ಬೆಂಗಳೂರು: ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಹುದ್ದೆಗಳ ನೇಮಕಾತಿಗೆ ಜ.23ರಂದು ನಡೆಸಿದ್ದ ಮರುಪರೀಕ್ಷೆಗೆ ಹಾಜರಾಗಿದ್ದ ಅಭ್ಯರ್ಥಿಗಳು ಪತ್ರಿಕೆ-1 ಮತ್ತು 2ರಲ್ಲಿ ಗಳಿಸಿರುವ ಅಂಕಗಳ ಅಂತಿಮ ಪಟ್ಟಿಯನ್ನು ಪ್ರಕಟಿಸಲಾಗಿದೆ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕಿ ಎಸ್.ರಮ್ಯಾ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಒಟ್ಟು 545 ಪಿಎಸ್‍ಐ ಹುದ್ದೆಗಳ ನೇಮಕಕ್ಕೆ ಕೆಇಎ ಮರು ಪರೀಕ್ಷೆ ನಡೆಸಿತ್ತು. ಅಭ್ಯರ್ಥಿಗಳು ಪಡೆದ ಅಂಕಗಳ ಮಾಹಿತಿಯನ್ನು ಸದ್ಯದಲ್ಲೇ ಗೃಹ ಇಲಾಖೆಗೆ ಸಲ್ಲಿಸಲಾಗುತ್ತದೆ. ಅದರ ನಂತರ ರೋಸ್ಟರ್ ಆಧಾರದ ಮೇಲೆ ಆಯ್ಕೆ ಪಟ್ಟಿಯನ್ನು ಅವರು ಪ್ರಕಟಿಸಲಿದ್ದಾರೆ.
ಸಿಇಟಿ; ಅರ್ಜಿ ಸಲ್ಲಿಕೆಗೆ ಮತ್ತೊಂದು ಅವಕಾಶ :
ಏ.18 ಮತ್ತು 19ರಂದು ನಡೆಸಲು ಉದ್ದೇಶಿಸಿರುವ ಸಿಇಟಿ ಪರೀಕ್ಷೆಗೆ ಆನ್‍ಲೈನ್ ಅರ್ಜಿ ಸಲ್ಲಿಸಲು ಮಾ. 30ರ ಬೆಳಿಗ್ಗೆ 11 ಗಂಟೆಯಿಂದ ಏ.1ರ ಸಂಜೆ 4 ಗಂಟೆಯವರೆಗೆ ಮತ್ತೊಂದು ಅವಕಾಶ ಕೊಡಲಾಗಿದೆ. ಅರ್ಜಿ ಸಲ್ಲಿಸುವವರು ಏ.1ರ ರಾತ್ರಿ 8 ಗಂಟೆಯವರೆಗೂ ಶುಲ್ಕ ಪಾವತಿಸಬಹುದು. ಈ ಅವಕಾಶವನ್ನು ಬಳಸಿಕೊಳ್ಳುವ ವಿದ್ಯಾರ್ಥಿಗಳಿಗೆ ಬೆಂಗಳೂರಿನ ಕೇಂದ್ರಗಳಲ್ಲಿ ಮಾತ್ರ ಪರೀಕ್ಷೆ ಬರೆಯಲು ಅವಕಾಶ ಮಾಡಿಕೊಡಲಾಗುವುದು. ಈ ವಿಷಯದಲ್ಲಿ ಯಾವುದೇ ತಕರಾರುಗಳಿಗೆ ಅವಕಾಶವಿರುವುದಿಲ್ಲ ಎಂದು ಅವರು ತಿಳಿಸಿದ್ದಾರೆ.