ಮೈಸೂರು : ರಾಜ್ಯವನ್ನೆ ತಲ್ಲಣಗೊಳಿಸಿದ ಭ್ರೂಣ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಸೂರು ತಾಲ್ಲೂಕು ವೈದ್ಯಾಧಿಕಾರಿ ಡಾ. ರಾಜೇಶ್ವರಿ ಮತ್ತು ಈ ಹಿಂದೆ ಕುಟುಂಬ ಯೋಜನಾ ಅಧಿಕಾರಿ ಆಗಿದ್ದ ಡಾ. ರವಿ ಅವರ ಕರ್ತವ್ಯ ಲೋಪ ಎದ್ದು ಕಾಣುತ್ತಿದ್ದು, ಅವರಿಬ್ಬರನ್ನೂ ಅಮಾನತ್ತು ಮಾಡುವಂತೆ ಆದೇಶಿಸಿರುವುದಾಗಿ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದರು
ಮೈಸೂರಿನಲ್ಲಿ ಮಾಧ್ಯಮದವರೊಂದಿಗೆ ಅವರು ಮಾತನಾಡಿ, ಭ್ರೂಣ ಹತ್ಯೆ ಪ್ರಕರಣದಲ್ಲಿ ಆರೋಗ್ಯ ಇಲಾಖೆಯ ಹಲವು ಅಧಿಕಾರಿಗಳ ಲೋಪ ದೋಷ ಎದ್ದು ಕಾಣುತ್ತಿದೆ. ಹತ್ಯೆಯ ಜಾಲ ಪತ್ತೆ ಹಚ್ಚಲು ಸೂಕ್ತ ತನಿಖೆ ಅಗತ್ಯವಾ ಗಿದ್ದು, ಗೃಹ ಸಚಿವರು ಹಾಗೂ ಮುಖ್ಯಮಂತ್ರಿಗಳ ಜೊತೆ ಮಾತನಾಡಿದ್ದೇನೆ. ಯಾವ ರೀತಿಯ ತನಿಖೆ ನಡೆಸಬೇಕು ಎಂಬುದರ ಬಗ್ಗೆ ಸಿಎಂ ನಿರ್ಧರಿಸಲಿದ್ದಾರೆ ಭ್ರೂಣ ಹತ್ಯೆ ಒಂದು ಸಾಮಾಜಿಕ ಪಿಡುಗು. ನಮ್ಮ ಸಮಾಜವೂ ಕೂಡ ಬದಲಾಗಬೇಕು ಎಂದರು.
ಇದಕ್ಕೂ ಮುನ್ನ ಅವರು ಭ್ರೂಣ ಹತ್ಯೆಯ ಕೇಂದ್ರ ಬಿಂದು ಎನಿಸಿದ ಮೈಸೂರಿನ ಮಾತಾ ಆಸ್ಪತ್ರೆ ಬಳಿಗೂ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ವೇಳೆ ತಪ್ಪು ಮಾಹಿತಿ ನೀಡಿದ ಮೈಸೂರು ತಾಲ್ಲೂಕು ವೈದ್ಯಾಧಿಕಾರಿಯನ್ನು ತರಾಟೆಗೆ ತೆಗೆದುಕೊಂಡರು.
ಎಷ್ಟು ವರ್ಷದಿಂದ ಈ ಆಸ್ಪತ್ರೆ ನಡೀತಿದೆ? ಭ್ರೂಣ ಹತ್ಯೆ ನಡೆಯುತ್ತಿವುದು ಏಕೆ ನಿಮ್ಮ ಗಮನಕ್ಕೆ ಬಂದಿಲ್ಲ ಎಂದು ಸಚಿವರು ಕೇಳಿದಾಗ ಎರಡು ವರ್ಷದಿಂದ ಈ ಆಸ್ಪತ್ರೆಯೇ ಇರಲಿಲ್ಲ ಮುಚ್ಚಿತ್ತು ಎಂದು ತಾಲ್ಲೂಕು ವೈದ್ಯಾಧಿಕಾರಿ ತಪ್ಪು ಮಾಹಿತಿ ನೀಡಿದಾಗ ಸ್ಥಳೀಯರಿಂದ ಸಚಿವರು ಮಾಹಿತಿ ಪಡೆದು ಮೂರು ತಿಂಗಳಿಂದ ಆಸ್ಪತ್ರೆ ಮುಚ್ಚಿದೆ. ಮೊದಲು ನಡೆಯುತ್ತಿತ್ತು ಎಂಬ ಮಾಹಿತಿ ಪಡೆದು ಆರೋಗ್ಯ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.