ಮಂಗಳೂರು (ದಕ್ಷಿಣ ಕನ್ನಡ): ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಮಂಗಳೂರು ವಿಶ್ವವಿದ್ಯಾನಿಲಯದ ಆಶ್ರಯದಲ್ಲಿ ಫೆಬ್ರವರಿ. 21, 22 ರಂದು ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ 27ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನವು ಹಿರಿಯ ಸಾಹಿತಿ ಡಾ. ಪ್ರಭಾಕರ ಶಿಶಿಲ ಇವರ ಸರ್ವಾಧ್ಯಕ್ಷತೆಯಲ್ಲಿ ನಡೆಯಲಿದೆ ಎಂದು ದ. ಕ ಜಿಲ್ಲಾ ಕಸಾಪ ಅಧ್ಯಕ್ಷ ಡಾ. ಎಂ ಪಿ ಶ್ರೀನಾಥ್ ತಿಳಿಸಿದ್ದಾರೆ.
ಮಂಗಳೂರು ಪ್ರೆಸ್ ಕ್ಲಬ್‌ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಫೆ.21ರಂದು ಬೆಳಗ್ಗೆ 8:45ಕ್ಕೆ ಅಸೈಗೋಳಿಯ ಕೇಂದ್ರ ಮೈದಾನದಿಂದ ಕನ್ನಡ ಸಾಂಸ್ಕೃತಿಕ ದಿಬ್ಬಣ ಆಗಮಿಸಲಿದೆ ಎಂದರು.
ಪದ್ಮಶ್ರೀ ಹರೇಕಳ ಹಾಜಬ್ಬ ಇವರು ಮೆರವಣಿಗೆಯನ್ನು ಉದ್ಘಾಟಿಸಲಿದ್ದಾರೆ. 10 ಗಂಟೆಗೆ ಸರಿಯಾಗಿ ವಿಶ್ವವಿದ್ಯಾಲಯದ ಮಂಗಳ ಸಭಾಂಗಣದಲ್ಲಿ ಉದ್ಘಾಟನಾ ಸಮಾರಂಭವು ನಡೆಯಲಿದೆ.
ಸಮ್ಮೇಳನದ ಸರ್ವಾಧ್ಯಕ್ಷರಾಗಿ ಹಿರಿಯ ಸಾಹಿತಿ ಡಾ. ಪ್ರಭಾಕರ ಶಿಶಿಲ ಭಾಗವಹಿಸಲಿದ್ದಾರೆ. ಹಿರಿಯ ಕವಿ ಬಿ ಆರ್ ಲಕ್ಷ್ಮಣ ರಾವ್ ಬೆಂಗಳೂರು ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ ಎಂದು ಹೇಳಿದರು.
ಕರ್ನಾಟಕ ವಿಧಾನಸಭಾ ಅಧ್ಯಕ್ಷರೂ ಉಳ್ಳಾಲ ತಾಲೂಕಿನ ಶಾಸಕರೂ ಆಗಿರುವ ಸನ್ಮಾನ್ಯ ಯು ಟಿ ಖಾದರ್ ಅವರು ಸ್ಮರಣ ಸಂಚಿಕೆಯನ್ನು ಬಿಡುಗಡೆಗೊಳಿಸಲಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಉಸ್ತುವಾರಿ ಸಚಿವರಾಗಿರುವ ದಿನೇಶ್ ಗುಂಡೂರಾವ್ ಸಾಂಸ್ಕೃತಿಕ ಕಾರ್ಯಕ್ರಮಗಳ ಉದ್ಘಾಟನೆ ಮಾಡಲಿದ್ದಾರೆ.