ಮದ್ದೂರು : ಜನ ಸಾಮಾನ್ಯರ ಸಮಸ್ಯೆ ಆಲಿಸಲು ಕ್ಷೇತ್ರ ಸಂಚಾರ ಮುಂದುವರೆಸಿರುವ ಶಾಸಕ ಕದಲೂರು ಉದಯ್ ಬೆಸಗರಹಳ್ಳಿ ಜಿಲ್ಲಾ ಪಂಚಾಯತಿ ವ್ಯಾಪ್ತಿಯ ವಿವಿಧ ಗ್ರಾಮಗಳಿಗೆ ಭೇಟಿ ನೀಡಿದ್ದರು.
ಮೆಳ್ಳಹಳ್ಳಿ ದೊಡ್ಡಿ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿದ ಶಾಸಕರು ಪರಿಶೀಲಿಸಿದ ಸಂದರ್ಭದಲ್ಲಿ ಅಲ್ಲಿನ ಸ್ವಚ್ಛತೆ ಬಗ್ಗೆ ಪ್ರಶಂಶಿಸಿದರು.
ಆದರೆ ಕೇಂದ್ರದಲ್ಲಿ ವೈದ್ಯರ ಕೊರತೆ ಇರುವ ಬಗ್ಗೆ ಗಮನ ಸೆಳೆದಾಗ ಈ ಬಗ್ಗೆ ತುರ್ತು ಕ್ರಮ ವಹಿಸುವುದಾಗಿ ಭರವಸೆ ನೀಡಿದರು.
ಮುದಗೆರೆ, ಮಾರಸಿಂಗನಹಳ್ಳಿ ಗ್ರಾಮಗಳಲ್ಲಿ ಜನಸಾಮಾನ್ಯರ ಅಹವಾಲು ಆಲಿಸಿದ ಶಾಸಕರಿಗೆ ಕಂದಾಯ ಇಲಾಖೆಯಲ್ಲಿ ಕಡತ ವಿಲೇವಾರಿ ವಿಳಂಬ ಆಗಿರುವ ಬಗ್ಗೆ ದೂರುಗಳು ಕೇಳಿ ಬಂದರೆ, ಹಕ್ಕು ಪತ್ರ ವಿತರಣೆ, ಪೌತಿ ಖಾತೆ. ಸರ್ವೆ ಇತರೆ ಸಮಸ್ಯೆಗಳ ಬಗ್ಗೆ ರೈತರಿಂದ ದೂರುಗಳು ಕೇಳಿ ಬಂದವು.

ಕಡತಗಳ ಶೀಘ್ರ ವಿಲೇವಾರಿ ಸೇರಿದಂತೆ ರೈತರ ಸಮಸ್ಯೆಗಳಿಗೆ ತುರ್ತು ಸ್ಪಂದಿಸುವಂತೆ ಅಧಿಕಾರಿಗಳಿಗೆ ಶಾಸಕರು ಸೂಚಿಸಿದರು.
ಉಪ ವಿಭಾಗಾಧಿಕಾರಿ ಶಿವಮೂರ್ತಿ, ಕಾರ್ಯನಿರ್ವಾಹಕ ಅಧಿಕಾರಿ ಸಂದೀಪ್, ತಾಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕದಲೂರು ರಾಮಕೃಷ್ಣ, ಮುಖಂಡ ಗೋಪಿ ಹಾಜರಿದ್ದರು.