ಮಂಡ್ಯ: ಜಿಲ್ಲೆಯಲ್ಲಿ ಹೆಣ್ಣು ಭ್ರೂಣ ಪತ್ತೆ ಹಾಗೂ ಹತ್ಯೆ ದಂಧೆ ಮುಂದುವರಿದಿದೆ. ಆಲೆಮನೆ, ಹೆಲ್ತ್ ಕ್ವಾಟ್ರಸ್ ಬಳಿಕ ನಾಗಮಂಗಲದ ಮಾವಿನಕೆರೆ ತೋಟದ ಮನೆಯೊಂದರಲ್ಲಿ ಭ್ರೂಣ ಹತ್ಯೆ ದಂಧೆ ಬೆಳಕಿಗೆ ಬಂದಿದೆ.
ಭ್ರೂಣ ಪತ್ತೆ ಮಾಡುತ್ತಿದ್ದ ಮನೆಯ ಮೇಲೆ ಆರೋಗ್ಯ ಇಲಾಖೆ ಅಧಿಕಾರಿ ಡಿಹೆಚ್‍ಒ ಡಾ.ಮೋಹನ್ ನೇತೃತ್ವದಲ್ಲಿ ದಾಳಿ ನಡೆಸಿದ್ದಾರೆ. ದಾಳಿ ವೇಳೆ ಭ್ರೂಣ ಹತ್ಯೆ ಕಿಟ್, ಸ್ಕ್ಯಾನಿಂಗ್ ಯಂತ್ರ ಪತ್ತೆಯಾಗಿದೆ. ಅಲ್ಲದೇ ಭ್ರೂಣ ಲಿಂಗ ಪತ್ತೆಗಾಗಿ ಕರೆತರಲಾಗಿದ್ದ ಹಾಸನ ಮೂಲದ ಗರ್ಭಿಣಿ ಮಹಿಳೆಯನ್ನು ಅಧಿಕಾರಿಗಳು ರಕ್ಷಿಸಿದ್ದಾರೆ.
ದಾಳಿ ವೇಳೆ ಸ್ಕ್ಯಾನಿಂಗ್ ಮಾಡುತ್ತಿದ್ದ ಪ್ರಮುಖ ಆರೋಪಿ ಅಭಿಷೇಕ್ ಪರಾರಿಯಾಗಿದ್ದಾನೆ. ಈ ಪ್ರಕರಣ ಸಂಬಂಧ ಅಧಿಕಾರಿಗಳು ಮನೆಯ ಮಾಲೀಕ ಧನಂಜಯ್, ಆರೋಗ್ಯ ಇಲಾಖೆಯ ಗ್ರೂಪ್ ಡಿ ನೌಕರೆಯೊಬ್ಬಳು ಸೇರಿದಂತೆ, ಗರ್ಭಿಣಿಯ ಪತಿಯನ್ನು ಬಂಧಿಸಿದ್ದಾರೆ.
ಇದೀಗ ಅಕ್ರಮ ಭ್ರೂಣ ಪತ್ತೆ ಕೇಂದ್ರವನ್ನು ಸೀಜ್ ಮಾಡಿದ್ದು, ಸ್ಕ್ಯಾನಿಂಗ್ ಮಷಿನ್ ಸೇರಿದಂತೆ ಹಲವು ವಸ್ತುಗಳನ್ನು ಜಪ್ತಿ ಮಾಡಿದ್ದಾರೆ.
ಪೊಲೀಸರ ಸಹಕಾರದೊಂದಿಗೆ ಮೂವರು ಆರೋಪಿಗಳನ್ನು ಬಂಧಿಸಲಾಗಿದ್ದು ,ನಾಗಮಂಗಲ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.