Saturday, April 19, 2025
Google search engine

Homeರಾಜ್ಯಶಿವಮೊಗ್ಗದಲ್ಲಿ ಫೆ. 24 ರಂದು ಸರ್ಕಾರದ 5 ಗ್ಯಾರಂಟಿ ಯೋಜನೆ ಫಲಾನುಭವಿಗಳ ಸಮಾವೇಶ: ಸಚಿವ ಎಸ್...

ಶಿವಮೊಗ್ಗದಲ್ಲಿ ಫೆ. 24 ರಂದು ಸರ್ಕಾರದ 5 ಗ್ಯಾರಂಟಿ ಯೋಜನೆ ಫಲಾನುಭವಿಗಳ ಸಮಾವೇಶ: ಸಚಿವ ಎಸ್ ಮಧು ಬಂಗಾರಪ್ಪ

ಶಿವಮೊಗ್ಗ: ಸರ್ಕಾರದ ಮಹತ್ವಕಾಂಕ್ಷಿ  ಐದು ಗ್ಯಾರಂಟಿ ಯೋಜನೆ  ಫಲಾನುಭವಿಗಳ ಜಿಲ್ಲಾ ಮಟ್ಟದ ಸಮಾವೇಶವನ್ನು ಫೆಬ್ರವರಿ 24ರಂದು ನಗರದ  ಫ್ರೀಡಂ ಪಾರ್ಕ್‌ನಲ್ಲಿ ಆಯೋಜಿಸಲಾಗಿದೆ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್ ಮಧು ಬಂಗಾರಪ್ಪ ಅವರು ತಿಳಿಸಿದರು.

 ಅವರು ಇಂದು ನಗರದ ಫ್ರೀಡಂ ಪಾರ್ಕ್‌ನಲ್ಲಿ ನಡೆದಿರುವ ಫೆ. 24ರ ಕಾರ್ಯಕ್ರಮದ ಪೂರ್ವ ಸಿದ್ಧತೆಗಳನ್ನು ಪರಿಶೀಲಿಸಿ ನಂತರ ಮಾಧ್ಯಮದ ಪ್ರತಿನಿಧಿಗಳೊಂದಿಗೆ ಮಾತನಾಡುತ್ತಾ ಈ ಕಾರ್ಯಕ್ರಮಕ್ಕೆ ಜಿಲ್ಲೆಯಿಂದ ಸರ್ಕಾರದ ಗ್ಯಾರಂಟಿ ಸೌಲಭ್ಯ ಪಡೆದ ಎಲ್ಲಾ ಫಲಾನುಭವಿಗಳು ಆಗಮಿಸಲಿದ್ದಾರೆ ಎಂದವರು ನುಡಿದರು.

ಜಿಲ್ಲಾ ಮಟ್ಟದಲ್ಲಿ  ಆಯೋಜನೆಗೊಳ್ಳುತ್ತಿರುವ ಈ ಕಾರ್ಯಕ್ರಮಕ್ಕೆ ರಾಜ್ಯದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಆಗಮಿಸಿ,  ಫಲಾನುಭವಿಗಳನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಅಲ್ಲದೆ ಸಚಿವ ಸಂಪುಟದ ಕೆಲ ಸಚಿವರು ಹಾಗೂ ನಿಗಮ ಮಂಡಳಿಗಳ ಅಧ್ಯಕ್ಷರುಗಳು ಆಗಮಿಸಲಿದ್ದಾರೆ ಎಂದು ತಿಳಿಸಿದರು.

ಜಿಲ್ಲೆಯಲ್ಲಿರುವ ಐದು ಗ್ಯಾರೆಂಟಿ ಯೋಜನೆಗಳ ಎಲ್ಲಾ ಪಲಾನುಭವಿಗಳ ಅನುಕೂಲಕ್ಕಾಗಿ ಎಲ್ಲ ರೀತಿಯ ಮೂಲಭೂತ ಸೌಕರ್ಯಗಳ ಜೊತೆಗೆ ಮಧ್ಯಾಹ್ನದ ಉಪಹಾರದ ವ್ಯವಸ್ಥೆ ಮಾಡಲು ಆಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂದವರು ನುಡಿದರು.

ಜಿಲ್ಲಾಡಳಿತದಿಂದ ಆಯೋಜನೆಗೊಂಡಿರುವ ಈ ಕಾರ್ಯಕ್ರಮಕ್ಕೆ ಗಣ್ಯರನ್ನು ಅತಿಥಿಗಳನ್ನು ಆಹ್ವಾನಿಸಲಾಗುವುದು ಇದೇ ಸಂದರ್ಭದಲ್ಲಿ ಸರ್ಕಾರದ ವಿವಿಧ ಯೋಜನೆಗಳ ಫಲಾನುಭವಿಗಳಿಗೆ ಸೌಲಭ್ಯಗಳನ್ನು ವಿತರಿಸಲಾಗುವುದು.

ಸಾರ್ವಜನಿಕರ ಸಂಚಾರಕ್ಕೆ ಅನುಕೂಲವಾಗುವಂತೆ ರಾಜ್ಯ ರಸ್ತೆ ಸಾರಿಗೆ ನಿಗಮದಿಂದ ಹೊಸ ಬಸ್‍ಗಳನ್ನು ಲೋಕಾರ್ಪಣೆಗೊಳಿಸಲಾಗುವುದು. ಪ್ರಸ್ತುತ ಜಿಲ್ಲೆಯ ಜನರ ಪ್ರಯಾಣಕ್ಕೆ ಅನುಕೂಲವಾಗುವಂತೆ ನೂರು ಬಸ್‍ಗಳನ್ನು ಒದಗಿಸುವಂತೆ ಸರ್ಕಾರಕ್ಕೆ ಬೇಡಿಕೆ ಸಲ್ಲಿಸಲಾಗಿದ್ದು, ಹಂತಹಂತವಾಗಿ ಬಸ್ಸುಗಳನ್ನು ಸಂಚಾರಕ್ಕೆ ಮುಕ್ತಗೊಳಿಸಲಾಗುವುದು ಎಂದರು.

ರಾಜ್ಯದ ಬಹುತೇಕ ಕುಟುಂಬಗಳ ಸದಸ್ಯರು ಈ ಗ್ಯಾರೆಂಟಿ ಯೋಜನೆಗಳ ಫಲಾನುಭವಿಗಳಾಗಿರುವುದು ವೈಯಕ್ತಿಕವಾಗಿ ಸಂತೋಷವಾಗಿದೆ ಎಂದ ಅವರು ಚುನಾವಣಾ ಪೂರ್ವದಲ್ಲಿ ಘೋಷಿಸಿದ ಪ್ರಣಾಳಿಕೆ  ಸಮಿತಿಯ ಉಪಾಧ್ಯಕ್ಷನಾಗಿದ್ದೆ ಎಂಬ ಹೆಮ್ಮೆಯಿದೆ. ಈ ಕಾರ್ಯಕ್ರಮ ನಡೆಯುವ ದಿನದಂದು ಫ್ರೀಡಂ ಪಾರ್ಕಿನ ಹೊರಾಂಗಣದ ಬಿತ್ತಿಯಲ್ಲಿ  ಅಲ್ಲಮಪ್ರಭುಗಳ ವಚನದ ಸಾಲುಗಳನ್ನು  ಪ್ರಕಟಿಸಲಾಗುವುದು ಎಂದರು.

ವಿಶೇಷವಾಗಿ ರಾಜ್ಯದ ಎಲ್ಲಾ ಸರ್ಕಾರಿ ಶಾಲೆಗಳಲ್ಲಿ ಐದು ದಿನಗಳ ಕಾಲ ಪೌಷ್ಟಿಕ ಆಹಾರ, ಹಾಲು ಮತ್ತು ಎರಡು ದಿನಗಳ ಕಾಲ ಮೊಟ್ಟೆಯನ್ನು ನೀಡಲಾಗುತ್ತಿತ್ತು. ಇನ್ನು ಮುಂದೆ ವಾರದ ನಾಲ್ಕು ದಿನಗಳ ಕಾಲ ಮಕ್ಕಳಿಗೆ ಪೌಷ್ಟಿಕ ಆಹಾರ ರಾಗಿ ಮಾಲ್ಟ್ ನ್ನು ನೀಡುವ ಕಾರ್ಯಕ್ರಮಕ್ಕೆ ನಾಳೆ ಬೆಂಗಳೂರಿನಲ್ಲಿ ರಾಜ್ಯದ ಮುಖ್ಯಮಂತ್ರಿಗಳು ಚಾಲನೆ ನೀಡಲಿದ್ದಾರೆ. ರಾಜ್ಯದ 59 ಲಕ್ಷ ವಿದ್ಯಾರ್ಥಿಗಳು ಈ ಯೋಜನೆಯ ಲಾಭ ಪಡೆಯುತ್ತಿರುವುದು ವಿಶೇಷವಾಗಿದೆ ಎಂದರು.

ಈವರೆಗೆ ಗ್ಯಾರಂಟಿ ಯೋಜನೆಗಳ ಸೌಲಭ್ಯ ಪಡೆಯದಿರುವ ವಂಚಿತರ  ಅನುಕೂಲಕ್ಕಾಗಿ ವೇದಿಕೆಯ ಇಕ್ಕೆಲಗಳಲ್ಲಿ  ದೂರು ಸ್ವೀಕಾರ ಹಾಗೂ ಸಮಸ್ಯೆ ನಿವಾರಣೆಗೆ ಸಲಹಾ ಕೊಠಡಿಗಳನ್ನು ಸ್ಥಾಪಿಸಲಾಗುವುದು. ಅರ್ಹರು ಈ ಸದವಕಾಶದ ಲಾಭ ಪಡೆದುಕೊಳ್ಳಬೇಕೆಂದು ಅವರು ತಿಳಿಸಿದರು.

ಪ್ರಸ್ತುತ ಆಡಳಿತಾರೂಡ ಸರ್ಕಾರ   ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚಿನ ಒತ್ತು ನೀಡುವ ಸದುದ್ದೇಶದಿಂದ ಕಳೆದ ಸಾಲಿನಲ್ಲಿ  ಶಿಕ್ಷಣ ಇಲಾಖೆಗೆ ನಿಗದಿಗೊಳಿಸಿದ 37 ಸಾವಿರ ಕೋಟಿ ಅನುದಾನವನ್ನು ಪ್ರಸಕ್ತ ಸಾಲಿಗೆ 44,000 ಕೋಟಿ ರೂ.ಗಳಿಗೆ ಹೆಚ್ಚಿಸಲಾಗಿದೆ ಎಂದವರು ತಿಳಿಸಿದರು.

ಸಚಿವರ ಈ ಭೇಟಿಯ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ, ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ  ಸ್ನೇಹಲ್ ಸುಧಾಕರ್ ಲೋಖಂಡೆ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಜಿ.ಕೆ ಮಿಥುನ್ ಕುಮಾರ್, ಅಪರ ಜಿಲ್ಲಾಧಿಕಾರಿ ಸಿದ್ದಲಿಂಗ ರೆಡ್ಡಿ  ಸೇರಿದಂತೆ ಜಿಲ್ಲೆಯ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಹಿರಿಯ ಅಧಿಕಾರಿಗಳು ಹಾಗೂ ರಾಜಕೀಯ ಮುಖಂಡರು ಉಪಸ್ಥಿತರಿದ್ದರು.

RELATED ARTICLES
- Advertisment -
Google search engine

Most Popular