ಉತ್ತರಪ್ರದೇಶ: ಪಟಾಕಿ ಕಾರ್ಖಾನೆಯಲ್ಲಿ ಸಂಭವಿಸಿದ ಭೀಕರ ಸ್ಫೋಟದಲ್ಲಿ ಕಾರ್ಖಾನೆಯ ಬಳಿಯಿದ್ದ ಮನೆಯೊಂದು ಕುಸಿದು ಬಿದ್ದ ಪರಿಣಾಮ ಇಬ್ಬರು ಮಕ್ಕಳು ಸೇರಿ ಐವರು ಮೃತಪಟ್ಟು ಹತ್ತು ಮಂದಿ ಗಾಯಗೊಂಡಿರುವ ಘಟನೆ ಉತ್ತರಪ್ರದೇಶದ ಫಿರೋಜಾಬಾದ್‌ನಲ್ಲಿ ಸೋಮವಾರ ರಾತ್ರಿ ಸಂಭವಿಸಿದೆ.
ಗಾಯಾಳುಗಳನ್ನು ತಕ್ಷಣ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಮೃತಪಟ್ಟವರಲ್ಲಿ 3 ಮತ್ತು ಒಂದೂವರೆ ವರ್ಷದ ಇಬ್ಬರು ಮಕ್ಕಳು ಸೇರಿದ್ದಾರೆ ಎನ್ನಲಾಗಿದೆ. ಸ್ಫೋಟದ ರಭಸಕ್ಕೆ ಮನೆ ಕುಸಿದು ಬಿದ್ದಿದೆ ಹೆಚ್ಚಿನ ಅವಘಡಕ್ಕೆ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಅವಶೇಷಗಳಡಿ ಹಲವರು ಸಿಲುಕಿರುವ ಸಾಧ್ಯತೆಯೂ ಇದೆ ಎನ್ನಲಾಗಿದೆ. ಸ್ಫೋಟದ ತೀವ್ರತೆ ಎಷ್ಟರಮಟ್ಟಿಗಿತ್ತು ಎಂದರೆ ಸಮೀಪದ ಹತ್ತಕ್ಕೂ ಹೆಚ್ಚು ಮನೆಗಳು ಕುಸಿದು ಬಿದ್ದಿವೆ ಎಂದು ಹೇಳಲಾಗಿದೆ.
ಮೃತರನ್ನು ಮೀರಾದೇವಿ (52), ಅಮನ್ (20), ಗೌತಮ್ ಕುಶ್ವಾಹ (18), ಇಚ್ಛಾ ಕುಮಾರಿ (03) ಮತ್ತು ಇಚ್ಚಾ ಅವರ ಸಹೋದರ ಕಾಲು (1.5 ವರ್ಷ) ಎನ್ನಲಾಗಿದೆ.
ಸೋಮವಾರ ರಾತ್ರಿ ಸುಮಾರು 10.30ರ ಸುಮಾರಿಗೆ ಪಟಾಕಿ ಗೋದಾಮಿನಲ್ಲಿ ಸ್ಫೋಟ ಸಂಭವಿಸಿದೆ ಎಂದು ಸ್ಥಳೀಯರು ಹೇಳಿದ್ದಾರೆ. ಸ್ಫೋಟದಿಂದಾಗಿ ಹತ್ತಿರದ ಕಟ್ಟಡದ ಗೋಡೆಗಳು ಕುಸಿದಿವೆ. ಈ ವೇಳೆ ಅಲ್ಲಿ ವಾಸಿಸುತ್ತಿದ್ದ ಒಂದೇ ಕುಟುಂಬದ 7 ಮಂದಿ ಅವಶೇಷಗಳಡಿ ಸಮಾಧಿಯಾಗಿದ್ದಾರೆ.
ಘಟನಾ ಸ್ಥಳದಲ್ಲಿ ರಕ್ಷಣಾ ತಂಡ ಬೀಡುಬಿಟ್ಟಿದೆ ಎಂದು ಡಿಎಂ ರಮೇಶ್ ತಿಳಿಸಿದ್ದಾರೆ. ಗಾಯಾಳುಗಳನ್ನು ಜಿಲ್ಲಾಸ್ಪತ್ರೆ ಹಾಗೂ ಉಪ ಜಿಲ್ಲಾಸ್ಪತ್ರೆಗಳಲ್ಲಿ ರವಾನಿಸಲಾಗಿದೆ. ಘಟನಾ ಸ್ಥಳದಲ್ಲಿ ವೈದ್ಯರ ತಂಡ, ಆಂಬ್ಯುಲೆನ್ಸ್, ಅಗ್ನಿಶಾಮಕ ದಳ, ವಿಪತ್ತು ತಂಡ ನಿಯೋಜನೆಗೊಂಡಿದೆ. ಡಿಎಂ ರಮೇಶ್ ರಂಜನ್, ಎಸ್‌ಎಸ್‌ಪಿ ಸೌರಭ್ ದೀಕ್ಷಿತ್, ಎಡಿಎಂ ವಿಶ್ವ ರಾಜ್ ಕೂಡ ಸ್ಥಳದಲ್ಲಿದ್ದಾರೆ.
ಮಾಹಿತಿ ಪ್ರಕಾರ ಚಂದ್ರಪಾಲ್ ಎಂಬುವವರ ಖಾಲಿ ಮನೆಯನ್ನು ಪಟಾಕಿ ವ್ಯಾಪಾರಿಯೊಬ್ಬರು ಬಾಡಿಗೆಗೆ ಪಡೆದು ಅದೇ ಸ್ಥಳದಲ್ಲಿ ಪಟಾಕಿ ಕಾರ್ಖಾನೆ ನಡೆಸುತ್ತಿದ್ದರು. ಅದರಲ್ಲಿ ಭಾರಿ ಪ್ರಮಾಣದ ಗನ್ ಪೌಡರ್ ಶೇಖರಣೆ ಮಾಡಿ ಇಡಲಾಗಿತ್ತು, ಈ ವೇಳೆ ಏಕಾಏಕಿ ಗನ್ ಪೌಡರ್ ಸ್ಫೋಟಗೊಂಡಿದೆ ಎಂದು ಹೇಳಲಾಗಿದೆ.