ಮೈಸೂರು : ನಗರದಲ್ಲಿ ಪೊಲೀಸ್ ಪೇದೆಯೊಬ್ಬರ ಪುತ್ರ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ದಾರುಣ ಘಟನೆ ಜಲಪುರಿ ಪೊಲೀಸ್ ವಸತಿಗೃಹದಲ್ಲಿ ನಡೆದಿದೆ.
ಪೊಲೀಸ್ ಪಬ್ಲಿಕ್ ಶಾಲೆಯ ಐದನೇ ತರಗತಿ ವಿದ್ಯಾರ್ಥಿ, ದೇಸೀಗೌಡ ಎಂಬವರ ಪುತ್ರ ೧೧ ವರ್ಷದ ಕುಶಾಲ್ ಆತ್ಮಹತ್ಯೆ ಮಾಡಿಕೊಂಡ ಬಾಲಕ. ತಂದೆ ಪೊಲೀಸ್ ಪೇದೆ, ತಾಯಿ ಲಕ್ಷ್ಮಿ ಅವರು ಪೊಲೀಸ್ ಪಬ್ಲಿಕ್ ಶಾಲೆಯಲ್ಲಿ ಯೋಗ ಶಿಕ್ಷಕಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ನಿನ್ನೆ ಮದ್ಯಾಹ್ನ ಶಾಲೆ ಮುಗಿಸಿಕೊಂಡು ಮನೆಗೆ ಹೋಗಿ ಕುಶಾಲ್ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ವೇಳೆ ತಾಯಿ ಲಕ್ಷ್ಮಿ ಅವರು ಇಸ್ಕಾನ್ ದೇವಾಲಯಕ್ಕೆ ಹೋಗಿದ್ದರು. ತಂದೆ ಕೆಲಸಕ್ಕೆ ಹೋಗಿದ್ದರು. ತಾಯಿಯ ದುಪಟ್ಟದಲ್ಲಿ ಕುಶಾಲ್ ನೇಣು ಹಾಕಿಕೊಂಡು ಸಾವನ್ನಪ್ಪಿದ್ದಾನೆ. ತಾಯಿ ದೇವಾಲಯದಿಂದ ಮನೆಗೆ ಬಂದಾಗ ಪ್ರಕರಣ ಬೆಳಕಿಗೆ ಬಂದಿದೆ. ನಂತರ ತಾಯಿಯೇ ಮಗನನ್ನು ಕುಣಿಕೆಯಿಂದ ಇಳಿಸಿ ತಕ್ಷಣ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದರು. ಆದರೆ, ವೈದ್ಯರು ಸಾವಿಗೀಡಾಗಿದ್ದಾನೆಂದು ತಿಳಿಸಿದ್ದಾರೆ. ನಜರ್ ಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.