, 84.10 ಲಕ್ಷ ಹೆಕ್ಟೇರ್ ಗುರಿಯ ಪೈಕಿ ಕೇವಲ 28.36 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಮಾತ್ರ ಬಿತ್ತನೆ ಪೂರ್ಣಗೊಂಡಿದೆ. ಇದು ಗುರಿಯ ಶೇ.34ರಷ್ಟಷ್ಟೇ ಆಗಿದೆ. ಜಲಾಶಯಗಳಲ್ಲಿನ ನೀರಿನ ಸಂಗ್ರಹಣೆಯೂ ಕಳವಳಕಾರಿ ಮಟ್ಟದಲ್ಲಿದೆ. ಜುಲೈ 10ರ ಮಾಹಿತಿಯಂತೆ, ರಾಜ್ಯದ 14 ಪ್ರಮುಖ ಜಲಾಶಯಗಳಲ್ಲಿ ಒಟ್ಟು 895.65 ಟಿಎಂಸಿ ಸಾಮರ್ಥ್ಯದ ಪೈಕಿ ಕೇವಲ 303 ಟಿಎಂಸಿ ನೀರು ಮಾತ್ರ ಲಭ್ಯವಿದ್ದು, ಇದು ಶೇ.34ರಷ್ಟು ಸಂಗ್ರಹಣೆಯಷ್ಟೇ ಆಗಿದೆ.
ಮಣ್ಣಿನಲ್ಲಿ ತೇವಾಂಶದ ಕೊರತೆ ಹಾಗೂ ಮಳೆಯ ಅನಿಶ್ಚಿತತೆಯಿಂದ ರೈತರು ಬಿತ್ತನೆ ಮುಂದುವರಿಸಲು ಹಿಂಜರಿಯುತ್ತಿದ್ದಾರೆ. ಕರ್ನಾಟಕವು ದೇಶದ ಪ್ರಮುಖ ಬೇಳೆಕಾಳು ಉತ್ಪಾದಕ ರಾಜ್ಯವಾಗಿರುವುದರಿಂದ, ಉತ್ಪಾದನೆ ಕುಸಿದರೆ ರಾಷ್ಟ್ರೀಯ ಮಟ್ಟದಲ್ಲಿ ವಿಶೇಷವಾಗಿ ತೊಗರಿ ಬೇಳೆಯ ಲಭ್ಯತೆ ಮತ್ತು ಬೆಲೆಗಳ ಮೇಲೂ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ಮುಖ್ಯಮಂತ್ರಿ ತಿಳಿಸಿದ್ದಾರೆ.
ರಾಜ್ಯ ಸರ್ಕಾರ ಈಗಾಗಲೇ ಕೃಷಿ ತಜ್ಞರ ಸಲಹೆಯಂತೆ ಜಿಲ್ಲಾವಾರು ತುರ್ತು ಕಾರ್ಯಯೋಜನೆಗಳನ್ನು ಜಾರಿಗೊಳಿಸಿದ್ದು, ಬರ ನಿರ್ವಹಣೆಗೆ ಅಗತ್ಯ ಕ್ರಮಗಳನ್ನು ಕೈಗೊಂಡಿದೆ. ಅಲ್ಲದೆ, ಜಲಾಶಯಗಳಲ್ಲಿ ಲಭ್ಯವಿರುವ ನೀರನ್ನು ಮುಖ್ಯವಾಗಿ ಕುಡಿಯುವ ನೀರಿನ ಅಗತ್ಯಕ್ಕೆ ಮೀಸಲಿಡುವ ನೀತಿ ನಿರ್ಧಾರವನ್ನೂ ಕೈಗೊಂಡಿದೆ ಎಂದು ಪತ್ರದಲ್ಲಿ ವಿವರಿಸಲಾಗಿದೆ.



