ಶಿವಮೊಗ್ಗ: ಬಾಲಕಾರ್ಮಿಕರ ನೇಮಕಾತಿ ನಿರ್ಮೂಲನೆ ಕಾರ್ಯ ಆಗಬೇಕು. ಈ ಕಾರ್ಯಾಚರಣೆ ಕೇವಲ ನಗರ ಪ್ರದೇಶಕ್ಕೆ ಸೀಮಿತವಾಗದೆ ಗ್ರಾಮೀಣ ಭಾಗದಲ್ಲಿ ಹೆಚ್ಚಿನ ಪ್ರಕರಣಗಳನ್ನು ದಾಖಲಿಸಬೇಕು ಎಂದು ಜಿಲ್ಲಾಧಿಕಾರಿ ಗುಟುದತ್ತ ಹೆಗಡೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜೂ.1ರಂದು ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಜಿಲ್ಲಾ ಕಾರ್ಯಕಾರಿ ಸಮಿತಿ, ಜಿಲ್ಲಾ ಮಟ್ಟದ ಸಲಹಾ ಸಮಿತಿ ಹಾಗೂ ಜಿಲ್ಲಾ ಮಟ್ಟದ ಕಾರ್ಯಪಡೆ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಯಾವ್ಯಾವ ಕೇಂದ್ರಗಳಲ್ಲಿ ಬಾಲಕಾರ್ಮಿಕರು ಹೆಚ್ಚು ಇದ್ದಾರೆ ಎಂಬುದನ್ನು ಪತ್ತೆ ಹಚ್ಚಬೇಕು. ಸಂಬಂಧಪಟ್ಟ ಅಧಿಕಾರಿಗಳು ಜವಾಬ್ದಾರಿಯಿಂದ ಮಕ್ಕಳ ರಕ್ಷಣೆ ಮಾಡಬೇಕು ಹಾಗೂ ಬಾಲಕಾರ್ಮಿಕರನ್ನು ಹೊಂದಿರುವ ಮಾಲೀಕರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು.
ಶಾಲೆ ಬಿಟ್ಟ ಮಕ್ಕಳ ಮೇಲೆ ನಿಗಾ ಇಡಬೇಕು. ಪ್ರತಿ ತಿಂಗಳು ಮಕ್ಕಳ ಹಾಜರಾತಿ ಪರಿಶೀಲನೆ ನಡೆಸಿ ಬಾಲಕಾರ್ಮಿಕರಿಗೆ ಮೊದಲ ಆದ್ಯತೆ ನೀಡಬೇಕು. ಬಸ್ ನಿಲ್ದಾಣ, ರೈಲು ನಿಲ್ದಾಣ, ಗ್ರಾಮಗಳಲ್ಲಿನ ಹೋಟೆಲ್‌ಗಳು, ಗ್ರಾಮಗಳಲ್ಲಿ ಕೃಷಿ ಚಟುವಟಿಕೆ ಪ್ರದೇಶಗಳನ್ನು ತಪಾಸಣೆ ಮಾಡುವ ಮೂಲಕ ಮಕ್ಕಳ ರಕ್ಷಣಾ ಕಾರ್ಯ ಮಾಡಬೇಕು. ತಾಲೂಕು ಮಟ್ಟದಲ್ಲಿ ಸ್ವಯಂ ಸೇವಾ ಸಂಸ್ಥೆಗಳೊಂದಿಗೆ ಜಂಟಿ ತಪಾಸಣೆ ನಡೆಸುವಂತೆ ಸೂಚನೆ ನೀಡಿದರು.
ಜಿಲ್ಲೆಯಲ್ಲಿ ಇ-ಶ್ರಮ ಯೋಜನೆಯಡಿ ನೋಂದಣಿಯಾಗಿರುವ 3,14,610 ಅಸಂಘಟಿತ ಕಾರ್ಮಿಕರು, 3,14,610 ಅಸಂಘಟಿತ ಕಾರ್ಮಿಕರ ಸಮಗ್ರ ರಾಷ್ಟ್ರೀಯ ಮಾಹಿತಿ ಸಂಗ್ರಹ (ಇ-ಶ್ರಮ) ಕುರಿತು ಪ್ರಗತಿ ಪರಿಶೀಲನೆ, ಹೆಚ್ಚಿನ ಗುರಿ ತಲುಪಲು ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು. ಸಭೆಯಲ್ಲಿ ಐಎಎಸ್ ಪ್ರೊಬೇಷನರಿ ಅಧಿಕಾರಿ ಜೈಸ್ವಾಲ್ ಶಿವಮೊಗ್ಗ ಉಪವಿಭಾಗದ ಉಪವಿಭಾಗಾಧಿಕಾರಿ ಸತ್ಯನಾರಾಯಣ್, ಜಿಲ್ಲಾ ಕಾರ್ಮಿಕ ಅಧಿಕಾರಿ ವೇಣುಗೋಪಾಲ್ ಎಂ.ಪಿ, ಕಾರ್ಮಿಕ ಇಲಾಖೆ ಯೋಜನಾ ನಿರ್ದೇಶಕ ರಘುನಾಥ್, ಕಾರ್ಮಿಕ ನಿರೀಕ್ಷಕ ಭೂಮೇಶ್, ಸುಕಿತಾ, ಶಿಲ್ಪಾ, ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.