ಬೆಲೆ ಏರಿಕೆ:ಹೂವು, ಹಣ್ಣು ದುಬಾರಿ
ಮೈಸೂರು : ಗೌರಿ-ಗಣೇಶ ಹಬ್ಬದ ಸಂಭ್ರಮ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಮನೆ ಮಾಡಿದ್ದು, ಬೆಲೆ ಏರಿಕೆ ನಡುವೆಯೂ ಇಂದು ಶುಕ್ರವಾರ ಗಣೇಶನನ್ನು ಕೂರಿಸಲು ಬೇಕಾದ ಅಗತ್ಯ ವಸ್ತುಗಳ ಖರೀದಿ ಭರಾಟೆ ಜೋರಾಗಿ ನಡೆಯಿತು.
ಗೌರಿಗೆ ಬೇಕಾದ ಬಾಗಿನ, ವಿಘ್ನೇಶ್ವರನಿಗೆ ಪ್ರಿಯವಾದ ಗರಿಕೆ, ಬೇಲದ ಹಣ್ಣು, ಎಕ್ಕದ ಹೂವಿನ ಹಾರಕ್ಕೆ ಮಾರುಕಟ್ಟೆಯಲ್ಲಿ ಹೆಚ್ಚಿನ ಬೇಡಿಕೆ ಇತ್ತು. ಇದರೊಂದಿಗೆ ಬಾಳೆಕಂಬ, ಹೂವಿನ ಹಾರ ಇತ್ಯಾದಿ ಪೂಜಾ ಸಾಮಗ್ರಿಗಳನ್ನು ವಿಶೇಷವಾಗಿ ಖರೀದಿಸುತ್ತಿದ್ದರು. ಮಾರುಕಟ್ಟೆಗೆ ಜನರು ಲಗ್ಗೆ ಇಟ್ಟು, ಹಬ್ಬಕ್ಕೆ ಬೇಕಾಗುವ ಸಾಮಾಗ್ರಿ ಖರೀದಿಸಲು ಮುಗಿ ಬಿದ್ದರು. ದೇವರಾಜ ಮಾರುಕಟ್ಟೆ, ಮಂಡಿ ಮಾರ್ಕೆಟ್, ಅಗ್ರಹಾರದ ವಾಣಿವಿಲಾಸ ಮಾರುಕಟ್ಟೆ, ನಂಜುಮಳಿಗೆ, ಧನ್ವಂತ್ರಿ ರಸ್ತೆ, ಸಯ್ಯಾಜಿರಾವ್ ರಸ್ತೆ, ಅಗ್ರಹಾರ, ಗಾಂಧಿ ವೃತ್ತ, ರೈಲು ನಿಲ್ದಾಣ ಸೇರಿದಂತೆ ನಗರದ ಪ್ರಮುಖ ವೃತ್ತಗಳಲ್ಲಿ ಹಬ್ಬದ ಖರೀದಿ ಭರಾಟೆ ಜೋರಾಗಿ ನಡೆಯಿತು.
ಬೆಲೆ ಏರಿಕೆ: ಕೆಲ ದಿನಗಳ ಹಿಂದಷ್ಟೇ ಕಡಿಮೆ ಇದ್ದ ಅಗತ್ಯವಸ್ತುಗಳ ಬೆಲೆಗಳು ಹಬ್ಬದ ಹಿನ್ನೆಲೆಯಲ್ಲಿ ಏರಿಕೆಯಾಗಿದ್ದವು. ಕಳೆದೊಂದು ತಿಂಗಳಿನಿಂದ ದರ ಏರಿಕೆಯಾಗಿರುವ ಏಲಕ್ಕಿ ಬಾಳೆ ದರ ಹಬ್ಬದ ಹಿನ್ನೆಲೆಯಲ್ಲಿ ಮತ್ತಷ್ಟು ಹೆಚ್ಚಾಗಿದ್ದು, ಕೆಜಿಗೆ ೧೦೦ರಿಂದ ೧೨೦ರವರೆಗೆ ಮಾರಾಟವಾಯಿತು.

ಸೇಬು, ಮೂಸಂಬಿ, ದಾಳಿಂಬೆ ಕಿತ್ತಳೆ, ಫೈನಾಪಲ್, ದ್ರಾಕ್ಷಿ, ಸೀತಾಫಲ ಸೇರಿದಂತೆ ಮೊದಲಾದ ಹಣ್ಣುಗಳ ಬೆಲೆ ಕನಿಷ್ಠ ೩೦ರಿಂದ ೪೦ರೂವರೆಗೆ ಹೆಚ್ಚಾಗಿದೆ. ಸೇವಂತಿಗೆ ಮಾರಿಗೆ ೧೦೦ರಿಂದ ೧೫೦ರೂವರೆಗೆ ಮಾರಾಟವಾದರೆ ಮಲ್ಲಿಗೆ, ಮರಲೆ, ಸುಗಂಧ ರಾಜ, ಕಾಕಡ, ಕನಕಾಂಬರ, ಗುಲಾಬಿ ಹೂ, ಚೆಂಡು ಹೂ, ಮೂರು ರೀತಿಯ ಬಣ್ಣದ ಗಣಗಲೆ ಹೂ ಸೇರಿದಂತೆ ಎಲ್ಲಾ ಹೂಗಳ ದರವೂ ಹೆಚ್ಚಾಗಿದೆ, ಆದರೆ, ತರಕಾರಿ ದರ ಅಷ್ಟಾಗಿ ಹೆಚ್ಚು ಏರಿಕೆಯಾಗಿರಲಿಲ್ಲ. ಈರುಳ್ಳಿ, ಬೆಳ್ಳುಳ್ಳಿ ದರ ಗಗನಕ್ಕೇರಿದೆ.
ಗರಿಕೆ, ಬಿಲ್ವಪತ್ರೆ, ಬಾಳೆಕಂದು, ಮಾವಿನ ಸೊಪ್ಪು, ಬಾಗಿನ ನೀಡಲು ಬೇಕಾದ ಮೊರ, ಬಾಗಿನದ ಸಾಮಾಗ್ರಿಗಳು, ಬಳೆ ಸೇರಿದಂತೆ ಹಬ್ಬಕ್ಕೆ ಬೇಕಾದ ವಸ್ತುಗಳ ಖರೀದಿಯೂ ಜೋರಾಗಿ ನಡೆಯಿತು. ಹೊಸ ಬಟ್ಟೆ ಖರೀದಿಯೂ ಜೋರಾಗಿ ನಡೆದಿದ್ದು, ಪ್ರಭಾ, ಒಲಂಪಿಯಾ ಚಿತ್ರಮಂದಿರದ ಬಳಿ, ಸಯ್ಯಾಜಿರಾವ್ ರಾವ್ ರಸ್ತೆ, ಗಾಂಧಿ ವೃತ್ತ, ಅಗ್ರಹಾರ, ದೇವರಾಜ ಅರಸು ರಸ್ತೆ ಸೇರಿದಂತೆ ನಗರದ ಪ್ರಮುಖ ರಸ್ತೆಗಳ ಬಟ್ಟೆ ಅಂಗಡಿಗಳು ಜನರಿಂದ ತುಂಬಿದ್ದವು.
ನಗರದ ಅಗ್ರಹಾರ, ಇರ್ವಿನ್ ರಸ್ತೆ, ದೇವರಾಜ ಮಾರುಕಟ್ಟೆ, ಒಲಂಪಿಯಾ ಥಿಯೇಟ,ರ್ಗಾಂಧಿ ವೃತ್ತ, ಸೇರಿದಂತೆ ಪ್ರಮುಖ ಸ್ಥಳಗಳಲ್ಲಿ ಗೌರಿ ಗಣೇಶ ಮೂರ್ತಿಗಳ ಖರೀದಿ ಜೋರು.ಮೈಸೂರು ಗೌರಿ, ಬೆಂಗಳೂರು ಗೌರಿ ಮೂರ್ತಿಗಳು ರಾರಾಜಿಸುತ್ತಿದ್ದವು.
